ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈವಾಹಿಕ ಜಾಲತಾಣಗಳ ಮೂಲಕ ವಂಚನೆ; ದಂಪತಿ ಸೆರೆ

ಸಿಐಡಿ ಸೈಬರ್‌ ಪೊಲೀಸರ ಕಾರ್ಯಾಚರಣೆ
Last Updated 26 ಜೂನ್ 2018, 20:05 IST
ಅಕ್ಷರ ಗಾತ್ರ

ಬೆಂಗಳೂರು: ವೈವಾಹಿಕ ಜಾಲತಾಣಗಳ ಮೂಲಕ ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನು ಪರಿಚಯ ಮಾಡಿಕೊಂಡು, ಅವರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸುತ್ತಿದ್ದ ಆರೋಪದಡಿ ಕೋಲ್ಕತ್ತದ ದಂಪತಿಯನ್ನು ಸಿಐಡಿ ಸೈಬರ್ ವಿಭಾಗದ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ರೂಪಾಲಿ ಮಜುಂದಾರ್ (36) ಹಾಗೂ ಆಕೆಯ ಪತಿ ಕುಶನ್ ಬಂಧಿತರು. ಅವರಿಬ್ಬರಿಂದ ₹44 ಸಾವಿರ ನಗದು, ಎರಡು ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿ ರೂಪಾಲಿ, ಬಿ.ಕಾಂ ಪದವೀಧರೆ. ಕುಶನ್‌, ಎಂಜಿನಿಯರಿಂಗ್‌ ಪದವೀಧರ. ಹಲವು ಬ್ಯಾಂಕ್‌ಗಳ ಮಾರುಕಟ್ಟೆ ವಿಭಾಗದಲ್ಲಿ ಆತ ಕೆಲಸ ಮಾಡಿದ್ದ. ಐದು ವರ್ಷಗಳ ಹಿಂದೆ ಕೆಲಸ ಬಿಟ್ಟು ಬಂಗಾಳಿ ಧಾರಾವಾಹಿಗಳಲ್ಲಿ ನಟಿಸಲಾರಂಭಿಸಿದ್ದ. ‘ಸತ್ಪಾಕ್ ಬಾದ್’, ‘ಕುರುಕ್ಷೇತ್ರ’, ‘ಪಾಲಾ ಬಾದಲಿನ್’, ‘ಮೊಚಕ್‌’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಆತ ನಟಿಸಿದ್ದ. ಮಾಧ್ಯಮದಲ್ಲಿಯೂ ಅರೆಕಾಲಿಕ ಕೆಲಸ ಮಾಡುತ್ತಿದ್ದ ಎಂದರು.

‘ಮಿಂಗಲ್‌2 ಡಾಟ್ ಕಾಮ್‌’ ಸೇರಿದಂತೆ ಹಲವು ವೈವಾಹಿಕ ಜಾಲತಾಣಗಳಲ್ಲಿ ರೂಪಾಲಿ ನಕಲಿ ಖಾತೆ ತೆರೆದಿದ್ದಳು. ಮಾಡೆಲ್‌ಗಳ ಫೋಟೊಗಳನ್ನು ತನ್ನದೆಂದು ಅಪ್‌ಲೋಡ್‌ ಮಾಡಿದ್ದಳು. ಆ ಖಾತೆ ಮೂಲಕ ಸಾಫ್ಟ್‌ವೇರ್‌ ಎಂಜಿನಿಯರ್‌ಗಳನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದಳು. ಆಕೆಯ ಕೃತ್ಯಕ್ಕೆ ಪತಿಯು ಸಹಕಾರ ನೀಡುತ್ತಿದ್ದ ಎಂದು ವಿವರಿಸಿದರು.

ಶಿಕ್ಷಕಿ ಎಂದು ಹೇಳಿ ₹62 ಲಕ್ಷ ವಂಚನೆ: ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರೊಬ್ಬರನ್ನು ಪರಿಚಯ ಮಾಡಿಕೊಂಡಿದ್ದ ರೂಪಾಲಿ, ತನ್ನ ಹೆಸರು ಅರ್ಪಿತಾ ಎಂದಿದ್ದಳು. ‘ನಾನು ಶಿಕ್ಷಕಿ. ಉತ್ತಮ ಸಂಬಳವಿದೆ. ನಮ್ಮದು ಶ್ರೀಮಂತ ಕುಟುಂಬ’ ಎಂದು ಹೇಳಿಕೊಂಡಿದ್ದಳು. ಆಕೆಯ ಮಾತು ನಂಬಿದ್ದ ಎಂಜಿನಿಯರ್‌, ತಮ್ಮ ಮೊಬೈಲ್ ನಂಬರ್ ಕೊಟ್ಟಿದ್ದರು. ನಂತರ, ಅವರಿಬ್ಬರು ಚಾಟಿಂಗ್‌ ಮಾಡಲಾರಂಭಿಸಿದ್ದರು ಎಂದು ಅಧಿಕಾರಿ ಹೇಳಿದರು.

ಕೆಲ ದಿನಗಳ ನಂತರ ರೂಪಾಲಿ, ‘ನನ್ನ ತಂದೆಗೆ ಹುಷಾರಿಲ್ಲ. ಟಾಟಾ ಬಿರ್ಲಾ ಹಾರ್ಟ್ ಸೆಂಟರ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕು. ಸಹಾಯ ಮಾಡಿ’ ಎಂದು ಕೇಳಿದ್ದಳು. ಅದನ್ನು ನಂಬಿದ್ದ ಎಂಜಿನಿಯರ್, ಆರೋಪಿಯ ಖಾತೆಗೆ ₹62 ಲಕ್ಷ ಜಮೆ ಮಾಡಿದ್ದರು. ಕೆಲವೇ ಗಂಟೆಗಳಲ್ಲಿ ಆರೋಪಿಯು ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿದ್ದರು ಎಂದು ಅಧಿಕಾರಿ ವಿವರಿಸಿದರು.

ದೂರು ದಾಖಲಾಗುತ್ತಿದ್ದಂತೆ ಆರೋಪಿಯ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಕೋಲ್ಕತ್ತಗೆ ಹೋಗಿದ್ದ ತಂಡದ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ ಎಂದ ಅಧಿಕಾರಿ, ‘ದೂರುದಾರರಿಂದ ಪಡೆದುಕೊಂಡಿದ್ದ ಹಣದಲ್ಲಿ ₹47 ಲಕ್ಷ ಹಣವನ್ನು ರೂಪಾಲಿ, ತನ್ನ ಪತಿ ಖಾತೆಗೆ ವರ್ಗಾವಣೆ ಮಾಡಿದ್ದು ದಾಖಲೆಯಿಂದ ಗೊತ್ತಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT