ಎನರ್ಜಿ ಕ್ಯಾಲ್ಕ್ಯುಲೇಟರ್ ಬಿಡುಗಡೆ

7

ಎನರ್ಜಿ ಕ್ಯಾಲ್ಕ್ಯುಲೇಟರ್ ಬಿಡುಗಡೆ

Published:
Updated:

ಬೆಂಗಳೂರು: ಬ್ರಿಟಿಷ್‌ ಸರ್ಕಾರದ ಸಹಯೋಗದಲ್ಲಿ ಸಿದ್ಧಪಡಿಸಿರುವ ‘ಕರ್ನಾಟಕ ಸ್ಟೇಟ್ ಎನರ್ಜಿ ಕ್ಯಾಲ್ಕ್ಯುಲೇಟರ್ –2050’ ವೆಬ್ ಟೂಲ್ ಅನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗುರುವಾರ ಬಿಡುಗಡೆ ಮಾಡಿದರು.

2015ರಲ್ಲಿ ಬ್ರಿಟಿಷ್‌ ಸಹಯೋಗದಲ್ಲಿ ನೀತಿ ಆಯೋಗ ಅಭಿವೃದ್ದಿಪಡಿಸಿದ ‘ಇಂಡಿಯಾ ಎನರ್ಜಿ ಸೆಕ್ಯುರಿಟಿ ಸಿನಾರಿಯೊ –2047’ ವೆಬ್ ಟೂಲ್‍ ಮಾದರಿಯಲ್ಲಿ ಈ ಕ್ಯಾಲ್ಕ್ಯುಲೇಟರ್ ರೂಪಿಸಲಾಗಿದೆ. ಈ ಸಂದರ್ಭದಲ್ಲಿ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಡಾಮಿನಿಕ್ ಆಸ್ಕ್ವಿತ್ ಕೆಸಿಎಂಜಿ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಬ್ರಿಟಿಷ್ ಹೈಕಮಿಷನರ್, ‘ಹವಾಮಾನ ವೈಪರೀತ್ಯ ಕಾರಣ ಇಂಧನ ಬಳಕೆ, ಇಂಗಾಲದ ಹೆಜ್ಜೆ ಗುರುತು ಲೆಕ್ಕ ಹಾಕಲು ಅನುಕೂಲವಾಗಲಿದೆ. ಅಲ್ಲದೆ, ಇಂಧನ ಭದ್ರತೆ, ಇಂಧನ ಬಳಕೆ ಕುರಿತ ಯೋಜನೆ ರೂಪಿಸಲು ಅನುಕೂಲವಾಗಲಿದೆ. ಕರ್ನಾಟಕದ ಅಗತ್ಯಕ್ಕೆ ತಕ್ಕಂತೆ ಇದನ್ನು ರೂಪಿಸಲಾಗಿದೆ’ ಎಂದರು. 

‘ಆಂಧ್ರಪ್ರದೇಶ, ಗುಜರಾತ್ ಹಾಗೂ ಅಸ್ಸಾಂ ರಾಜ್ಯಗಳ ನಂತರ ಎನರ್ಜಿ ಕ್ಯಾಲ್ಕ್ಯುಲೇಟರ್ ರೂಪಿಸಿದ ನಾಲ್ಕನೇ ರಾಜ್ಯ ಕರ್ನಾಟಕ. ಮಹಾರಾಷ್ಟ್ರ, ತಮಿಳು‌ನಾಡು ರಾಜ್ಯಗಳಲ್ಲಿಯೂ ಎನರ್ಜಿ ಕ್ಯಾಲ್ಕ್ಯುಲೇಟರ್ ಸಿದ್ಧವಾಗುತ್ತಿದೆ’ ಎಂದರು.

ಪಾವಗಡದಲ್ಲಿ ಸ್ಥಾಪಿಸಲಾಗಿರುವ ಸೋಲಾರ್‍ ಪಾರ್ಕ್‍ನಲ್ಲಿ ಬ್ರಿಟಿಷ್‌ ಸಹಭಾಗಿತ್ವವನ್ನು ನೆನಪಿಸಿಕೊಂಡ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳಿಗೆ ಕೈಜೋಡಿಸುವ ಭರವಸೆ ನೀಡಿದರು.

ಬ್ರಿಟಿಷ್ ಕೌನ್ಸಿಲ್‍ನ 70ನೇ ವರ್ಷಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಇಂಗ್ಲೆಂಡ್‌ನಲ್ಲಿ ಒಂದು ವರ್ಷದ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತಶಾಸ್ತ್ರ) ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್‍ಗಾಗಿ ವಿದ್ಯಾರ್ಥಿ ವೇತನ ನೀಡುವ ಯೋಜನೆಯಡಿ ಆಯ್ಕೆಯಾದ 100 ಅಭ್ಯರ್ಥಿಗಳಲ್ಲಿ 15 ಮಹಿಳೆಯರು ರಾಜ್ಯದವರು. ಈ ಮಹಿಳೆಯರನ್ನು ಕುಮಾರ ಸ್ವಾಮಿ ಅಭಿನಂದಿಸಿದರು.

ಬೆಂಗಳೂರಿನಲ್ಲಿರುವ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಡಾಮಿನಿಕ್ ಮ್ಯಾಕ್‍ ಅಲಿಸ್ಟರ್, ಬ್ರಿಟಿಷ್ ಕೌನ್ಸಿಲ್‍ನ ಅಧಿಕಾರಿಗಳು, ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರವಿಕುಮಾರ್, ಮುಖ್ಯಮಂತ್ರಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣರೆಡ್ಡಿ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !