ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಡಿ ಕರೆ ಮಾರ್ಪಾಡು; ನಾಲ್ವರನ್ನು ವಶಕ್ಕೆ ಪಡೆದ ಸಿಸಿಬಿ

Last Updated 14 ಜೂನ್ 2021, 5:56 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್‌ಡಿ) ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡಿಸಿ ದೇಶದ ಭದ್ರತೆಗೆ ಧಕ್ಕೆ ತರುತ್ತ ಕೇಂದ್ರ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಸೇನೆಯ ಗುಪ್ತಚರ ವಿಭಾಗ ನೀಡಿದ್ದ ಮಾಹಿತಿ ಆಧರಿಸಿ ಬಿಟಿಎಂ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಭಯೋತ್ಪಾದನಾ ನಿಗ್ರಹ ವಿಭಾಗದ (ಎಟಿಸಿ) ಅಧಿಕಾರಿಗಳು, ಕೇರಳದ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ಗೌತಮ್ (27) ಎಂಬುವರನ್ನು ಬಂಧಿಸಿದ್ದರು. ಅವರಿಂದ 900 ಸಿಮ್‌ ಕಾರ್ಡ್ ಸಮೇತ ಎಫ್‌ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್ ಜಪ್ತಿ ಮಾಡಿದ್ದಾರೆ.

ಅವರಿಬ್ಬರು ನೀಡಿದ್ದ ಮಾಹಿತಿ ಆಧರಿಸಿ ನಾಲ್ವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

‘ಯುಎಇ, ಪಾಕಿಸ್ತಾನ ಹಾಗೂ ಇತರೆ ದೇಶಗಳಿಂದ ಬರುತ್ತಿದ್ದ ಐಎಸ್‌ಡಿ ಕರೆಗಳನ್ನು ಆರೋಪಿಗಳು ಸ್ಥಳೀಯ ಕರೆಗಳನ್ನಾಗಿ ಮಾರ್ಪಡಿಸುತ್ತಿದ್ದರು. ಇದಕ್ಕೆ ಅಗತ್ಯವಾದ ಸ್ಥಳೀಯ ವಿಳಾಸದ ಸಿಮ್‌ ಕಾರ್ಡ್‌ಗಳು ಕೋರಿಯರ್ ಮೂಲಕ ಆರೋಪಿಗಳ ಕೈಗೆ ಸಿಗುತ್ತಿದ್ದವು. ಕೋರಿಯರ್ ಕಳುಹಿಸುತ್ತಿದ್ದ ಇಬ್ಬರು ಸೇರಿ ನಾಲ್ವರಿಂದ ಸಿಸಿಬಿ ಮಾಹಿತಿ ಕಲೆಹಾಕುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಬಂಧಿತ ಆರೋಪಿಗಳು ವಾಸವಿದ್ದ ಮನೆ ಹಾಗೂ ಕೃತ್ಯಕ್ಕಾಗಿ ಬಾಡಿಗೆ ಪಡೆದಿದ್ದ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸಿಮ್‌ಕಾರ್ಡ್‌ಗಳು, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT