ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಪತ್ನಿ ವಿಚಾರಣೆ

7
ಹಿಂದೂ ಯುವತಿಯನ್ನು ಮನೆಯಲ್ಲಿಟ್ಟುಕೊಂಡ ಆರೋಪ

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಪತ್ನಿ ವಿಚಾರಣೆ

Published:
Updated:

ಬೆಂಗಳೂರು: ಗುಜರಾತ್‌ ಮೂಲದ ಹಿಂದೂ ಯುವತಿಯೊಬ್ಬರನ್ನು ಕೇರಳದ ಮುಸ್ಲಿಂ ಯುವಕನೊಬ್ಬ ಪ್ರೀತಿಸಿ ಮದುವೆಯಾದ ಬಳಿಕ ಮತಾಂತರಗೊಳಿಸಿ, ಐಎಸ್‌ (ಇಸ್ಲಾಮಿಕ್‌ ಸ್ಟೇಟ್‌) ಸಂಘಟನೆಗೆ ಸೇರಿಸಲು ಪ್ರಯತ್ನಿಸಿದ್ದ ಎನ್ನಲಾದ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ನಡೆಸುತ್ತಿದ್ದಾರೆ. ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಕಲಬುರ್ಗಿ ಉಪ ಆಯುಕ್ತ ಇರ್ಷಾದ್ ಉಲ್ಲಾ ಖಾನ್‌ ಅವರ ಪತ್ನಿಯ ವಿಚಾರಣೆ ನಡೆಸಿದ್ದಾರೆ.

ರಿಯಲ್‌ ಎಸ್ಟೇಟ್‌ ಉದ್ಯಮಿ ಪುತ್ರ ನಜೀರ್‌ ಖಾನ್‌ ಬೆಂಗಳೂರಿನಲ್ಲಿ ಓದುತ್ತಿದ್ದಾಗ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ಪ್ರೀತಿಗೆ ಯುವತಿ ಮನೆಯವರು ಅಡ್ಡಿಯಾಗಿದ್ದರು. ಆ ಸಮಯದಲ್ಲಿ ಇರ್ಷಾದ್‌ ಅವರ ಪತ್ನಿ 15 ದಿನ ತಮ್ಮ ಮನೆಯಲ್ಲಿ ಯುವತಿಗೆ ಆಶ್ರಯ ನೀಡಿದ್ದರು ಎನ್ನಲಾಗಿದೆ. 

ಇರ್ಷಾದ್‌ ಇಲ್ಲಿನ ಜೀವನಬಿಮಾ ನಗರದ ಡೈಮಂಡ್‌ ಡಿಸ್ಟ್ರಿಕ್‌ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಹೊಂದಿದ್ದಾರೆ. ಈ ಮನೆಯಲ್ಲಿ ಅವರ ಪತ್ನಿ, ಮಕ್ಕಳು ವಾಸವಿದ್ದಾರೆ. ತಿಂಗಳ ಎರಡನೇ ಶನಿವಾರ, ಭಾನುವಾರ ಮಾತ್ರ ಉಪ ಆಯುಕ್ತರು ಬಂದು ಹೋಗುತ್ತಾರೆ. ಜೂನ್‌ 6ರಂದು ಇರ್ಷಾದ್‌ ಅವರ ಮನೆಗೆ ಬಂದಿದ್ದ ಎನ್‌ಐಎ ಅಧಿಕಾರಿಗಳು ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ನಜೀರ್‌ ಪರಿಚಯ ಕುರಿತು ಅವರ ಪತ್ನಿಯನ್ನು ಪ್ರಶ್ನಿಸಿದ್ದಾರೆ. ಬೆಂಗಳೂರು, ಹೊರ ರಾಜ್ಯಗಳಲ್ಲಿ ಯುವಕನ ಜೊತೆ ಸಂಪರ್ಕ ಹೊಂದಿರುವ ಅನೇಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏನಿದು ಪ್ರಕರಣ?: ನಾಲ್ಕು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಓದುತ್ತಿದ್ದ ಯುವಕ– ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಆನಂತರ ದಂಪತಿ ಸೌದಿಗೆ ಹೋಗಿದ್ದರು. ಯುವತಿ ಕಳೆದ ವರ್ಷ ಪತಿಯ ವಿರುದ್ಧ ದೂರು ನೀಡಿದ್ದರು. ರಾಜತಾಂತ್ರಿಕ ಮಾರ್ಗಗಳ ಮುಖಾಂತರ ಅವರನ್ನು ವಾಪಸ್‌ ಕರೆತರಲಾಯಿತು.

ಜನವರಿ 28ರಂದು ಎನ್‌ಐಎ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿರುವ ಯುವತಿ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಪತ್ನಿ ಜೊತೆಗಿನ ಸಂಪರ್ಕ ಕುರಿತು ವಿವರಿಸಿದ್ದಾರೆ.

‘ಇರ್ಷಾದ್‌ ಪತ್ನಿ ತಮ್ಮ ಲ್ಯಾಪ್‌ಟಾಪ್‌ನಲ್ಲಿ ಕೆಲವು ಹಿಂದೂ ಯುವತಿಯರ ಸಂಪೂರ್ಣ ಮಾಹಿತಿ ಇಟ್ಟುಕೊಂಡಿದ್ದಾರೆ. ಅವರನ್ನು ಮತಾಂತರಗೊಳಿಸಿ, ಸೌದಿಗೆ ಕಳುಹಿಸಲು ಯತ್ನಿಸುತ್ತಿದ್ದಾರೆ’ ಎಂದು ಕೇಳಿಬಂದಿರುವ ದೂರುಗಳನ್ನು ಎನ್‌ಐಎ ಪರಿಶೀಲಿಸುತ್ತಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಇರ್ಷಾದ್‌, ಅಧಿಕಾರಿಗಳು ಒಂದು ಲ್ಯಾಪ್‌ಟಾಪ್‌ ಹಾಗೂ ಒಂದು ಮೊಬೈಲ್‌ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

‘ನಾವು ಯಾವುದೇ ತಪ್ಪೂ ಮಾಡಿಲ್ಲ. ಹಿಂದೂ ಯುವತಿಯನ್ನು ಮನೆಯಲ್ಲಿ ಇಟ್ಟುಕೊಂಡಿರಲಿಲ್ಲ. ಯಾರನ್ನೂ ಮತಾಂತರಿಸುವ ಪ್ರಯತ್ನ ಮಾಡಿಲ್ಲ. ಸರ್ಕಾರಿ ಅಧಿಕಾರಿಯಾಗಿ ಸದ್ಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ. ಪ್ರಕರಣದ ತನಿಖೆಗೆ ಸಹಕಾರ ನೀಡುತ್ತೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !