ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 30 ಲಕ್ಷ ಜೀವವಿಮೆ ಪಾವತಿಗೆ ಕೋರ್ಟ್‌ ಆದೇಶ

ಹೃದಯಾಘಾತ ಅಲ್ಲಗಳೆದಿದ್ದ ಕಂಪನಿ: ಬಿ.ಪಿ ಸಬೂಬು
Last Updated 26 ನವೆಂಬರ್ 2022, 17:15 IST
ಅಕ್ಷರ ಗಾತ್ರ

ಬೆಂಗಳೂರು: ಮನೆಯನ್ನು ಅಡವು ಇರಿಸಿ ಪಡೆದಿದ್ದ ₹ 30 ಲಕ್ಷ ಸಾಲಕ್ಕೆ ಅಷ್ಟೇ ಮೊತ್ತದ ಜೀವ ವಿಮಾ ಪಾಲಿಸಿ ಪಡೆದು ಪ್ರೀಮಿಯಂ ಕಟ್ಟಿದ್ದ ಗ್ರಾಹಕರೊಬ್ಬರ ಸಾವಿನ ನಂತರ ಜೀವ ವಿಮಾ ಹಣ ಪಾವತಿಸಲು ನಿರಾಕರಿಸಿದ್ದ ಎಚ್‌ಡಿಎಫ್‌ಸಿ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ಈ ಕುರಿತಂತೆ ಮೃತ ಮಹಿಳೆಯ ಪತಿ ಸಲ್ಲಿಸಿದ ದೂರಿನ ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಬೆಂಗಳೂರು ನಗರ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಅಧ್ಯಕ್ಷ ಕೆ.ಶಿವರಾಮ್‌ ಹಾಗೂ ಸದಸ್ಯೆ ರೇಖಾ ಸಾಯಣ್ಣವರ ಅವರಿದ್ದ ವಿಭಾಗೀಯ ಪೀಠವು, ‘ವಾರ್ಷಿಕ 9ರಷ್ಟು ಬಡ್ಡಿ ದರದೊಂದಿಗೆ ₹ 30 ಲಕ್ಷ ಮೊತ್ತವನ್ನು ದೂರುದಾರರಿಗೆ ನೀಡಬೇಕು‘ ಎಂದು ಕಂಪನಿಗೆ ಆದೇಶಿಸಿದೆ.

ಪ್ರಕರಣವೇನು?:ನಗರದ ವಿದ್ಯಾರಣ್ಯ ಪುರಂ ನರಸೀಪುರ ಲೇ ಔಟ್‌ ನಿವಾಸಿ ಯಾಗಿದ್ದ ಸುಜಾತಾ ತಮ್ಮ ಮಾಲೀಕತ್ವ ಹೊಂದಿದ್ದ ಸ್ಥಿರಾಸ್ತಿಯನ್ನು ಅಡವು ಇರಿಸಿಎಚ್‌ಡಿಬಿ ಗೃಹಸಾಲದ ಫೈನಾನ್ಸ್‌ ಕಂಪನಿಯಿಂದ ₹ 30 ಲಕ್ಷ ಮುಂಗಡ ಸಾಲ ಪಡೆದಿದ್ದರು ಮತ್ತು ಈ ಸಾಲದ ಗ್ಯಾರಂಟಿಗೆ ಎಚ್‌ಡಿಎಫ್‌ಸಿಯಿಂದ ಪಾಲಿಸಿ ಮಾಡಿಸಿ, ₹ 30 ಸಾವಿರ ಪ್ರೀಮಿಯಂ ಭರ್ತಿ ಮಾಡಿದ್ದರು. ಇದಾದ ಕೆಲ ತಿಂಗಳಲ್ಲೇ ಅಂದರೆ, 2020ರ ಜುಲೈ 7ರಂದು ಮೃತಪಟ್ಟಿದ್ದರು.

ಇವರ ನಿಧನಾನಂತರ ಪಾಲಿಸಿಯ ನಾಮಿನಿ ಹೊಂದಿದ್ದ ಬಿ.ಆರ್. ಗೋಪಾಲ, ‘ಪಾಲಿಸಿ ಮೊತ್ತ ₹ 30 ಲಕ್ಷವನ್ನು ವಾರ್ಷಿಕ 24ರ ಬಡ್ಡಿ ದರದಲ್ಲಿ ನೀಡಬೇಕು’ ಎಂದು ಕೋರಿ ಕಂಪನಿಗೆ ಕ್ಲೇಮು ಅರ್ಜಿ ಸಲ್ಲಿಸಿದ್ದರು. ಆದರೆ, ಕಂಪನಿ ಅರ್ಜಿಯನ್ನು ತಿರಸ್ಕರಿಸಿತ್ತು.

‘ಸುಜಾತಾ ಅವರು ಪಾಲಿಸಿ ಪಡೆಯುವ ಮುನ್ನವೇ ಮಧುಮೇಹ (ಡಯಾಬಿಟೀಸ್), ಅಧಿಕ ರಕ್ತದೊತ್ತಡ (ಬಿಪಿ) ಮತ್ತು ನಿದ್ರೆಯಲ್ಲಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು ಹಾಗೂ ಈ ಕಾಯಿಲೆಗಳ ಕಾರಣಗಳಿಂದಾಗಿಯೇ ಮೃತಪಟ್ಟಿದ್ದಾರೆ. ಅವರು ಹೃದಯಾಘಾತದಿಂದ ಮೃತಪಟ್ಟಿಲ್ಲ. ಹೀಗಾಗಿ, ಕಂಪನಿಯ ಸೇವೆಯಲ್ಲಿ ಯಾವುದೇ ಲೋಪವಾಗಿಲ್ಲ’ ಎಂದು ಸ್ಪಷ್ಟನೆ ನೀಡಿದ್ದರು.

ಇದನ್ನು ಪ್ರಶ್ನಿಸಿ ಬಿ.ಆರ್.ಗೋಪಾಲ, ‘ಗ್ರಾಹಕರ ರಕ್ಷಣಾ ಕಾಯ್ದೆ–2019ರ ಕಲಂ 35ರ ಅಡಿಯಲ್ಲಿ ಪಾಲಿಸಿಯ ಮೊತ್ತವನ್ನು ಪಾವತಿಸುವಂತೆ ಕಂಪನಿಗೆ ಆದೇಶಿಸಬೇಕು‘ ಎಂದು ಕೋರಿ ಬೆಂಗಳೂರು ನಗರ ಜಿಲ್ಲೆಯ ಹೆಚ್ಚುವರಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ವಿಚಾರಣೆ ನಡೆಸಿದ ಪೀಠವು, ವಿಮಾ ಕಂಪನಿ ತನ್ನ ಸೇವೆಯಲ್ಲಿ ಲೋಪ ಎಸಗಿದೆಯೇ, ದೂರುದಾರರು ತಾವು ಕೋರಿರುವ ಪರಿಹಾರಕ್ಕೆ ಅರ್ಹರೇ ಎಂಬುದನ್ನು ಪರಿಶೀಲಿಸಿತು. ವೈದ್ಯಕೀಯ ಅಧಿಕಾರಿಗಳು ನೀಡಿರುವ ದಾಖಲೆಗಳ ಪ್ರಕಾರ ಸುಜಾತಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುದನ್ನು ದೃಢಪಡಿಸಿ
ಕೊಂಡಿತು.

ದೂರುದಾರರ ಪರ ವಕೀಲ ಎಂ.ಎನ್.ರಘು ಅವರ ವಾದವನ್ನು ಮನ್ನಿಸಿ, ‘ಹೃದಯಾಘಾತದಿಂದ ಹೊರತಾದ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದಾರೆ‘ ಎಂಬ ಕಂಪನಿಯ ವಾದವನ್ನು ತಳ್ಳಿಹಾಕಿ ಪರಿಹಾರ ನೀಡುವಂತೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT