ಮಂಗಳವಾರ, ಮಾರ್ಚ್ 9, 2021
31 °C
ವಿದ್ಯುತ್ ಚಾಲಿತ ವಾಹನಗಳ ಬಳಕೆ ಉತ್ತೇಜಿಸಲು ಕ್ರಮ * ಜಾಗ ನೀಡಲು ಒಪ್ಪಿಕೊಂಡ ಬಿಬಿಎಂಪಿ, ಬಿಡಿಎ

ನಗರದ 124 ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್

ಸಂತೋಷ ಜಿಗಳಿಕೊಪ್ಪ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ವಿದ್ಯುತ್ ಚಾಲಿತ ವಾಹನಗಳ ಓಡಾಟಕ್ಕೆ ರಾಜ್ಯ ಸರ್ಕಾರವು ಉತ್ತೇಜನ ನೀಡುತ್ತಿದ್ದು, ಇದೀಗ ಅಂಥ ವಾಹನಗಳ ಚಾರ್ಜಿಂಗ್‌ಗಾಗಿ ನಗರದ 124 ಕಡೆಗಳಲ್ಲಿ ಪಾಯಿಂಟ್‌ಗಳನ್ನು ಅಳವಡಿಸಲು ನಿರ್ಧರಿಸಿದೆ.

ನಗರದಲ್ಲಿ ವಾಹನಗಳ ಓಡಾಟ ವಿಪರೀತವಾಗಿದ್ದು, ಅವುಗಳು ಉಗುಳುವ ಹೊಗೆಯಿಂದ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಅದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದಲೇ ವಿದ್ಯುತ್ ಚಾಲಿತ ವಾಹನಗಳ ಖರೀದಿ ಹಾಗೂ ಬಳಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅದರ ಭಾಗವಾಗಿ, ಈಗ ಚಾರ್ಜಿಂಗ್ ಪಾಯಿಂಟ್‌ಗಳ ವ್ಯವಸ್ಥೆ ಮಾಡಲಾಗುತ್ತದೆ.

‘ವಿದ್ಯುತ್ ಚಾಲಿತ ವಾಹನಗಳಿಗೆ ಬೇಡಿಕೆ ಬರುತ್ತಿದೆ. ಅಂಥ ವಾಹನಗಳನ್ನು ಖರೀದಿಸಿದವರು, ತಮ್ಮ ಮನೆಯಲ್ಲೇ ಚಾರ್ಜಿಂಗ್ ಮಾಡಿಕೊಳ್ಳುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳ ಅಗತ್ಯವಿರುವುದಾಗಿ ಹಲವರು ಬೇಡಿಕೆ ಇಟ್ಟಿದ್ದರು. ಅದಕ್ಕೆ ಸ್ಪಂದಿಸಿದ ಸರ್ಕಾರ, ಪಾಯಿಂಟ್‌ಗಳನ್ನು ಅಳವಡಿಸಲು ಸಾರಿಗೆ ಇಲಾಖೆ, ಬೆಸ್ಕಾಂ, ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿತ್ತು. ಪಾಯಿಂಟ್‌ಗಳ ಅಳವಡಿಕೆಗೆ ಈ ಸಮಿತಿ 124 ಸ್ಥಳಗಳನ್ನು ಗುರುತಿಸಿದೆ. ಆರಂಭದಲ್ಲಿ, ನೂರು ಕಡೆಗಳಲ್ಲಿ ಪಾಯಿಂಟ್‌ಗಳು ಶೀಘ್ರವೇ ಬಳಕೆಗೆ ಲಭ್ಯವಾಗಲಿವೆ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

’ನಗರದ ಪ್ರಮುಖ ಬಸ್‌ ಹಾಗೂ ರೈಲು ನಿಲ್ದಾಣ, ಕಾಫಿ ಡೇ, ಮಾಲ್‌, ಉದ್ಯಾನ, ಪೆಟ್ರೋಲ್ ಬಂಕ್‌, ಹೋಟೆಲ್‌ ಆವರಣಗಳಲ್ಲಿ ಪಾಯಿಂಟ್‌ಗಳ ಅಳವಡಿಕೆಗೆ ಪಟ್ಟಿ ಸಿದ್ಧಪಡಿಸಲಾಗಿದೆ. ಆಯಾ ಜಾಗಗಳ ಮಾಲೀಕರು, ಸ್ಥಳ ನೀಡಲು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.

₹4 ಕೋಟಿ ಕೇಳಿದ ಬೆಸ್ಕಾಂ: ‘ಪಾಯಿಂಟ್‌ಗಳಲ್ಲಿ ವಿದ್ಯುತ್ ಉಪಕರಣಗಳನ್ನು ಅಳವಡಿಸುವ ಕೆಲಸ ಬೆಸ್ಕಾಂನಿಂದ ಆಗಬೇಕು. ಆ ಕೆಲಸಕ್ಕಾಗಿ  ₹4 ಕೋಟಿ ನೀಡುವಂತೆ ಬೆಸ್ಕಾಂ ಅಧಿಕಾರಿಗಳು ಮನವಿ ಮಾಡಿದ್ದು, ಸಮಿತಿ ಒಪ್ಪಿಕೊಂಡಿದೆ’ ಎಂದು ಸಾರಿಗೆ ಅಧಿಕಾರಿ ತಿಳಿಸಿದರು.

ಬೆಸ್ಕಾಂ ಅಧಿಕಾರಿಯೊಬ್ಬರು, ‘ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಗುಣಮಟ್ಟದ ಉಪಕರಣ ಅಳವಡಿಸಿ, ಮೂಲ ಸೌಕರ್ಯ ಕಲ್ಪಿಸಬೇಕು. ವಿದ್ಯುತ್ ಸರಬರಾಜು ಘಟಕಗಳಿಂದ ಪ್ರತ್ಯೇಕ ತಂತಿಗಳನ್ನು ಅಳವಡಿಸಬೇಕು. ಸದ್ಯದ ಸ್ಥಿತಿಯಲ್ಲಿ ಒಂದು ಪಾಯಿಂಟ್‌ ವ್ಯವಸ್ಥೆಗೆ ₹4 ಲಕ್ಷದಿಂದ ₹5 ಲಕ್ಷ ವೆಚ್ಚವಾಗಲಿದೆ. ಹಣ ಸಂದಾಯವಾಗುತ್ತಿದ್ದಂತೆ ಟೆಂಡರ್ ಕರೆಯಲಿದ್ದೇವೆ’ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ, ಬಿಡಿಎ ಜಾಗ: ವಾಹನಗಳು ಹೆಚ್ಚು ಓಡಾಡುವ ಹಾಗೂ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇರುವ ಕಡೆಗಳಲ್ಲಿ ಪಾಯಿಂಟ್ ಅಳವಡಿಕೆ ಮಾಡಲಾಗುತ್ತಿದೆ. ಅದಕ್ಕಾಗಿ ಬೆಸ್ಕಾಂ ಹಾಗೂ ಬಿಡಿಎ ಅಧೀನದಲ್ಲಿರುವ ಜಾಗಗಳನ್ನೇ ಹೆಚ್ಚಾಗಿ ಗುರುತಿಸಲಾಗಿದೆ ಎಂದು ಹೇಳಿದರು.   

ಸೌರಶಕ್ತಿ ಬಳಕೆ: ಕೆಲವು ಪಾಯಿಂಟ್‌ಗಳಲ್ಲಿ ವಿದ್ಯುತ್‌ಗೆ ಪರ್ಯಾಯವಾಗಿ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಲು ಸಮಿತಿ ಚಿಂತನೆ ನಡೆಸುತ್ತಿದೆ.

‘ದಿನದ 24 ಗಂಟೆಯೂ ಪಾಯಿಂಟ್‌ಗಳು ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂಬ ಉದ್ದೇಶ ನಮ್ಮದು. ಆದರೆ, ಅಂಥ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಬಹುದು. ಹೀಗಾಗಿ, 25 ಪಾಯಿಂಟ್‌ಗಳಲ್ಲಿ  ಸೋಲಾರ್‌ ಬಳಸಿ ಚಾರ್ಜಿಂಗ್ ಮಾಡುವ ಬಗ್ಗೆ ಮಾತುಕತೆ ನಡೆದಿದೆ’ ಎಂದು ಸಾರಿಗೆ ಅಧಿಕಾರಿ ವಿವರಿಸಿದರು.  

ಪ್ರತಿ ಯೂನಿಟ್‌ಗೆ ₹4.80 ದರ
ಚಾರ್ಜಿಂಗ್ ಪಾಯಿಂಟ್‌ಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್‌ಗೆ ₹4.80 ದರ ನಿಗದಿ ಮಾಡಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಒಪ್ಪಿಗೆ ನೀಡಿದೆ.

‘ವಾಣಿಜ್ಯ ಉಪಯೋಗಕ್ಕೆ ಬಳಸುವ ವಿದ್ಯುತ್‌ಗೆ ₹9ರಿಂದ ₹10 (ಪ್ರತಿ ಯೂನಿಟ್‌ಗೆ) ಇದೆ. ಆದರೆ, ರಿಯಾಯಿತಿ ದರದಲ್ಲಿ ವಿದ್ಯುತ್ ನೀಡಲು ಬೆಸ್ಕಾಂ ಮುಂದಾಗಿದೆ. ಸಾರ್ವಜನಿಕರು ಇದರ ಲಾಭ ಪಡೆಯಬೇಕು’ ಎಂದು ಸಾರಿಗೆ ಅಧಿಕಾರಿ ಹೇಳಿದರು.

‘ಅಥೇರ್’ ಕಂಪನಿಯಿಂದ ಪಾಯಿಂಟ್
ಎಲೆಕ್ಟ್ರಿಕಲ್ ಸ್ಕೂಟರ್‌ ತಯಾರಿಕೆ ಕಂಪನಿಯಾದ ‘ಅಥೇರ್, ನಗರದ 40 ಕಡೆಗಳಲ್ಲಿ ಈಗಾಗಲೇ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿದೆ. ಹೋಟೆಲ್‌ಗಳು, ಮಾಲ್‌ಗಳಲ್ಲಿ ಮಾತ್ರ ಇಂಥ ಪಾಯಿಂಟ್‌ಗಳಿವೆ. 

‘ಆಯ್ದ ಸ್ಥಳಗಳಲ್ಲಿ ಮಾತ್ರ ಕಂಪನಿಯು ಪಾಯಿಂಟ್‌ಗಳ ವ್ಯವಸ್ಥೆ ಮಾಡಿದೆ. ಜತೆಗೆ, ಮತ್ತಷ್ಟು ಕಂಪನಿಗಳು ಪಾಯಿಂಟ್ ಸ್ಥಾಪನೆ ಬಗ್ಗೆ ಆಸಕ್ತಿ ತೋರಿಸಿವೆ. ಮುಂದಿನ ದಿನಗಳಲ್ಲಿ ನಗರದ ಪ್ರತಿಯೊಂದು ಪ್ರದೇಶದಲ್ಲೂ ಪಾಯಿಂಟ್‌ಗಳು ಲಭ್ಯವಾಗಲಿವೆ’ ಎಂದು ಸಮಿತಿಯ ಅಧಿಕಾರಿಯೊಬ್ಬರು ತಿಳಿಸಿದರು.  

ಪಾಯಿಂಟ್‌ಗಳ ಕುರಿತು...
* ಪೆಟ್ರೋಲ್ ಬಂಕ್‌ಗಳಲ್ಲಿ ಕಂಡುಬರುವ ಗಾಳಿ ತುಂಬಿಸುವ ಉಪಕರಣದ ಮಾದರಿಯಲ್ಲೇ ಚಾರ್ಜಿಂಗ್ ಪಾಯಿಂಟ್‌ ಇರಲಿದೆ.
* ಪ್ರತಿ ಪಾಯಿಂಟ್‌ನಲ್ಲೂ ಚಾರ್ಜಿಂಗ್ ಮಾಡಲೆಂದು ಆರಂಭದಲ್ಲಿ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ನಂತರ, ವಾಹನ ಸವಾರರೇ ಚಾರ್ಜಿಂಗ್ ಮಾಡಿಕೊಂಡು ಹೋಗುವ ವ್ಯವಸ್ಥೆ ಮಾಡಲಾಗುತ್ತದೆ.
* ಕಾರು ಹಾಗೂ ಸ್ಕೂಟರ್‌ ಸೇರಿದಂತೆ ಎಲ್ಲ ಬಗೆಯ ಎಲೆಕ್ಟ್ರಿಕಲ್ ವಾಹನಗಳಿಗೆ ಪಾಯಿಂಟ್‌ಗಳಲ್ಲಿ ವಿದ್ಯುತ್ ಚಾರ್ಜಿಂಗ್ ಮಾಡಬಹುದು.
* ಕಡಿಮೆ ಸಮಯದಲ್ಲಿ ಹೆಚ್ಚು ಚಾರ್ಜಿಂಗ್ ಆಗುವ ಉಪಕರಣಗಳನ್ನು ಪಾಯಿಂಟ್‌ಗಳಲ್ಲಿ ಅಳವಡಿಸಲಾಗುತ್ತದೆ.
* ಹೋಟೆಲ್, ಕಾಫಿ ಡೇ ಬಳಿ ಪಾಯಿಂಟ್‌ಗಳು ಇರಲಿವೆ. ಚಾರ್ಜಿಂಗ್‌ ಪೂರ್ಣವಾಗುವವರೆಗೂ ವಾಹನಗಳ ಮಾಲೀಕರು ವಿಶ್ರಾಂತಿ ಪಡೆಯಲು ಅದು ಅನುಕೂಲಕರವಾಗಲಿದೆ.

ಅಂಕಿ–ಅಂಶ
* 12,000 -ರಾಜ್ಯದಲ್ಲಿರುವ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ
* 4,000 -ವಿದ್ಯುತ್ ಚಾಲಿತ ಕಾರುಗಳು
 * 6,000 -ವಿದ್ಯುತ್ ಚಾಲಿತ ಸ್ಕೂಟರ್‌ಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.