ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಜಿಎಚ್‌ಎಸ್‌: ನಗದುರಹಿತ ಸೇವೆ ರದ್ದಾಗುವ ಆತಂಕ ದೂರ

ಪ್ಯಾಕೇಜ್ ದರಗಳ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಸೂಚನೆ
Last Updated 7 ಮಾರ್ಚ್ 2020, 22:01 IST
ಅಕ್ಷರ ಗಾತ್ರ

ಬೆಂಗಳೂರು: ಆರೋಗ್ಯ ಯೋಜನೆಗಳಡಿ ಬಾಕಿ ಉಳಿಸಿಕೊಂಡಿದ್ದ ₹ 200 ಕೋಟಿ ಮೊತ್ತವನ್ನು ನಗರದ ಖಾಸಗಿ ಆಸ್ಪತ್ರೆಗಳಿಗೆಕೇಂದ್ರ ಸರ್ಕಾರವು ಪಾವತಿಸಿದೆ. ಇದರಿಂದಾಗಿನಗದುರಹಿತ ವೈದ್ಯಕೀಯ ಸೇವೆ ರದ್ದಾಗುವ ಆತಂಕ ದೂರಾಗಿದೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್‌) ಹಾಗೂ ಮಾಜಿ ಸೈನಿಕರ ನೆರವಿನ ಆರೋಗ್ಯ ಯೋಜನೆಯಡಿ (ಇಸಿಎಚ್‌ಎಸ್‌) ಕೇಂದ್ರ ಸರ್ಕಾರವು ನಗರದ 25ಕ್ಕೂ ಅಧಿಕ ಆಸ್ಪತ್ರೆಗಳು, ಪ್ರಯೋಗಾಲಯಗಳು ಹಾಗೂ ಕ್ಲಿನಿಕ್‌ಗಳಿಗೆ ಚಿಕಿತ್ಸಾ ಮೊತ್ತವನ್ನು ಪಾವತಿಸಿರಲಿಲ್ಲ. ಈ ವಿಚಾರವಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜತೆಗೆ ಹಲವು ಬಾರಿ ಮಾತುಕತೆ ನಡೆದಿದ್ದರೂ ಫಲಪ್ರದವಾಗಿರಲಿಲ್ಲ.

ಖಾಸಗಿ ಆಸ್ಪತ್ರೆಗಳ ಒಕ್ಕೂಟವು ನಗದುರಹಿತ ವಿಮಾ ಸೌಲಭ್ಯ ಸೇವೆಯನ್ನು ಕೈಬಿಡಲು ನಿರ್ಧರಿಸಿತ್ತು. ಅದೇ ರೀತಿ, ಯೋಜನೆಗಳಡಿ ಚಿಕಿತ್ಸಾ ವೆಚ್ಚವನ್ನು ಪರಿಷ್ಕರಿಸದಿರುವುದು ಕೂಡ ಖಾಸಗಿ ಆಸ್ಪತ್ರೆಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ಈ ಯೋಜನೆಗಳಡಿ ಕೇಂದ್ರ ಸರ್ಕಾರದ ನೌಕರರು ಹಾಗೂ ಅವರ ಕುಟುಂಬದ ಸದಸ್ಯರು, ಪಿಂಚಣಿದಾರರು, ರೈಲ್ವೆ ಮಂಡಳಿ ನೌಕರರು, ಸೈನಿಕರು, ರಕ್ಷಣಾ ಇಲಾಖೆ ಸಿಬ್ಬಂದಿ, ನ್ಯಾಯಾಧೀಶರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಅವರ ಕುಟುಂಬದ ಸದಸ್ಯರು ಸೇರಿದಂತೆ ಒಟ್ಟು 39 ವಿಭಾಗಗಳ ವ್ಯಾಪ್ತಿಯಲ್ಲಿ ಬರುವವರು ಈ ಸೇವೆ ಪಡೆಯುತ್ತಿದ್ದಾರೆ. ಬಾಕಿ ಉಳಿಸಿಕೊಂಡಿದ್ದ 2 ಸಾವಿರಕ್ಕೂ ಅಧಿಕ ಪ್ರಕರಣಗಳಿಗೆಕೇಂದ್ರ ಸರ್ಕಾರವು ಆಸ್ಪತ್ರೆಗಳಿಗೆ ಹಣವನ್ನು ಮರುಪಾವತಿಸಿದೆ. ಹಾಗಾಗಿ ಸೇವೆಯಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುವುದಿಲ್ಲ.

ದರ ಪರಿಷ್ಕರಣೆ: ಸಿಜಿಎಚ್‌ಎಸ್‌ ಯೋಜನೆಯಡಿ ಚಿಕಿತ್ಸೆಗಳಿಗೆ ನಿಶ್ಚಿತ ದರ ನಿಗದಿ ಮಾಡಲಾಗಿದೆ.ಯೋಜನೆಯಡಿ 2014ರಲ್ಲಿ ಕೇಂದ್ರ ಸರ್ಕಾರವು ದರ ಪಟ್ಟಿ ಪರಿಷ್ಕರಣೆಗಾಗಿ ಟೆಂಡರ್ ಕರೆದಿತ್ತು. ಆ ಸಂದರ್ಭದಲ್ಲಿ ನಗರದ ಆಸ್ಪತ್ರೆಗಳ ಚಿಕಿತ್ಸೆಯ ದರವನ್ನು ದೆಹಲಿಯಲ್ಲಿನ ದರಗಳಿಗಿಂತ ಶೇ 10 ರಷ್ಟು ಕಡಿಮೆ ನಿಗದಿ ಪಡಿಸಿತ್ತು. ಇದು ಸೇವೆ ಒದಗಿಸುತ್ತಿರುವ ಆಸ್ಪತ್ರೆಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹಾಗಾಗಿ ದರ ಪರಿಷ್ಕರಿಸುವಂತೆ ಒತ್ತಾಯಿಸಿದ್ದವು. ಈಗ ಕೇಂದ್ರ ಆರೋಗ್ಯ ಸಚಿವಾಲಯ ದರ ಪರಿಷ್ಕರಣೆ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದೆ.

‘ಬಾಕಿ ಇರುವ ಹಣವನ್ನು ಕೇಂದ್ರ ಸರ್ಕಾರ ಮರುಪಾವತಿಸಿದೆ. ಆದರೆ, ಚಿಕಿತ್ಸಾ ದರವನ್ನು ಇನ್ನೂ ಪರಿಷ್ಕರಿಸಿಲ್ಲ. ಇದರಿಂದ ಈಗ ಸೇವೆ ಸಲ್ಲಿಸುತ್ತಿರುವ ಆಸ್ಪತ್ರೆಗಳೂ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜತೆಗೆ ಮಾತುಕತೆ ನಡೆಸಿದ್ದೇವೆ. ದರ ಹೆಚ್ಚಿಸುವ ಭರವಸೆ ನೀಡಿದ್ದಾರೆಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್‍ಗಳ ಅಸೋಸಿಯೇಷನ್ (ಫಾನಾ) ಅಧ್ಯಕ್ಷ ಡಾ.ಆರ್.ರವೀಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಪಟ್ಟು ಸಡಿಲಿಸದ ವಿಮಾ ಕಂಪನಿಗಳು
ಖಾಸಗಿ ಆಸ್ಪತ್ರೆಗಳಲ್ಲಿ ನಗದುರಹಿತ ವೈದ್ಯಕೀಯ ಸೇವೆ ವಿಚಾರವಾಗಿ2014ರಲ್ಲಿ ಜನರಲ್ ಇನ್ಶುರೆನ್ಸ್ ಪಬ್ಲಿಕ್ ಸೆಕ್ಟರ್ ಅಸೋಸಿಯೇಷನ್ (ಜಿಪ್ಸಾ) ಜತೆಗೆಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್‌ಗಳ ಒಕ್ಕೂಟ (ಫಾನಾ) 2014ರಲ್ಲಿ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದದ ಅನುಸಾರ ವೈದ್ಯಕೀಯ ಚಿಕಿತ್ಸಾ ಪ್ಯಾಕೇಜ್‌ಗಳನ್ನು ಪರಿಷ್ಕರಿಸಲು ಫಾನಾ ಏಪ್ರಿಲ್ ತಿಂಗಳವರೆಗೆ ಕಾಲಾವಕಾಶ ನೀಡಿದೆ.

ಜಿಪ್ಸಾದಡಿ ಯುನೈಟೆಡ್ ಇಂಡಿಯಾ, ಓರಿಯಂಟಲ್ ಇನ್ಶುರೆನ್ಸ್, ನ್ಯಾಷನಲ್ ಇನ್ಶುರೆನ್ಸ್ ಹಾಗೂ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದೆ.

‘ಸಾರ್ವಜನಿಕ ವಲಯದ ನಾಲ್ಕು ವಿಮಾ ಕಂಪನಿ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿದ್ದೇವೆ. ಈ ಹಿಂದೆ ನಗದುರಹಿತ ಸೇವೆ ಸ್ಥಗಿತಗೊಳಿಸಲು ಮುಂದಾದಾಗ ದರ ಪರಿಷ್ಕರಿಸುವುದಾಗಿ ತಿಳಿಸಿದ್ದರು. ಬಳಿಕ ಚೆನ್ನೈ ಕಚೇರಿಯಲ್ಲಿ ಒಪ್ಪುತ್ತಿಲ್ಲ ಎಂದು ಕೈಚೆಲ್ಲಿದರು. ಏಪ್ರಿಲ್‌ ತಿಂಗಳೊಳಗೆ ದರ ಪರಿಷ್ಕರಿಸದಿದ್ದಲ್ಲಿ ನಗದು ಸೇವೆ ಸ್ಥಗಿತಗೊಳಿಸುವುದು ಅನಿವಾರ್ಯ’ ಎಂದುಡಾ.ಆರ್.ರವೀಂದ್ರ ಹೇಳಿದರು.

ಅಂಕಿ–ಅಂಶಗಳು

30:ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳು

3:ಚಿಕಿತ್ಸೆ ನೀಡುತ್ತಿರುವ ಹಲ್ಲಿನ ಕ್ಲಿನಿಕ್‌ಗಳು

5:ಚಿಕಿತ್ಸೆ ನೀಡುತ್ತಿರುವ ಡಯಾಗ್ನೊಸ್ಟಿಕ್ ಕೇಂದ್ರಗಳು

1,700:ಯೋಜನೆಯಡಿ ಲಭಿಸುವ ಚಿಕಿತ್ಸೆಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT