ಭಾನುವಾರ, ಸೆಪ್ಟೆಂಬರ್ 26, 2021
27 °C

ಬಾಲ್ಯವಿವಾಹ ತಡೆಗೆ ಬಾಲವಿವಾಹಿತರ ಸಂಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಬಾಲ್ಯವಿವಾಹದಿಂದ ಜಗತ್ತನ್ನು ನೋಡಲು ನಮಗೆ ಸಾಧ್ಯವೇ ಆಗಲಿಲ್ಲ. ಹದಿಹರೆಯದ ವಯಸ್ಸಿನಲ್ಲೇ ಮದುವೆಯ ಬಲೆಗೆ ಸಿಲುಕಿ, ಬದುಕು ಹಾಳಾಯಿತು. ಬಾಲಕಿಯರ ಕನಸುಗಳು ಎಳೆವೆಯಲ್ಲೇ ಮುರುಟಿಹೋಗುತ್ತಿವೆ. ಕನಸುಗಳನ್ನು ಹೊಸಕುವ ಬಾಲ್ಯವಿವಾಹಗಳನ್ನು ತಡೆಯಲು ನಾವು ಸದಾ ಸಿದ್ಧ...'

ಬಾಲ್ಯವಿವಾಹವಾಗಿ, 18 ವರ್ಷ ತುಂಬುವ ಮೊದಲೇ ತಾಯಂದಿರು, ವಿಧವೆಯರು ಹಾಗೂ ವಿಚ್ಛೇದಿತರಾಗಿರುವ ಬಾಲ್ಯವಿವಾಹ ಸಂತ್ರಸ್ತೆಯರು ಹೀಗೆ ತಮ್ಮ ನೋವನನ್ನು ಹರಿವಿಟ್ಟರಲ್ಲದೇ, ವಿವಾಹ ತಡೆಯುವಲ್ಲಿ ತಮ್ಮನ್ನು ತೊಡಗಿಸುವ ಸಂಕಲ್ಪವನ್ನೂ ಮಾಡಿದರು.

ವಿವಾಹಿತ ಹದಿಹರೆಯದ ಬಾಲಕಿಯರ ಸಶಕ್ತೀಕರಣಕ್ಕಾಗಿ ಯೋಜನೆಗಳು (ಇಮೇಜ್) ಹಾಗೂ ಚೈಲ್ಡ್ ರೈಟ್ಸ್ ಟ್ರಸ್ಟ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಇ-ಸಂವಾದದಲ್ಲಿ ಬಾಲ್ಯವಿವಾಹದಿಂದ ತಮ್ಮ ಜೀವನದಲ್ಲಾದ ಕಹಿ ಅನುಭವಗಳನ್ನು ಬಿಚ್ಚಿಟ್ಟರು.

'ಬಾಲ್ಯವಿವಾಹದಿಂದಲೇ ಹೆಣ್ಣುಮಕ್ಕಳ ಶೋಷಣೆ'

'15ರ ವಯಸ್ಸಿಗೆ ನನಗೆ ಮದುವೆ ಮಾಡಿದರು. ಆಗ 9ನೇ ತರಗತಿಯಲ್ಲಿ ಓದುತ್ತಿದ್ದೆ. ನನಗೀಗ ನಾಲ್ಕು ವರ್ಷ ಹಾಗೂ ಎರಡು ವರ್ಷದ ಹೆಣ್ಣು ಮಕ್ಕಳಿದ್ದಾರೆ. ಹೆಣ್ಣುಮಕ್ಕಳಿಗೆ ಬಾಲ್ಯವಿವಾಹವೇ ನಿಜವಾದ ಶೋಷಣೆ. ನನ್ನ ದುಸ್ಥಿತಿ ಮತ್ತೊಬ್ಬ ಬಾಲಕಿಗೆ ಆಗದಂತೆ ತಡೆಯುವುದೇ ನನ್ನ ಗುರಿ. ಚಿಕ್ಕ ವಯಸ್ಸಿಗೆ ಮದುವೆ ಮಾಡದಂತೆ ಪೋಷಕರಿಗೂ ಸಲಹೆ ನೀಡುತ್ತೇನೆ' ಎಂದು ಚಾಮರಾಜನಗರ ಜಿಲ್ಲೆಯ ಸಂತ್ರಸ್ತೆಯೊಬ್ಬರು ಹೇಳಿಕೊಂಡರು.

'ಹೊರಗಿನ ಪ್ರಪಂಚವೇ ಕಂಡಿಲ್ಲ'

’ಅಮ್ಮನ ಅನಾರೋಗ್ಯದಿಂದ 14 ವರ್ಷಕ್ಕೆ ನನ್ನ ಮದುವೆ ನಡೆಯಿತು. ಮದುವೆ ನಂತರವೂ ಓದು ಮುಂದುವರಿಸಿ ಎಸ್ಸೆಸ್ಸೆಲ್ಸಿಯಲ್ಲಿ ಶಾಲೆಗೆ ಮೊದಲ ರ‍್ಯಾಂಕ್ ಪಡೆದೆ. ಈ ಸಾಧನೆಯಿಂದ ಗಂಡನ ಮನೆಯವರಿಂದ ಪ್ರೋತ್ಸಾಹ ಸಿಕ್ಕಿತು. ಆದರೆ, ಎಲ್ಲ ಹೆಣ್ಣುಮಕ್ಕಳಿಗೂ ಈ ಬೆಂಬಲ ಸಿಗುವುದಿಲ್ಲ. ನನ್ನಂತೆ ಬಾಲ್ಯವಿವಾಹವಾಗಿರುವ ಅದೆಷ್ಟೋ ಬಾಲಕಿಯರು ಹೊರ ಪ್ರಪಂಚವನ್ನೇ ಸರಿಯಾಗಿ ಕಂಡಿಲ್ಲ. ಬಾಲ್ಯವಿವಾಹ ವಿಚಾರ ತಿಳಿದ ಕೂಡಲೇ ನಾನೇ ತಡೆಯುತ್ತೇನೆ' ಎನ್ನುತ್ತಾರೆ ಬೆಳಗಾವಿ ಜಿಲ್ಲೆಯ ಬಾಲ್ಯವಿವಾಹಿತೆ.

'ಮೊದಲ ಮಗುವನ್ನು ಕಳೆದುಕೊಂಡೆ'

'ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಹೊತ್ತಿದ್ದೆ. ಆದರೆ, ನನ್ನ ಕನಸನ್ನು ಮದುವೆ ಕಸಿಯಿತು. ಚಿಕ್ಕ ವಯಸ್ಸಿಗೆ ಗರ್ಭ ಧರಿಸಿದ ಪರಿಣಾಮ ನನ್ನ ಮೊದಲ ಮಗು ಜಗತ್ತನ್ನು ನೋಡಲಿಲ್ಲ. ಕುಟುಂಬಸ್ಥರ ಹಟಕ್ಕೆ ಎರಡನೇ ಮಗುವಿಗೆ ಜನ್ಮ ನೀಡಿದ್ದೇನೆ. ಉತ್ತಮ ಶಿಕ್ಷಣ ಪಡೆದಿದ್ದರೆ ನಮ್ಮ ಜೀವನವೂ ಉತ್ತಮವಾಗಿರುತ್ತಿತ್ತು' ಎಂದು ಬೀದರ್ ಜಿಲ್ಲೆಯ ಸಂತ್ರಸ್ತೆಯೊಬ್ಬರು ಅಳಲು ತೋಡಿಕೊಂಡರು.

'ಆತ್ಮಹತ್ಯೆಗೆ ಯತ್ನಿಸಿದ್ದೆ'

'ನನ್ನಂತಹ ಬಾಲಕಿಯರಿಗೆ ಮನೆಯಲ್ಲಿ ತುತ್ತು ಅನ್ನಕ್ಕೂ ಕಷ್ಟ ಇರುತ್ತದೆ. ಮದುವೆಯಾದರೂ ಆ ಕಷ್ಟ ಮುಂದುವರಿಯುತ್ತದೆ. ಪತಿಗೆ ಬರುವ ಅಲ್ಪ ಆದಾಯದಿಂದ ಸಾಲ ಮಾತ್ರ ತೀರಿಸಬಹುದು. ಬಾಲ್ಯವಿವಾಹದಿಂದ ಈ ಪಾಡು ತಪ್ಪಿದ್ದಲ್ಲ. ಇದನ್ನೆಲ್ಲಾ ಕಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದೆ. ಬಾಲ್ಯವಿವಾಹ ಮಾಡುವವರು ನನ್ನ ಜೀವನವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು' ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಲ್ಯವಿವಾಹ ಸಂತ್ರಸ್ತೆಯೊಬ್ಬರು ಕಣ್ಣೀರಿಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು