ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಸ ವಿನ್ಯಾಸದ 100 ಸಾರಿಗೆ ಬಸ್‌ಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Published 5 ಫೆಬ್ರುವರಿ 2024, 14:35 IST
Last Updated 5 ಫೆಬ್ರುವರಿ 2024, 14:35 IST
ಅಕ್ಷರ ಗಾತ್ರ

ಬೆಂಗಳೂರು: ಸುಳ್ಳುಗಳನ್ನೇ ಹೇಳಿಕೊಂಡು ಬಂದಿರುವ ಬಿಜೆಪಿಯವರು ಈ ಬಾರಿ ‘ಮೋದಿ ಗ್ಯಾರಂಟಿ’ ಎಂದು ಹೇಳುತ್ತಿದ್ದಾರೆ. ಜನರು ಈ ಸುಳ್ಳು ಭರವಸೆಗೆ ಮರುಳಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಹೊಸ‌ ವಿನ್ಯಾಸ ಹಾಗೂ‌ ಹೊಸ‌ ಬ್ರ್ಯಾಂಡ್‌‌ನ ‘ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್‌’ – ‘ಅಶ್ವಮೇಧ’ 100 ಸಾರಿಗೆ ಬಸ್‌ಗಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

‘ವಿದೇಶದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತಂದರೆ ಭಾರತದ ಪ್ರತಿ ಕುಟುಂಬಕ್ಕೂ ₹ 15 ಲಕ್ಷದಷ್ಟು ಆಗುತ್ತದೆ ಎಂದಿದ್ದರು. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ, ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿದ್ದರು. 10 ವರ್ಷಗಳಲ್ಲಿ ಯಾವುದೇ ಭರವಸೆಗಳನ್ನು ಪ್ರಧಾನಿ ಈಡೇರಿಸಿಲ್ಲ’ ಎಂದು ಟೀಕಿಸಿದರು.

‘ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದಾಗ ಕರ್ನಾಟಕ ದಿವಾಳಿಯಾಗುತ್ತದೆ ಎಂದು ಮೋದಿ ಹೇಳಿದ್ದರು. ಬಿಟ್ಟಿ ಭಾಗ್ಯ ಎಂದು ಬಿಜೆಪಿಯವರು ಮೂದಲಿಸಿದ್ದರು. ಈಗ ಅವರೇ ಮೋದಿ ಗ್ಯಾರಂಟಿ ಅನ್ನುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು. 

ಬಡವರ ಬಗ್ಗೆ ಕಾಳಜಿ ಇದ್ದು, ರಾಜಕೀಯ ಇಚ್ಛಾಶಕ್ತಿ ಇದ್ದಾಗ ಮಾತ್ರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯ. ಶಕ್ತಿ ಯೋಜನೆಯಡಿ ನಿಗಮದ ಬಸ್‌ಗಳಲ್ಲಿ ಎಲ್ಲ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟೆವು. ಇಲ್ಲಿವರೆಗೆ 146 ಕೋಟಿ ಬಾರಿ ಮಹಿಳೆಯರು, ವಿದ್ಯಾರ್ಥಿನಿಯರು ಪ್ರಯಾಣಿಸಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಈ ಯೋಜನೆ ಪೂರಕವಾಗಿದೆ ಎಂದು ವಿಶ್ಲೇಷಿಸಿದರು.

1000 ಬಸ್‌: ‘ಕೆಎಸ್‌ಆರ್‌ಟಿಸಿ ಈ ವರ್ಷ 1000 ಬಸ್‌ಗಳನ್ನು ಸೇರ್ಪಡೆ ಮಾಡಲಿದ್ದು, ಅದರಲ್ಲಿ 100 ಬಸ್‌ಗಳನ್ನು ಇಂದು ಲೋಕಾರ್ಪಣೆ ಮಾಡಲಾಗಿದೆ. ನಾಲ್ಕು ವರ್ಷಗಳಿಂದ ಹೊಸ ಬಸ್‌ಗಳ ಖರೀದಿಯಾಗಿರಲಿಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ 5,800 ಬಸ್‌ಗಳನ್ನು ಸೇರ್ಪಡೆ ಮಾಡಲು ಕ್ರಮ ಕೈಗೊಂಡಿದ್ದೇವೆ’ ಎಂದು ವಿವರಿಸಿದರು.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಸ್‌.ಆರ್‌. ಶ್ರೀನಿವಾಸ, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್‌, ನಿರ್ದೇಶಕಿ (ಸಿಬ್ಬಂದಿ ಮತ್ತು ಜಾಗೃತ) ನಂದಿನಿದೇವಿ ಕೆ. ಉಪಸ್ಥಿತರಿದ್ದರು.

ಕೆಎಸ್‌ಆರ್‌ಟಿಸಿಯ ‘ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್‌’ – ‘ಅಶ್ವಮೇಧ’ 100 ಸಾರಿಗೆ ಬಸ್‌ಗಳಿಗೆ ಸೋಮವಾರ ವಿಧಾನಸೌಧದ ಎದುರು ಚಾಲನೆ ನೀಡಲಾಯಿತು.–ಪ್ರಜಾವಾಣಿ ಚಿತ್ರ
ಕೆಎಸ್‌ಆರ್‌ಟಿಸಿಯ ‘ಪಾಯಿಂಟ್ ಟು ಪಾಯಿಂಟ್ ಎಕ್ಸ್‌ಪ್ರೆಸ್‌’ – ‘ಅಶ್ವಮೇಧ’ 100 ಸಾರಿಗೆ ಬಸ್‌ಗಳಿಗೆ ಸೋಮವಾರ ವಿಧಾನಸೌಧದ ಎದುರು ಚಾಲನೆ ನೀಡಲಾಯಿತು.–ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT