ಸೋಮವಾರ, ಸೆಪ್ಟೆಂಬರ್ 28, 2020
28 °C

ಸ್ಕಿಮ್ಮಿಂಗ್ ಮಷಿನ್ ಅಳವಡಿಸಿ ಮಾಹಿತಿ ಕಳವು: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಷಿನ್ ಅಳವಡಿಸಿ ಬಳಕೆದಾರರ ಬ್ಯಾಂಕ್ ಖಾತೆಯ ಮಾಹಿತಿ ಕದಿಯುತ್ತಿದ್ದ ಚಿಲಿ ದೇಶದ ಇಬ್ಬರನ್ನು ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗೋನ್ ಜಾಲೊ ರಫೆಲ್ (32) ಮತ್ತು ಆತನ ಸ್ನೇಹಿತ ಆಂಜೆಲೊ ಮ್ಯಾನುವೆಲ್‌(27) ಬಂಧಿತರು. ಮೂರು ತಿಂಗಳ ಪ್ರವಾಸಿ ವಿಸಾದಲ್ಲಿ ಇಬ್ಬರೂ ಸ್ಯಾಂಟಿಯಾಗೊ ನಗರದಿಂದ ಬೆಂಗಳೂರಿಗೆ ಬಂದಿದ್ದರು. ಕಬ್ಬನ್ ಪಾರ್ಕ್ ಸುತ್ತಮುತ್ತಲಿನ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಷಿನ್ ಅಳವಡಿಸಿ ಬ್ಯಾಂಕ್ ಖಾತೆಯ ಮಾಹಿತಿ ಕದ್ದ ಬಳಿಕ ಅದನ್ನು ಕಂಪ್ಯೂಟರ್ ಮುಖಾಂತರ ನಕಲು ಮಾಡಿ ಹಣ ಡ್ರಾ ಮಾಡುತ್ತಿದ್ದರು.

ಕಬ್ಬನ್ ಪಾರ್ಕ್ ಪೊಲೀಸ್‌ ಠಾಣೆಯ ಕಾನ್‌ಸ್ಟೆಬಲ್‌ ಚಂದ್ರಶೇಖರ್ ಎಂಬುವವರು ಜುಲೈ 6ರಂದು ಲ್ಯಾವಲ್ಲೆ ರಸ್ತೆಯ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು. ಆದರೆ, ಅವರು ಡ್ರಾ ಮಾಡಿದ ಹಣ ಅಲ್ಲದೆ, ₹ 37 ಸಾವಿರ ಡ್ರಾ ಮಾಡಿರುವುದಾಗಿ ಸಂದೇಶ‌ ಬಂದಿತ್ತು. ಈ ಬಗ್ಗೆ ತಮ್ಮದೇ ಠಾಣೆಯಲ್ಲಿ ಅವರು ದೂರು ದಾಖಲಿಸಿದ್ದರು.

ಪೊಲೀಸರು ತನಿಖೆ ನಡೆಸುತ್ತಿರುವ ಮಾಹಿತಿ ಅರಿತ ಖದೀಮರು, ಕೋರಮಂಗಲದ ಕಡೆ ತೆರಳಿ, ತಿಲಕನಗರದಲ್ಲಿರುವ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಮಷಿನ್‌ ಅಳವಡಿಸಿದ್ದರು. ಆದರೆ, ಮಷಿನ್‌ ಅಳವಡಿಸಿದ ಕೆಲಹೊತ್ತಿನ ಬಳಿಕ ಎಟಿಎಂಗೆ ಹಣ ತುಂಬಲು ಬಂದಿದ್ದ ಸಿಬ್ಬಂದಿಗೆ ವಿಷಯ ಗೊತ್ತಾಗಿ, ತಿಲಕನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಕಿಮ್ಮಿಂಗ್ ಮಷಿನ್ ತೆಗೆಯಲು ಬರುವುದನ್ನೇ ಕಾಯುತ್ತಿದ್ದ ‌ಪೊಲೀಸರು, ಈ ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕೃತ್ಯದಲ್ಲಿ ಹಲವು ಖದೀಮರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.