ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕೂಗು ವಿರುದ್ಧದ ಅರ್ಜಿದಾರರನ್ನೇ ಕೈಬಿಟ್ಟ ಹೈಕೋರ್ಟ್‌

ಸ್ವಯಂ ಪ್ರೆರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಾಗಿ ಮಾರ್ಪಡಿಸಲು ಆದೇಶ
Last Updated 15 ಅಕ್ಟೋಬರ್ 2020, 20:24 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ಕೂಗು ಯೋಜನೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು(ಪಿಐಎಲ್‌) ಹೈಕೋರ್ಟ್ ಸ್ವಯಂ ಪ್ರೇರಿತ ಅರ್ಜಿಯನ್ನಾಗಿ ಮಾರ್ಪಡಿಸಿ ಆದೇಶಿಸಿದೆ.

ಮೂಲ ಅರ್ಜಿದಾರರಾದ ವಕೀಲ ಎ.ವಿ. ಅಮರನಾಥ್ ಅವರು ಡಿಸ್ಕವರಿ ವಾಹಿನಿಗೆ ನೋಟಿಸ್ ನೀಡಿ, ಕಾವೇರಿ ಕೂಗು ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆಯಾಗಲಿದೆ ಎಂದು ತಿಳಿಸಿದ್ದರು. ಅದನ್ನು ಸಮರ್ಥಿಸಿಕೊಂಡ ಕಾರಣಕ್ಕೆ ಅವರನ್ನು ವಿಚಾರಣೆಯಿಂದ ನ್ಯಾಯಾಲಯ ಕೈಬಿಟ್ಟಿದೆ.

ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ಅಮಿಕಸ್‌ ಕ್ಯೂರಿ(ನ್ಯಾಯಾಲಯಕ್ಕೆ ಸಹಕರಿಸುವ ವಕೀಲರು) ಒಬ್ಬರನ್ನು ನೇಮಕ ಮಾಡಲು ಆದೇಶಿಸಿತು.

’ಡಿಸ್ಕವರಿ ವಾಹಿನಿಗೆ ನೋಟಿಸ್ ನೀಡಿ ಕಾರ್ಯಕ್ರಮ ಪ್ರಸಾರ ಮಾಡದಂತೆ ಅರ್ಜಿದಾರರು ಬೆದರಿಕೆ ಹಾಕಿದ್ದಾರೆ’ ಎಂದು ಕಾವೇರಿ ಕೂಗು ಕಾರ್ಯಕ್ರಮದ ಆಯೋಜಕರಾದ ಈಶ ಔಟ್‌ರಿಚ್‌ ಪರ ವಕೀಲರು ವಾದಿಸಿದರು.

ಈ ಸಂಬಂಧ ಅಫಿಡವಿಟ್ ಸಲ್ಲಿಸುವಂತೆ ಅಮರನಾಥ್ ಅವರಿಗೆ ಪೀಠ ಸೂಚಿಸಿತ್ತು. ಅಫಿಡವಿಟ್ ಸಲ್ಲಿಸಿದ್ದ ಅವರು, ‘ಟಿವಿ ವಾಹಿನಿಗೆ ಬೆದರಿಕೆ ಹಾಕಿಲ್ಲ, ವಿಷಯ ನ್ಯಾಯಾಲಯದಲ್ಲಿ ಇರುವ ಕಾರಣ ಕಾರ್ಯಕ್ರಮ ಪ್ರಸಾರ ಮಾಡಿದರೆ ನ್ಯಾಯಾಂಗ ನಿಂದನೆಯಾಗಲಿದೆ ಎಂಬ ವಿಷಯವನ್ನಷ್ಟೇ ತಿಳಿಸಿದ್ದೆ’ ಎಂದು ವಿವರಿಸಿದ್ದರು.

‘ಅರ್ಜಿದಾರರ ಈ ಸಮಜಾಯಿಷಿಯನ್ನು ಒಪ್ಪದ ನ್ಯಾಯಾಲಯ, ಕಾರ್ಯಕ್ರಮ ಪ್ರಸಾರ ಮಾಡುವುದು ನ್ಯಾಯಾಂಗ ನಿಂದನೆಗೆ ಕಾರಣವಾಗಲಿದೆ ಎಂಬುದನ್ನು ಅರ್ಜಿದಾರರೇ ನಿರ್ಧರಿಸಲು ಆಗುವುದಿಲ್ಲ. ಅರ್ಜಿದಾರರು ತಮ್ಮ ತಪ್ಪಿಗೆ ಪಶ್ಚಾತಾಪ ವ್ಯಕ್ತಪಡಿಸುತ್ತಾರೆ ಎಂದು ನಿರೀಕ್ಷಿಸಿದ್ದೆವು. ಎರಡನೇ ಬಾರಿಯೂ ತಮ್ಮ ನಡವಳಿಕೆ ಸಮರ್ಥಿಸಿಕೊಂಡಿದ್ದಾರೆ. ಆದ್ದರಿಂದ ಪಿಐಎಲ್ ಪರವಾದ ವ್ಯಕ್ತಿ ಎಂದು ಪರಿಗಣಿಸಲು ಆಗುವುದಿಲ್ಲ’ ಎಂದು ಪೀಠ ಅಭಿಪ್ರಾಯಪಟ್ಟಿತು. ವಿಚಾರಣೆಯನ್ನು ನವೆಂಬರ್ 3ಕ್ಕೆ ಮುಂದೂಡಿತು.

‘ಕಾವೇರಿ ಜಲಾನಯನ ಪ್ರದೇಶದಲ್ಲಿ 253 ಕೋಟಿ ಸಸಿಗಳನ್ನು ನೆಡುವ ಉದ್ದೇಶಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಅನುಮತಿ ನೀಡಿವೆ ಎಂದು ಈಶಾ ಫೌಂಡೇಷನ್‌ನ ಜಗ್ಗಿ ವಾಸುದೇವ್ ಅವರು ಸುಳ್ಳು ಹೇಳಿಕೊಂಡಿದ್ದಾರೆ’ ಎಂದು ಅಮರನಾಥ್ ಅವರು ಪಿಐಎಲ್ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT