ಸೋಮವಾರ, ಸೆಪ್ಟೆಂಬರ್ 23, 2019
24 °C
ಶಿವಾನಂದ ವೃತ್ತ: 13 ತಿಂಗಳಲ್ಲಿ ಮುಗಿಯಬೇಕಾದ ಕಾಮಗಾರಿ 2 ವರ್ಷವಾದರೂ ಪೂರ್ಣಗೊಂಡಿಲ್ಲ

ಉಕ್ಕಿನ ಸೇತುವೆ ವಿಳಂಬ: ಸವಾರರು ಹೈರಾಣ

Published:
Updated:
Prajavani

ಬೆಂಗಳೂರು: ನಗರದ ಶಿವಾನಂದ ವೃತ್ತದ ಬಳಿ ನಡೆಯುತ್ತಿರುವ ಉಕ್ಕಿನ ಸೇತುವೆ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ಈ ಪ್ರದೇಶದಲ್ಲಿ ನಿತ್ಯ ಸಂಚಾರ ದಟ್ಟಣೆ ಹೆಚ್ಚುತ್ತಿದೆ.

ರೇಸ್‌ಕೋರ್ಸ್‌ ವೃತ್ತದಿಂದ ಶಿವಾನಂದ ವೃತ್ತದ ಕಡೆಗೆ ಸಾಗುವ ರಸ್ತೆಯಲ್ಲಿ ಮೇಲ್ಸೇತುವೆ ಕಾಮಗಾರಿ 13 ತಿಂಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕಾಮಗಾರಿ ಆರಂಭವಾಗಿ ಎರಡು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ಇನ್ನೂ 9 ತಿಂಗಳು ಬೇಕು ಎನ್ನುತ್ತಿದ್ದಾರೆ.

ಕಾಮಗಾರಿ ನಡೆಯುವ ಪಕ್ಕದ ರಸ್ತೆ ಗಳಲ್ಲಿ ಗುಂಡಿ ಬಿದ್ದಿದ್ದು ಇದು ಈ ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಬೆಳಿಗ್ಗೆ ಹಾಗೂ ಸಂಜೆ ವೇಳೆ ಇಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದು, ಸವಾರರು ಹೈರಾಣಾಗಿದ್ದಾರೆ. 

ನಗರದ ಹೊರಭಾಗದಿಂದ ಬರುವ ಬಹುತೇಕ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್‌ಗಳು ಇದು ನಗರವನ್ನು ಸಂಧಿಸುವ ಈ ಪ್ರಮುಖ ರಸ್ತೆಯನ್ನೇ ಬಳಸಿ ಕೆಂಪೇ ಗೌಡ ಬಸ್‌ ನಿಲ್ದಾಣದೆಡೆಗೆ ಸಾಗುತ್ತವೆ. ಇಲ್ಲಿ ಉಂಟಾಗುವ ವಾಹನದಟ್ಟಣೆ ನಿಯಂತ್ರಿಸುವುದು ಸಂಚಾರ ಪೊಲೀ ಸರಿಗೂ ತಲೆನೋವಾಗಿ ಪರಿಣಮಿಸಿದೆ.

ಕಾಮಗಾರಿ ವಿಳಂಬವಾಗುತ್ತಿದೆ ಎಂಬ ದೂರಿನ ಮೇರೆಗೆ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ ಮೇಯರ್‌ ಗಂಗಾಂಬಿಕೆ, ವಿಳಂಬವಾಗಿದ್ದಕ್ಕೆ ಅಸ ಮಾಧಾನ ವ್ಯಕ್ತಪಡಿಸಿದರು.

ರಸ್ತೆ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ರಮೇಶ್, ‘ಕಾಮಗಾರಿ ಪೂರ್ಣಗೊಳಿಸಲು 9 ತಿಂಗಳು ಬೇಕಾಗುತ್ತದೆ’ ಎಂದು ತಿಳಿಸಿದರು.

‘ಆರಂಭದಲ್ಲಿ 326.25 ಮೀ. ಉದ್ದದ ಸೇತುವೆ ನಿರ್ಮಾಣಕ್ಕೆ ಅನು ಮೋದನೆ ಸಿಕ್ಕಿತ್ತು. ಕಾಮಗಾರಿ ಆರಂಭವಾದ ಬಳಿಕ ಸ್ಥಳೀಯರು ವಿರೋಧಿಸಿ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಸಂಚಾರದಟ್ಟಣೆ ನಿವಾರಣೆ ದೃಷ್ಟಿಯಿಂದ ಈ ಸೇತುವೆಯ ಉದ್ದ ವಿಸ್ತರಿಸುವಂತೆ ಕೋರ್ಟ್‌ ಸೂಚನೆ ನೀಡಿತ್ತು. ಹೀಗಾಗಿ ಮೇಲ್ಸೇತುವೆಯ ಉದ್ದವನ್ನು 482 ಮೀಟರ್‌ಗಳಿಗೆ ವಿಸ್ತರಿಸಬೇಕಾಯಿತು. ಹಾಗಾಗಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ’ ಎಂದು ವಿವರಿಸಿದರು.

ರಸ್ತೆಗುಂಡಿ ಬಿದ್ದು, ಅವುಗಳಲ್ಲಿ ಮಳೆ ನೀರು ಸಂಗ್ರಹವಾಗಿದ್ದನ್ನು ಕಂಡ ಮೇಯರ್‌, ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿ ಸಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಪಿಲ್ಲರ್ ಅಳವಡಿಸುವ ಮಾರ್ಗದಲ್ಲಿ ಮೂರು ಪೈಪ್‌ಲೈನ್‌ ಹಾಗೂ ಎರಡು ಒಳಚರಂಡಿ ಮಾರ್ಗ ಬದಲಾವಣೆ ಮಾಡಬೇಕಿದ್ದು, ಜಲಮಂಡಳಿ ಅಧಿಕಾರಿಗಳ ಜೊತೆ ಮಾತನಾಡಿ ಬದಲಾವಣೆ ಕಾಮಗಾರಿ ಶೀಘ್ರವಾಗಿ ಮುಗಿಸುವಂತೆ ಸೂಚಿಸಿದರು.

ಇನ್ನೂ ಪೂರ್ಣಗೊಂಡಿಲ್ಲ ಭೂಸ್ವಾಧೀನ

‘ಹೆಚ್ಚುವರಿಯಾಗಿ ನಿರ್ಮಾಣವಾಗಲಿರುವ 16 ಪಿಲ್ಲರ್‌ಗಳ ಸಲುವಾಗಿ ಬಿಬಿಎಂಪಿ ಇಲ್ಲಿ 783 ಚದರ ಮೀಟರ್ ಭೂಸ್ವಾಧೀನ‌ ಮಾಡಿಕೊಳ್ಳಬೇಕಿದೆ. ಜಲಮಂಡಳಿ ಪೈಪ್ ಲೈನ್ ಸಹ ಇದೆ. ಇವುಗಳ ಬದಲಾವಣೆಗೆ ಒಟ್ಟು ₹60 ಕೋಟಿ ವೆಚ್ಚವಾಗಲಿದೆ. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂಟು ಪಿಲ್ಲರ್‌ ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕಾರ ಅನುಮೋದನೆ ನೀಡಿದ ಬಳಿಕ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುತ್ತೇವೆ’ ಎಂದು ರಮೇಶ್‌ ತಿಳಿಸಿದರು

***

"ಕಚೇರಿಗೆ ನಿತ್ಯ ಇದೇ ಮಾರ್ಗದಲ್ಲಿ ಸಂಚರಿಸುತ್ತೇನೆ. ಸ್ತೆ ಕಿರಿದಾದ ಕಾರಣ ವಾಹನ ನಿಧಾನವಾಗಿ ಚಲಾಯಿಸಬೇಕು. ಸಿಗ್ನಲ್ ಆಗಾಗ ಬೀಳುತ್ತಲೇ ಇರುತ್ತದೆ.
- ಎಸ್‌.ಪ್ರಿಯತೋಷ್‌, ಬೈಕ್ ಸವಾರ

ಕುದುರೆ ರೇಸ್‌ ಇದ್ದ ವೇಳೆ ಈ ಮಾರ್ಗದಲ್ಲಿ ವಾಹನದಟ್ಟಣೆ ಅಧಿಕವಾಗಿರುತ್ತದೆ. ರಸ್ತೆ ಕಿರಿದಾದ ಕಾರಣ ನಿತ್ಯ ಬೆಳಿಗ್ಗೆ, ಸಂಜೆ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ. 

-ಸಂಚಾರಿ ಪೊಲೀಸ್‌ ಸಿಬ್ಬಂದಿ 

Post Comments (+)