ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಲ್‌ ಪಾವತಿಗೆ ಭಾರಿ ಕಮಿಷನ್ ಕೇಳುತ್ತಿದ್ದಾರೆ: ರಾಜ್ಯ ಗುತ್ತಿಗೆದಾರರ ಸಂಘ

ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗುತ್ತಿಗೆದಾರರ ಸಂಘದ ದೂರು
Published 14 ಅಕ್ಟೋಬರ್ 2023, 15:48 IST
Last Updated 14 ಅಕ್ಟೋಬರ್ 2023, 15:48 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಬಿಲ್ ಪಾವತಿಗೆ ಬಿಬಿಎಂಪಿ ಅಧಿಕಾರಿಗಳು ಭಾರಿ ಮೊತ್ತದ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರಿತ್ತಿದೆ.

ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ನೇತೃತ್ವದ ನಿಯೋಗವು ಮುಖ್ಯಮಂತ್ರಿಯವರನ್ನು ಶನಿವಾರ ಭೇಟಿಮಾಡಿ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಅಹವಾಲು ಸಲ್ಲಿಸಿತು. ಈ ಸಂದರ್ಭದಲ್ಲಿ ಭ್ರಷ್ಟಾಚಾರದ ವಿಷಯ ಪ್ರಸ್ತಾಪಿಸಿದ್ದು, ಕೆಲವು ಇಲಾಖೆಗಳಲ್ಲಿ ಬಾಕಿ ಬಿಲ್‌ ಪಾವತಿಗೆ ಭಾರಿ ಮೊತ್ತದ ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಪ್ರತಿನಿಧಿಗಳು ದೂರಿದ್ದಾರೆ.

ಮುಖ್ಯಮಂತ್ರಿಯವರ ಭೇಟಿ ಬಳಿಕ ‘ಪ್ರಜಾವಾಣಿ’ ಜತೆ ಮಾತನಾಡಿದ ಡಿ. ಕೆಂಪಣ್ಣ, ‘ಬಿಬಿಎಂಪಿಯಲ್ಲಿ ಬಾಕಿ ಬಿಲ್‌ ಪಾವತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಮತ್ತು ಪ್ರಧಾನ ಎಂಜಿನಿಯರ್‌ ಇಬ್ಬರೂ ಇದಕ್ಕೆ ಕಾರಣ. ಮೂರು ವರ್ಷಗಳ ಹಳೆಯ ಬಿಲ್‌ಗಳ ಪಾವತಿಗೆ ಭಾರಿ ಮೊತ್ತದ ಕಮಿಷನ್‌ ಕೇಳಲಾಗುತ್ತಿದೆ. ಅಧಿಕಾರಿಗಳ ಹೆಸರು ಸಮೇತ ಮುಖ್ಯಮಂತ್ರಿಯವರಿಗೆ ದೂರು ಹೇಳಿದ್ದೇವೆ’ ಎಂದರು.

‘ಲೋಕೋಪಯೋಗಿ ಇಲಾಖೆಯಲ್ಲಿ ಭ್ರಷ್ಟಾಚಾರ ತುಸು ನಿಯಂತ್ರಣದಲ್ಲಿದೆ.  ಉಳಿದ ಇಲಾಖೆಗಳಲ್ಲಿ ಬಿಲ್‌ ಪಾವತಿಯಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹೆಚ್ಚಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿಯವರ ಗಮನಕ್ಕೆ ತಂದಿದ್ದೇವೆ. ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಗುತ್ತಿಗೆದಾರರ ಸಂಘವು ಹೋರಾಟ ಆರಂಭಿಸಲಿದೆ ಎಂಬುದನ್ನೂ ಮುಖ್ಯಮಂತ್ರಿಯವರಿಗೆ ತಿಳಿಸಿದ್ದೇವೆ’ ಎಂದು ಹೇಳಿದರು.

ಗುತ್ತಿಗೆದಾರರ ಸಂಘದ ನಿಯೋಗದ ಜತೆಗಿನ ಸಭೆಯಲ್ಲಿ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ‌ ರಾಜ್‌ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.

ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಆರ್‌. ಮಂಜುನಾಥ್‌, ಉಪಾಧ್ಯಕ್ಷ ಬಿ.ಸಿ. ದಿನೇಶ್‌, ಪ್ರಧಾನ ಕಾರ್ಯದರ್ಶಿ ಜಿ.ಎಂ. ರವೀಂದ್ರ, ಖಜಾಂಚಿ ಡಿ.ಎಂ. ನಾಗರಾಜ್‌, ಜಂಟಿ ಕಾರ್ಯದರ್ಶಿ ಎಂ. ರಮೇಶ್‌ ನಿಯೋಗದಲ್ಲಿದ್ದರು.

‘₹20 ಸಾವಿರ ಕೋಟಿ ಬಾಕಿ’

ವಿವಿಧ ಇಲಾಖೆಗಳಿಂದ ₹20000 ಕೋಟಿಯಷ್ಟು ಬಿಲ್‌ ಪಾವತಿ ಬಾಕಿ ಇದೆ.  ಐದೂವರೆ ತಿಂಗಳಿನಿಂದ ಬಿಲ್‌ ಪಾವತಿ ಆಗಿಲ್ಲ.  ಆದಷ್ಟು ಬೇಗ ಬಿಲ್‌ ಪಾವತಿಗೆ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಕೆಂಪಣ್ಣ ಹೇಳಿದ್ದಾರೆ. ಬಿಬಿಎಂಪಿಯಲ್ಲಿನ ಭ್ರಷ್ಟಾಚಾರದ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವರಾದ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಚರ್ಚಿಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಹದಿನೈದು ದಿನಗಳೊಳಗೆ ಈ ಸಮಸ್ಯೆಗೆ ಪರಿಹಾರ ದೊರಕದಿದ್ದರೆ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕೆಂಪಣ್ಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT