ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿಯನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಆರೋಪ: ತನಿಖೆಗೆ ಆದೇಶ

Last Updated 31 ಮೇ 2022, 19:35 IST
ಅಕ್ಷರ ಗಾತ್ರ

ಬೆಂಗಳೂರು: ಪತ್ನಿಯನ್ನು ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ ಅಶ್ಲೀಲ ಪೋಟೊ ತೆಗೆದು ಆಕೆಯ ತಂದೆ ಮತ್ತು ಕೆಲವು ಸ್ನೇಹಿತರಿಗೆ ಕಳುಹಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಸಾಫ್ಟ್‌ವೇರ್ ಉದ್ಯೋಗಿಯ ವಿರುದ್ಧ ಹೆಚ್ಚಿನ ತನಿಖೆ ನಡೆಸುವಂತೆ ಹೈಕೋರ್ಟ್ ಆದೇಶಿಸಿದೆ.

'ಪೊಲೀಸರು ನಡೆಸಿರುವ ತನಿಖೆ ಸಮರ್ಪಕವಾಗಿಲ್ಲ. ಹಾಗಾಗಿ, ಹೆಚ್ಚಿನ ತನಿಖೆ ನಡೆಸಲು ನಿರ್ದೇಶಿಸಬೇಕು' ಎಂದು ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

'ವಿವೇಕನಗರ ಠಾಣೆ ಪೊಲೀಸರು 2019ರಲ್ಲಿ ನಡೆಸಿದ ತನಿಖೆ ಕಳಪೆಯಾಗಿದೆ. ಪೊಲೀಸರು ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಬಲವಂತದ ಅಸ್ವಾಭಾವಿಕ ಲೈಂಗಿಕತೆ ಮತ್ತು ಅಶ್ಲೀಲ ಚಿತ್ರಗಳ ಗಂಭೀರ ಆರೋಪಗಳ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಇಂತಹ ಕಳಪೆ ತನಿಖೆ ನಡೆಸುವ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಅಥವಾನಗರ ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಬೇಕು' ಎಂದ ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣವೇನು?: ಬೆಂಗಳೂರಿನ ನಿವಾಸಿಯಾದ ಪತಿ ಮತ್ತು ಛತ್ತೀಸ್‌ಗಡದ ಪತ್ನಿ 2013ರಲ್ಲಿ ಮುಂಬೈನ ಐಐಟಿಯಲ್ಲಿ ಪಿಎಚ್‌.ಡಿ ಮಾಡುತ್ತಿದ್ದಾಗಪರಸ್ಪರ ಪ್ರೀತಿಸಿ, ನಂತರ 2015ರಲ್ಲಿ ಬೆಂಗಳೂರಿನಲ್ಲಿ ವಿವಾಹವಾದರು.

ಮದುವೆಯಾದ ಮೂರು ತಿಂಗಳ ನಂತರ, 'ಪತಿ ನನ್ನನ್ನು ನಿಂದಿಸುತ್ತಾರೆ. ಅಸ್ವಾಭಾವಿಕ ಲೈಂಗಿಕತೆಗೆ ಒತ್ತಾಯಿಸುತ್ತಾರೆ' ಎಂದು ಪತ್ನಿ ಪೋಷಕರ ಮನೆ ಸೇರಿದ್ದರು. ಬಳಿಕ ಉತ್ತಮ ನಡವಳಿಕೆಯಿಂದ ವರ್ತಿಸುವುದಾಗಿ ಪತಿ ನೀಡಿದ್ದ ಭರವಸೆಯ ಮೇರೆಗೆ ಪುನಃ ಗಂಡನ ಮನೆಗೆ ಮರಳಿದ್ದರು.
ಆದರೆ ಪತಿಯ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಾಣದ ಕಾರಣ 2016ರಲ್ಲಿ ಕಾಯಮ್ಮಾಗಿ ಪತಿಯನ್ನು ತೊರೆದಿದ್ದರು.

ಇದಾದನಂತರ ಪತಿಯ ಬೆದರಿಕೆ ಹಿನ್ನೆಲೆಯಲ್ಲಿ ಮಹಿಳೆ, ಛತ್ತೀಸ್‌ಗಢ ಪೊಲೀಸರಿಗೆ ದೂರು ನೀಡಿದ್ದರು. ಪತಿ ಬೆಂಗಳೂರಿನಲ್ಲಿ ನೆಲೆಸಿದ್ದ ಕಾರಣ ಪೊಲೀಸರು ತನಿಖೆಯನ್ನು ನಗರ ಪೊಲೀಸರಿಗೆ ವರ್ಗಾವಣೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT