ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಭ್ರಷ್ಟರ ‘ಕಾಮಧೇನು’, ಕಟ್ಟಡ ನಿರ್ಮಾಣ– ಭ್ರಷ್ಟರಿಗೆ ಝಣ ಝಣ ಕಾಂಚಾಣ

Last Updated 5 ಜೂನ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ನಗರಾಡಳಿತ ಸಂಸ್ಥೆಗಳಲ್ಲಿ ಲಂಚ ನೀಡದೇ ಯಾವುದೇ ಸೇವೆ ಪಡೆಯುವುದು ದುಸ್ತರ ಎಂಬ ಸ್ಥಿತಿ ಇದೆ. ಸಣ್ಣ ಪುಟ್ಟ ನಗರಾಡಳಿತ ಸಂಸ್ಥೆಗಳಲ್ಲಿ ಭ್ರಷ್ಟಾಚಾರ ಮಿತ ಪ್ರಮಾಣದಲ್ಲಿ ಇದ್ದರೆ, ರಾಜಧಾನಿಯ ಆಡಳಿತದ ಚುಕ್ಕಾಣಿ ಹಿಡಿದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳಂತೂ (ಬಿಡಿಎ) ಭ್ರಷ್ಟಾಚಾರದ ಕೂಪಗಳಾಗಿ ಬಿಟ್ಟಿವೆ.

ಬಿಬಿಎಂಪಿಯಲ್ಲಂತೂ ಯಾವುದೇ ಸೇವೆಯಲ್ಲಿನ ಭ್ರಷ್ಟಾಚಾರ ಒಂದು ಬಗೆಯದ್ದಾದರೆ, ಕಾಮಗಾರಿಗಳಲ್ಲಿ ನಡೆಯುವ ಭ್ರಷ್ಟಾಚಾರದ್ದು ಇನ್ನೊಂದು ಕರಾಳ ರೂಪ. ಈ ಪಾಲಿಕೆಯು ಭ್ರಷ್ಟ ಅಧಿಕಾರಿಗಳ ಪಾಲಿಗೆ ಕಾಮಧೇನುವಿನಂತಿದೆ.

ಕಟ್ಟಡ ಮಾಲೀಕರು ಅಧಿಕಾರಿಗಳ ಕೈ ಬಿಸಿ ಮಾಡಿದರೆ ಒಂದು ರೀತಿಯ ತೆರಿಗೆ ಲೆಕ್ಕ; ಅವರ ಕೈ ಬಿಸಿ ಮಾಡದಿದ್ದರೆ ಬೇರೆಯದೇ ಲೆಕ್ಕ. ‘ನಿಯಮ ಪ್ರಕಾರ ನೀವು ಇಂತಿಷ್ಟು ತೆರಿಗೆ ಕಟ್ಟಬೇಕು. ನಮ್ಮನ್ನು ಚೆನ್ನಾಗಿ ನೋಡಿಕೊಂಡರೆ ಇಷ್ಟು ತೆರಿಗೆ ಉಳಿಸಬಹುದು’ ಎಂದು ನೇರವಾಗಿ ಚೌಕಾಸಿಗೆ ಇಳಿಯುವ ಅಧಿಕಾರಿಗಳು ಇಲ್ಲಿದ್ದಾರೆ.

ಇನ್ನು ದೊಡ್ಡ ದೊಡ್ಡ ವಾಣಿಜ್ಯ ಕಟ್ಟಡಗಳು ನೂರಾರು ಕೋಟಿ ರೂಪಾಯಿ ಲೆಕ್ಕದಲ್ಲಿ ತೆರಿಗೆ ವಂಚಿಸಲು ಅಧಿಕಾರಿಗಳೇ ನೆರವಾದ ಹಾಗೂ ಅಕ್ರಮ ಬೆಳಕಿಗೆ ಬಂದ ಬಳಿಕ ಸೇವೆಯಿಂದ ಅಮಾನತುಗೊಂಡ ಉದಾಹರಣೆಗಳೂ ಇಲ್ಲಿವೆ.

ಉದ್ದಿಮೆ ಪರವಾನಗಿ ಪಡೆಯುವುದಕ್ಕೆ, ಅದನ್ನು ನವೀಕರಿಸುವುದಕ್ಕೆ ಲಂಚ ನೀಡಲೇಬೇಕು ಎಂಬ ಸ್ಥಿತಿ ಇತ್ತು. ಕೆಲಸ ಕಾರ್ಯಗಳನ್ನು ಸುಲಲಿತಗೊಳಿಸುವ ಕಾರ್ಯಕ್ರಮ (ಈಸ್‌ ಆಫ್ ಡೂಯಿಂಗ್ ಬಿಸಿನೆಸ್‌) ಜಾರಿಯಾದ ಬಳಿಕ ಈ ವ್ಯವಸ್ಥೆ ಡಿಜಿಟಲೀಕರಣಗೊಂಡಿದೆ. ಆ ಬಳಿಕವೂ ವ್ಯಾಪಾರಿಗಳು ಅಧಿಕಾರಿಗಳಿಗೆ ಮಾಮೂಲಿ ನೀಡುವುದು ತಪ್ಪಿಲ್ಲ. ‘ನಾವು ಆನ್‌ಲೈನ್‌ನಲ್ಲೇ ಉದ್ದಿಮೆ ಪರವಾನಗಿ ನವೀಕರಿಸಿಕೊಂಡರೆ, ತಳಮಟ್ಟದ ಅಧಿಕಾರಿಗಳಿಗೆ ಮಾಮೂಲಿ ಕೊಡುವುದು ಕೊಡಲೇಬೇಕು. ಇಲ್ಲದಿದ್ದರೆ, ಏನಾದರೂ ಒಂದು ತಪ್ಪು ಹುಡುಕಿ ದಂಡ ವಿಧಿಸುತ್ತಾರೆ’ ಎಂದು ಅವೆನ್ಯೂ ರಸ್ತೆಯ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

ಕಾಮಗಾರಿಯಲ್ಲಿ ಅಕ್ರಮ ಸಹಜ ಎಂಬಂತಾಗಿದೆ. ರಾಜರಾಜೇಶ್ವರಿನಗರ, ಮಲ್ಲೇಶ್ವರ ಹಾಗೂ ಗಾಂಧಿನಗರ ವಲಯಗಳಲ್ಲಿ 2008 ರಿಂದ 2012ರ ನಡುವೆ ನಡೆದಿದ್ದ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ ದಾಸ್‌ ಅವರ ಸಮಿತಿ ವರದಿ ನೀಡಿತ್ತು. ಆದರೆ, ಅಕ್ರಮ ಸಾಬೀತಾದ ಬಳಿಕವೂ ಯಾವ ಅಧಿಕಾರಿಗೂ ಶಿಕ್ಷೆ ಆಗಲೇ ಇಲ್ಲ.

ರಾಜರಾಜೇಶ್ವರಿನಗರ (ಆರ್‌.ಆರ್‌. ನಗರ) ವಿಧಾನಸಭಾ ಕ್ಷೇತ್ರದಲ್ಲಿ ಅನುಷ್ಠಾನಗೊಳ್ಳದ ಕಾಮಗಾರಿಗೆ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಬಿಬಿಎಂಪಿ ₹118.26 ಕೋಟಿ ಬಿಡುಗಡೆ ಮಾಡಿ ಅಕ್ರಮ ಎಸಗಿದ ಪ್ರಕರಣವನ್ನು ಲೋಕಾಯುಕ್ತ ತಾಂತ್ರಿಕ ಲೆಕ್ಕಪರಿಶೋಧನಾ ಕೋಶ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. ಆದರೂ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಮರೀಚಿಕೆ.

ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಟಿಡಿಆರ್‌ ನೀಡುವ ವಿಚಾರದಲ್ಲಿ ನಡೆದ ಅಕ್ರಮಗಳಿಗಂತೂ ಲೆಕ್ಕವೇ ಇಲ್ಲ. ಇಲ್ಲದ ಜಮೀನು, ಕಟ್ಟಡಗಳಿಗೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕು ಪತ್ರವನ್ನು (ಟಿಡಿಆರ್‌) ಅಕ್ರಮವಾಗಿ ಪಡೆದು ₹27.68 ಕೋಟಿಗೆ ಮಾರಾಟ ಮಾಡಿದ ದಲ್ಲಾಳಿಗಳು, ಬಿಬಿಎಂಪಿಯ ನಾಲ್ವರು ಎಂಜಿನಿಯರ್‌ಗಳು ಸೇರಿ 16 ಮಂದಿಯ 25 ಬ್ಯಾಂಕ್‌ ಖಾತೆಗಳಲ್ಲಿದ್ದ ₹85.24 ಲಕ್ಷ ಮುಟ್ಟುಗೋಲು ಪ್ರಕ್ರಿಯೆ ಮುಂದುವರಿಸಲು ಭ್ರಷ್ಟಾಚಾರ ನಿಗ್ರಹ ದಳಕ್ಕೆ(ಎಸಿಬಿ) ಸರ್ಕಾರ ಅನುಮತಿ ನೀಡಿತ್ತು. ಕೆಲ ಕಾಲ ಸದ್ದು ಮಾಡಿದ ಈ ಹಗರಣ ಈಗ ತೆರೆಮರೆಗೆ ಸರಿದಿದೆ.

ರಸ್ತೆ ಇತಿಹಾಸವನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬುದು ದಶಕಗಳ ಬೇಡಿಕೆ. ಈಗ ವೆಬ್‌ಸೈಟ್‌ನಲ್ಲಿ ಕಾಮಗಾರಿಗಳ ಇತಿಹಾಸವನ್ನೇನೂ ಪ್ರಕಟಿಸಲಾಗುತ್ತಿದೆ, ಆದರೆ, ಅದು ಯಾವ ಕಾಮಗಾರಿಗೆ ಸಂಬಂಧಿಸಿದ್ದು ಎನ್ನುವುದನ್ನು ಹುಡುಕುವುದು ಕಷ್ಟ. ಬಿಲ್‌ ಪಾವತಿಯಲ್ಲಿ ನಿಯಮ ಉಲ್ಲಂಘನೆ ಆಗಬಾರದು ಎಂಬ ಕಾರಣಕ್ಕೆ ಸಮಗ್ರ ಹಣಕಾಸು ನಿರ್ವಹಣೆ ವ್ಯವಸ್ಥೆ (ಐಎಫ್‌ಎಂಎಸ್‌) ತಂತ್ರಾಂಶ ಜಾರಿಗೆ ತರಲಾಯಿತು. ಈ ಡಿಜಿಟಲ್‌ ವ್ಯವಸ್ಥೆಯ ಕಣ್ಣಿಗೆ ಮಣ್ಣೆರಚುವ ಚಾಣಾಕ್ಷ ಅಧಿಕಾರಿಗಳು ಬಿಬಿಎಂಪಿಯಲ್ಲಿದ್ದಾರೆ.

‘ಬಿಬಿಎಂಪಿಯಲ್ಲಿ ಹುದ್ದೆ ಗಿಟ್ಟಿಸಿಕೊಂಡರೆ ಇಲ್ಲಿ ಹುಲುಸಾದ ‘ಫಸಲು’ ತೆಗೆಯಬಹುದು ಎಂಬುದು ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿದೆ. ಹಾಗಾಗಿ ಇಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸಲು ಅಧಿಕಾರಿಗಳು ದುಂಬಾಲು ಬೀಳುತ್ತಾರೆ. ಒಂದು ವರ್ಷದ ಮಟ್ಟಿಗೆ ಇಲ್ಲಿ ಕಾರ್ಯನಿರ್ವಹಿಸುವುದಕ್ಕೂ ಲಕ್ಷಗಟ್ಟಲೆ ಲಂಚ ನೀಡಲು ಹಿಂದೇಟು ಹಾಕುವುದಿಲ್ಲ. ಇದೆಲ್ಲ ಸರ್ಕಾರ ನಡೆಸುವವರಿಗೆ ತಿಳಿಯದ ವಿಚಾರವನೇನಲ್ಲ. ಆದರೆ, ಇದರಲ್ಲಿ ಅವರಿಗೂ ಪಾಲು ಇದೆ. ಹಾಗಾಗಿ ಭ್ರಷ್ಟ ವ್ಯವಸ್ಥೆ ಸುಧಾರಿಸುವುದು ಸರ್ಕಾರಕ್ಕೂ ಬೇಕಿಲ್ಲ’ ಎಂದು ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಮಾಹಿತಿ ಕೇಳಿದರೆ ‘ಕರ್ತವ್ಯಕ್ಕೆ ಅಡ್ಡಿ’ ನೆಪದಲ್ಲಿ ದೂರು
ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದ ಬಗ್ಗೆ ಯಾರಾದರೂ ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೆ, ಅಧಿಕಾರಿಗಳು ವಿವರ ಕೊಡಲೇಬೇಕಾಗುತ್ತದೆ. ಇಂತಹ ಸಂದಿಗ್ಧ ಸಂದರ್ಭವನ್ನು ಎದುರಿಸಲು ಅಧಿಕಾರಿಗಳು ‘ಕರ್ತವ್ಯಕ್ಕೆ ಅಡ್ಡಿ’ ಎಂದು ಸುಳ್ಳು ದೂರು ದಾಖಲಿಸುವ ತಂತ್ರವನ್ನು ಅನುಸರಿಸುತ್ತಾರೆ.

ಯಡಿಯೂರು ವಾರ್ಡ್‌ನಲ್ಲಿ ಬಿಬಿಎಂಪಿ ಕಚೇರಿ ಸಮೀಪವೇ ಅನಧಿಕೃತವಾಗಿ ಐದು ಮಹಡಿಗಳ ಕಟ್ಟಡವನ್ನು ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿದ್ದರು. ಕಣ್ಣೆದುರೇ ಅಕ್ರಮ ಕಟ್ಟಡ ನಿರ್ಮಾಣವಾಗಿದ್ದರೂ ಅಧಿಕಾರಿಗಳು ಚಕಾರ ಎತ್ತಲಿಲ್ಲ. ಈ ಕಟ್ಟಡಕ್ಕೆ ಅನುಮತಿ ನೀಡಿದ ವಿವರ ಕೊಡಿ ಎಂದು ಸ್ಥಳೀಯರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರು. ಆಗ ಆ ಕಟ್ಟಡ ‘ಅನಧಿಕೃತ’ ಎಂಬುದನ್ನು ಅಧಿಕಾರಿಗಳು ಅಧಿಕೃತವಾಗಿಯೇ ಘೋಷಿಸಬೇಕಾಯಿತು. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಉತ್ತರ ನೀಡಬೇಕಾಗಿ ಬಂದಾಗ ಆ ಅಧಿಕಾರಿ ಮಾಹಿತಿ ಕೇಳಿದ ಹಿರಿಯ ನಾಗರಿಕರೊಬ್ಬರ ಮೇಲೆ ‘ಕರ್ತವ್ಯಕ್ಕೆ ಅಡ್ಡಿ’ ಪಡಿಸಿದ ಆರೋಪ ಹೊರಿಸಿ ದೂರು ನೀಡುವ ಮೂಲಕ ಸೇಡು ತೀರಿಸಿಕೊಂಡರು. ಮಾಹಿತಿ ಕೇಳಿದ ತಪ್ಪಿಗೆ ಸ್ಥಳೀಯ ವ್ಯಕ್ತಿ ಎರಡು ದಿನ ಜೈಲಿನಲ್ಲಿ ಕಳೆಯಬೇಕಾಯಿತು. ದುರಂತವೆಂದರೆ, ಕಣ್ಣೆದುರೇ ಐದು ಅಂತಸ್ತಿನ ಕಟ್ಟಡ ನಿರ್ಮಾಣವಾದರೂ ಕ್ರಮ ಕೈಗೊಳ್ಳದ ಬಿಬಿಎಂಪಿಯ ಎಂಜಿನಿಯರ್‌ ಮೇಲೆ ಯಾವ ಕ್ರಮವೂ ಆಗಿಲ್ಲ!

ಕಟ್ಟಡ ನಿರ್ಮಾಣ– ಭ್ರಷ್ಟರಿಗೆ ಝಣ ಝಣ ಕಾಂಚಾಣ
ಬೆಂಗಳೂರು: ‘ನಗರಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಮಂಜೂರಾತಿಗಳು ಆನ್‌ಲೈನ್‌ನಲ್ಲೇ ಲಭ್ಯ. ಕಟ್ಟಡ ನಿರ್ಮಿಸುವುದಕ್ಕೆ ಈಗ ಲಂಚ ನೀಡುವ ಪ್ರಮೇಯವೇ ಇಲ್ಲ...’ ಇಂತಹ ಹೇಳಿಕೆಗಳಿಗೆ ಬರವಿಲ್ಲ. ಆನ್‌ಲೈನ್‌ ಮಂಜೂರಾತಿಗಳು ಜಾರಿಗೆ ಬಂದ ಬಳಿಕವೂ ಕಟ್ಟಡ ನಕ್ಷೆಗೆ ಮಂಜೂರಾತಿ ಪಡೆಯುವುದರಿಂದ ಹಿಡಿದು ಸ್ವಾಧೀನಾನುಭವ ಪತ್ರ (ಒ.ಸಿ) ಪಡೆಯುವವರೆಗಿನ ಯಾವ ಪ್ರಕ್ರಿಯೆಗಳಲ್ಲೂ ‘ಲಂಚ’ ನೀಡದೇ ಕಡತ ಕೊಂಚವೂ ಮುಂದಕ್ಕೆ ಸಾಗಲು ಸಾಧ್ಯವೇ ಇಲ್ಲವೆಂಬಂಥ ಪರಿಸ್ಥಿತಿ ಇದೆ.

ಬಿಬಿಎಂಪಿ ವ್ಯಾಪ್ತಿಯಲ್ಲಂತೂ ಜಮೀನಿಗೆ ಸಂಬಂಧಿಸಿದ ದಾಖಲೆಗಳೆಲ್ಲವೂ ಸಮರ್ಪಕವಾಗಿದ್ದರೂ ಲಂಚ ನೀಡದೇ ಅಗತ್ಯ ಮಂಜೂರಾತಿಗಳು ಸಿಗುವುದೇ ಇಲ್ಲ. ಕಟ್ಟಡ ನಿರ್ಮಾಣ ಯೋಜನೆ ರೂಪಿಸುವಾಗಲೇ ಲಂಚಕ್ಕೆಂದೇ ನಿರ್ದಿಷ್ಟ ಮೊತ್ತವನ್ನು ತೆಗೆದಿಡಬೇಕಾದ ಅನಿವಾರ್ಯ ಸ್ಥಿತಿ ಇದೆ ಎನ್ನುತ್ತಾರೆ ಕಟ್ಟಡ ನಿರ್ಮಾಣ ಸಲಹಾ ಸಂಸ್ಥೆಗಳ ಎಂಜಿನಿಯರ್‌ಗಳು.

ಕಟ್ಟಡ ಪರವಾನಗಿ ನೀಡಲೆಂದೇ ಬಿಬಿಎಂಪಿ ಕೆಲಸ ಕಾರ್ಯಗಳನ್ನು ಸುಲಲಿತಗೊಳಿಸುವ ಯೋಜನೆಯಡಿ ಆನ್‌ಲೈನ್‌ ವ್ಯವಸ್ಥೆಯನ್ನು ರೂಪಿಸಿದ್ದು, ಎರಡು ವರ್ಷಗಳಿಂದ ಇದು ಚಾಲ್ತಿಯಲ್ಲಿದೆ. 4 ಸಾವಿರ ಚ.ಮೀ. ವಿಸ್ತೀರ್ಣವನ್ನು ಮೀರದ ವಸತಿ ಕಟ್ಟಡಗಳಿಗೆ ಕಟ್ಟಡ ನಕ್ಷೆಯನ್ನು ಹಾಗೂ ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಆನ್‌ಲೈನ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿದ ಮೂರು ದಿನಗಳ ಒಳಗೆ ಮಂಜೂರಾತಿ ನೀಡಬೇಕು. ಇದಕ್ಕಾಗಿ ಯಾವುದೇ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸುವ ಅಗತ್ಯ ಇಲ್ಲ. ಆದರೆ, ವಾಸ್ತವ ಬೇರೆಯೇ ಇದೆ.ಬಿಬಿಎಂಪಿಯೇ ಮಾನ್ಯ ಮಾಡಿದ ಕಟ್ಟಡ ತಜ್ಞರೇ ಆನ್‌ಲೈನ್‌ನಲ್ಲಿ ಸಲ್ಲಿಸುವ ಕಟ್ಟಡ ನಕ್ಷೆ ಹಾಗೂ ದಾಖಲೆಗಳು ಸಮರ್ಪಕವಾಗಿದ್ದರೂ, ಅಧಿಕಾರಿಗಳಿಗೆ ಸಂದಾಯ ಆಗಬೇಕಾದ ಮೊತ್ತ ತಲುಪದೇ ಮಂಜೂರಾತಿ ಸಿಗದು. ಏನಾದರೂ ತಕರಾರು ತೆಗೆದು ಅರ್ಜಿಯನ್ನು ತಿರಸ್ಕರಿಸುತ್ತಾರೆ ಎಂದು ಅಳಲು ತೋಡಿಕೊಳ್ಳುತ್ತಾರೆ ಅವರು.

‘ಆನ್‌ಲೈನ್‌ನಲ್ಲಿ ಸಲ್ಲಿಕೆಯಾಗುವ ಅರ್ಜಿಗಳನ್ನುನಕ್ಷೆ ದೋಷಪೂರಿತವಾಗಿದೆ ಎಂಬ ನೆಪಹೇಳಿ ತಿರಸ್ಕರಿಸಲಾಗುತ್ತದೆ.30 ಅಡಿಗಿಂತ ಹೆಚ್ಚು ಅಗಲದ ರಸ್ತೆ ಪಕ್ಕದಲ್ಲೇ ವಸತಿ ಕಟ್ಟಡ ನಿರ್ಮಿಸುತ್ತಿದ್ದರೂ, ಕಟ್ಟಡಕ್ಕೆ ಪ್ರವೇಶ ಮಾರ್ಗ ಇಲ್ಲ ಎಂದೂ ಎಷ್ಟೋ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 30X40 ಅಡಿಗಿಂತ ಕಡಿಮೆ ವಿಸ್ತೀರ್ಣದ ಸಣ್ಣ ನಿವೇಶನದಲ್ಲಿ ವಾಸದ ಮನೆ ನಿರ್ಮಿಸುವುದಕ್ಕೆ ಎಲ್ಲ ದಾಖಲೆಗಳು ಸಮರ್ಪಕವಾಗಿದ್ದರೂ ಕನಿಷ್ಠ ₹ 10 ಸಾವಿರವಾದರೂ ಲಂಚ ನೀಡಬೇಕು. ಇನ್ನು ನಿವೇಶನದ ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪಗಳಿದ್ದರೆ, ವಲಯ ನಿಬಂಧನೆಗೆ ಅಥವಾ ರಾಜಕಾಲುವೆಯ ಮೀಸಲು ಪ್ರದೇಶಕ್ಕೆ ಸಂಬಂಧಿಸಿದ ತಕರಾರುಗಳಿದ್ದರೆ ಲಂಚದ ಮೊತ್ತ ಏರುತ್ತಲೇ ಹೋಗುತ್ತದೆ’ ಎಂದು ಕಟ್ಟಡ ನಿರ್ಮಾಣ ಸಂಸ್ಥೆಯ ಎಂಜಿನಿಯರ್ ಒಬ್ಬರು ವಿವರಿಸಿದರು.

ನಗರ ಯೋಜನೆ ವಿಭಾಗದಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸಲು ಎಂಜಿನಿಯರ್‌ಗಳು ‘ನಾ ಮುಂದು– ತಾ ಮುಂದು’ ಎಂಬಂತೆ ಪೈಪೋಟಿಗೆ ಬೀಳುತ್ತಾರೆ. ಇಲ್ಲಿ ಕೆಲಸ ಕಡಿಮೆ ಆದರೆ ‘ಕಮಾಯಿ’ ಜಾಸ್ತಿ. ಆಯಕಟ್ಟಿನ ಹುದ್ದೆ ಗಿಟ್ಟಿಸಲು ₹ 50 ಲಕ್ಷದವರೆಗೂ ಲಂಚ ನೀಡಲು ಸಿದ್ಧ ಇರುತ್ತಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಬಿಬಿಎಂಪಿ ಅಧಿಕಾರಿಯೊಬ್ಬರು ಒಳಮರ್ಮ ಬಿಚ್ಚಿಟ್ಟರು.

‘ನಗರ ಯೋಜನೆಗೆ ಸಂಬಂಧಿಸಿದ ಎಲ್ಲ ಕಟ್ಟುಪಾಡುಗಳನ್ನು ಅನುಸರಿಸಿ ಕಟ್ಟಡ ನಿರ್ಮಿಸುವುದು ಕನಸಿನ ಮಾತು. ವಲಯ ನಿಬಂಧನೆ, ಸೆಟ್‌ ಬ್ಯಾಕ್‌ಗೆ ಸಂಬಂಧಿಸಿದ ನಿಯಮ, ರಾಜಕಾಲುವೆ, ಕೆರೆಗಳ ಮೀಸಲು ಪ್ರದೇಶಕ್ಕೆ ಕಾಯ್ದಿರಿಸಬೇಕಾದ ಪ್ರದೇಶ... ಹೀಗೆ ಯಾವುದಾದರೂ ಒಂದು ನಿಯಮ ಉಲ್ಲಂಘನೆಗಳು ಇಲ್ಲಿ ಮಾಮೂಲಿ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುವವರಿಂದ ಬರುವ ‘ಮಾಮೂಲಿ’ ವರಮಾನವೂ ಜಾಸ್ತಿ. ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕಿ ಎಂದು ಹೈಕೋರ್ಟ್‌ ಎಷ್ಟೇ ಗಂಟಲು ಹರಿದುಕೊಂಡರೂ ಬಿಬಿಎಂಪಿ ಅಧಿಕಾರಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ವಿವರಿಸಿದರು.

ಸಾಕಪ್ಪಾ ಸಾಕು ಬಿಡಿಎ ಸಹವಾಸ:ಭ್ರಷ್ಟಾಚಾರದಲ್ಲಿ ಬಿಬಿಎಂಪಿಯದು ಒಂದು ರೀತಿಯ ಕತೆಯಾದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದರಲ್ಲಿ (ಬಿಡಿಎ) ಲಂಚದ ಅವತಾರವೇ ಬೇರೆ ರೀತಿಯದು. ಖಾಸಗಿ ಬಡಾವಣೆ ನಕ್ಷೆಗಳಿಗೆ ಅನುಮೋದನೆ ಪಡೆಯುವುದು, ಖಚಿತ ಅಳತೆ ವರದಿ ಪಡೆಯುವುದು... ಹೀಗೆ ಪ್ರತಿಯೊಂದಕ್ಕೂ ‘ಕಾಣಿಕೆ’ ಸಂದಾಯವಾಗಲೇ ಬೇಕು. ಇನ್ನು ಬಿಡಿಎ ಅಭಿವೃದ್ಧಿಪಡಿಸಿದ ಬಡಾವಣೆಗಳಲ್ಲಿ ನಿವೇಶನ ಪಡೆದವರೂ ಮನೆ ಕಟ್ಟಿ ಮುಗಿಸುವಾಗ ಯಾಕಪ್ಪಾ ಬಿಡಿಎ ನಿವೇಶನ ಪಡೆದೆನೋ ಎಂದು ಹೈರಾಣಾಗುವಂತಹ ಸ್ಥಿತಿ ಇದೆ.

ಯಾರದೋ ನಿವೇಶನವನ್ನು ಇನ್ಯಾರದೋ ಹೆಸರಿಗೆ ನೋಂದಣಿ ಮಾಡುವುದು, ಕಡತಗಳನ್ನು ನಾಪತ್ತೆ ಮಾಡಿ ಹಣಕ್ಕಾಗಿ ಪೀಡಿಸುವುದು, ಮೂಲಸೌಕರ್ಯ ಒದಗಿಸಲು ಸತಾಯಿಸುವುದು, ಒಂದೇ ನಿವೇಶನವನ್ನು ಒಬ್ಬರಿಗಿಂತ ಹೆಚ್ಚು ಮಂದಿಯ ಹೆಸರಿಗೆ ನೋಂದಣಿ ಮಾಡುವುದು, ಹಂಚಿಕೆಯಾದ ನಿವೇಶನವನ್ನು ‘ರೀ ಡು’ ಹೆಸರಿನಲ್ಲಿ ದಿಢೀರ್‌ ರದ್ದುಪಡಿಸುವುದು... ಬಿಡಿಎನಲ್ಲಿ ನಡೆಯುವ ಕರ್ಮಕಾಂಡಗಳು ಒಂದೆರಡಲ್ಲ. ಅಧಿಕಾರಿಗಳ ಕೈ ಬಿಸಿ ಮಾಡಿದರೆ, ಅತ್ಯಂತ ಬೇಡಿಕೆ ಇರುವ ಸ್ಥಳದಲ್ಲೇ ಬದಲಿ ನಿವೇಶನವನ್ನು ಒಲಿಸಿಕೊಳ್ಳಬಹುದು. ಅಧಿಕಾರಿಗಳನ್ನು ‘ಖುಷಿ’ಪಡಿಸದೇ ಹೋದರೆ, ಮುಳುಗಡೆಯಾಗುವ ಜಾಗದ ನಿವೇಶನಕ್ಕೂ ಬದಲಿ ನಿವೇಶನ ದಕ್ಕದು.ಬಿಡಿಎ ಬಡಾವಣೆಗೆ ಜಾಗ ನೀಡಿದ ರೈತರು ಕೂಡ ತಮಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತು ಪಡೆಯುವುದಕ್ಕೂ ವರ್ಷಾನುಗಟ್ಟಲೆ ಕಾಯಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT