ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ ಪ್ರಕ್ರಿಯೆ, ಸಭೆಗಳಿಗೆ ಸಮ್ಮತಿ: ರಾಜ್ಯದಲ್ಲಿ ನೀತಿಸಂಹಿತೆ ಸಡಿಲಿಕೆ

Published 18 ಮೇ 2024, 16:01 IST
Last Updated 18 ಮೇ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿಗಳು, ಸರಕು ಮತ್ತು ಸೇವೆಗಳ ಖರೀದಿಗೆ ಟೆಂಡರ್‌ ಪ್ರಕ್ರಿಯೆ ನಡೆಸಲು ಚುನಾವಣಾ ನೀತಿಸಂಹಿತೆಯಿಂದ ವಿನಾಯಿತಿ ನೀಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ಮುಖ್ಯಮಂತ್ರಿ ಹಾಗೂ ಸಚಿವರು ಬರ ಪರಿಹಾರ ಮತ್ತು ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದ ಸಭೆಗಳನ್ನು ನಡೆಸುವುದಕ್ಕೂ ಆಯೋಗ ಸಮ್ಮತಿ ನೀಡಿದೆ. ನಿಗಮ, ಮಂಡಳಿಗಳು, ಸಮಿತಿಗಳು, ಸ್ಥಳೀಯ ಸಂಸ್ಥೆಗಳಲ್ಲಿ ಸಭೆಗಳನ್ನು ನಡೆಸುವುದಕ್ಕೂ ಒಪ್ಪಿಗೆ ಸೂಚಿಸಿದೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮತದಾನ ಪೂರ್ಣಗೊಂಡಿರುವುದರಿಂದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆ ನಡೆಸುವುದು, ಮುಖ್ಯಮಂತ್ರಿ ಹಾಗೂ ಸಚಿವರು ವಿಪತ್ತು ಪರಿಹಾರಕ್ಕೆ ಸಂಬಂಧಿಸಿದ ಸಭೆಗಳನ್ನು ನಡೆಸುವುದು, ನಿಗಮ, ಮಂಡಳಿ, ಸ್ಥಳೀಯ ಸಂಸ್ಥೆಗಳಲ್ಲಿ ಸಭೆಗಳನ್ನು ನಡೆಸುವುದಕ್ಕೆ ನೀತಿ ಸಂಹಿತೆಯಿಂದ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯು ಮೇ 8ರಂದು ಕೇಂದ್ರ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿತ್ತು.

ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್‌ ಅವರಿಗೆ ಗುರುವಾರ ಪತ್ರ ಬರೆದಿರುವ ಆಯೋಗವು, ‘ಈ ವಿಚಾರಗಳಲ್ಲಿ ಯಾರಿಗೂ ರಾಜಕೀಯ ಲಾಭಕ್ಕೆ ಅವಕಾಶವಿಲ್ಲದಂತೆ ನಿರ್ಣಯ ತೆಗೆದುಕೊಳ್ಳಲು ನೀತಿಸಂಹಿತೆಯಿಂದ ವಿನಾಯಿತಿ ನೀಡಲು ಅಭ್ಯಂತರವಿಲ್ಲ’ ಎಂದು ತಿಳಿಸಿದೆ.

ಕೇಂದ್ರ ಚುನಾವಣಾ ಆಯೋಗವು ವಿಧಿಸಿರುವ ಷರತ್ತಿನಂತೆ ಟೆಂಡರ್‌ ಆಹ್ವಾನಿಸುವುದು, ಟೆಂಡರ್‌ಗಳ ಮೌಲ್ಯಮಾಪನ, ಟೆಂಡರ್‌ ಅಂತಿಮಗೊಳಿಸುವುದು ಹಾಗೂ ಕಾರ್ಯಾದೇಶ ನೀಡುವ ಕೆಲಸಗಳನ್ನು ಮಾಡಬಹುದು ಎಂದು ಮುಖ್ಯ ಕಾರ್ಯದರ್ಶಿ ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.

ಬರ ಪರಿಹಾರ ಹಾಗೂ ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಸಚಿವರು ಚುನಾವಣಾ ಆಯೋಗದ ಷರತ್ತಿನ ವ್ಯಾಪ್ತಿಯಲ್ಲಿ ಸಭೆ ನಡೆಸುವುದಕ್ಕೆ ಅವಕಾಶ ಕಲ್ಪಿಸಿ ಸುತ್ತೋಲೆ ಹೊರಡಿಸಲಾಗಿದೆ. ಮತ್ತೊಂದು ಪ್ರತ್ಯೇಕ ಸುತ್ತೋಲೆ ಹೊರಡಿಸಿರುವ ಮುಖ್ಯ ಕಾರ್ಯದರ್ಶಿ, ನಿಗಮ, ಮಂಡಳಿ, ಸಮಿತಿ, ಸ್ಥಳೀಯ ಸಂಸ್ಥೆಗಳು ಮತ್ತು ಇತರ ಶಾಸನಾತ್ಮಕ ಸಂಸ್ಥೆಗಳಲ್ಲಿ ಶಾಸನಬದ್ಧ ಸಭೆಗಳನ್ನು ಆಯೋಗದ ಷರತ್ತಿನ ವ್ಯಾಪ್ತಿಯಲ್ಲಿ ನಡೆಸಬಹುದು ಎಂದು ಸೂಚಿಸಿದ್ದಾರೆ.

ಟೆಂಡರ್‌ ಪ್ರಕ್ರಿಯೆಗೆ ಚುರುಕು: ಲೋಕೋಪಯೋಗಿ, ಜಲ ಸಂಪನ್ಮೂಲ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ನಗರಾಭಿವೃದ್ಧಿ ಸೇರಿದಂತೆ ರಾಜ್ಯದ ಸರ್ಕಾರದ ಹಲವು ಇಲಾಖೆಗಳು ಲೋಕಸಭಾ ಚುನಾವಣಾ ನೀತಿಸಂಹಿತೆ ಜಾರಿಯಾಗುವ ಮುನ್ನ ಸಾವಿರಾರು ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಆರಂಭಿಸಿದ್ದವು. ನೀತಿಸಂಹಿತೆ ಜಾರಿಯಾದ ಬಳಿಕ ಟೆಂಡರ್‌ ಪ್ರಕ್ರಿಯೆಗಳನ್ನು ಯಥಾಸ್ಥಿತಿಯಲ್ಲಿ ಸ್ಥಗಿತಗೊಳಿಸಲಾಗಿತ್ತು.

ಆಯೋಗವು ನೀತಿಸಂಹಿತೆ ಸಡಿಲಿಕೆಗೆ ಒಪ್ಪಿಗೆ ಸೂಚಿಸಿರುವುದರಿಂದ ಎಲ್ಲ ಇಲಾಖೆಗಳಲ್ಲೂ ಸೋಮವಾರದಿಂದ ಟೆಂಡರ್‌ ಪ್ರಕ್ರಿಯೆಗಳು ಚುರುಕಾಗಲಿವೆ. ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುವ ವೇಳೆಗೆ ಈ ಟೆಂಡರ್‌ ಪ್ರಕ್ರಿಯೆಗಳು ಅಂತಿಮ ಹಂತ ತಲುಪುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT