ಬುಧವಾರ, ಆಗಸ್ಟ್ 17, 2022
23 °C
ಕಾಯಿಲೆ ನಿಯಂತ್ರಣಕ್ಕೆ ಬಂದರೂ ಹೆಚ್ಚಿನ ಸಂಖ್ಯೆಯ ಪರೀಕ್ಷೆಗೆ ತಜ್ಞರ ಸಲಹೆ

ಕೋವಿಡ್: ಸೋಂಕು ಇಳಿಕೆ ಬಳಿಕ ಪರೀಕ್ಷೆ ಏರಿಕೆ!

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದೃಢ ಪ್ರಮಾಣವು ಶೇ 40ರ ಗಡಿಯ ಆಸುಪಾಸಿನಲ್ಲಿದ್ದ ಅವಧಿಯಲ್ಲಿ ಪರೀಕ್ಷೆಗಳ ಸಂಖ್ಯೆಯನ್ನು ಇಳಿಕೆ ಮಾಡಿದ್ದ ಸರ್ಕಾರ, ಈಗ ದೃಢ ಪ್ರಮಾಣವು ಶೇ 5ರ ಆಸುಪಾಸಿಗೆ ಬರುತ್ತಿದ್ದಂತೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದೆ.

‘ದೃಢ ಪ್ರಮಾಣವು ಗರಿಷ್ಠ ಮಟ್ಟಕ್ಕೆ ತಲುಪಿದಾಗ ‍ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದಲ್ಲಿ ಇನ್ನಷ್ಟು ಪ್ರಕರಣಗಳು ವರದಿಯಾಗುವ ಸಾಧ್ಯತೆಯಿತ್ತು’ ಎಂದು ಕಳವಳ ವ್ಯಕ್ತ ಪಡಿಸಿರುವ ವೈದ್ಯಕೀಯ ತಜ್ಞರು, ‘ಕಾಯಿಲೆ ನಿಯಂತ್ರಣಕ್ಕೆ ಬಂದರೂ ಪರೀಕ್ಷೆಗಳ ಸಂಖ್ಯೆಯನ್ನು ಇಳಿಕೆ ಮಾಡಬಾರದು’ ಎಂದು ಸಲಹೆ ನೀಡಿದ್ದಾರೆ.

ಕಳೆದ ವರ್ಷಾಂತ್ಯಕ್ಕೆ ಎರಡನೇ ಅಲೆಯ ಎಚ್ಚರಿಕೆ ನೀಡಿದ್ದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು, ಪ್ರತಿನಿತ್ಯ ಸರಾಸರಿ 1.50 ಲಕ್ಷ ಪರೀಕ್ಷೆ ಗಳನ್ನು ನಡೆಸಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.

ಮಾರ್ಚ್‌ ತಿಂಗಳಲ್ಲಿ ಹೊಸ ಪ್ರಕರಣ ಗಳು ಏರಿಕೆ ಕಂಡ ಕಾರಣ ಕೆಲ ದಿನಗಳು ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆಗ ಸೋಂಕು ದೃಢ ಪ್ರಮಾಣವು ಶೇ 5ರ ಗಡಿಯೊಳಗೇ ಇತ್ತು. ಏಪ್ರಿಲ್ ಎರಡನೇ ವಾರದ ಬಳಿಕ ಸೋಂಕು ದೃಢ ಪ್ರಮಾಣವು ಏರುಗತಿ ಪಡೆದು, ಕಡೆಯ ವಾರದಲ್ಲಿ ಶೇ 25ರ ಗಡಿ ದಾಟಿತ್ತು. ಹೊಸ ಪ್ರಕರಣಗಳ ಸಂಖ್ಯೆ 50 ಸಾವಿರದ ಗಡಿಯ ಆಸುಪಾಸಿಗೆ ತಲುಪಿತ್ತು. ಆ ವೇಳೆ ಪರೀಕ್ಷೆಗಳ ಸಂಖ್ಯೆಯು 1.90 ಲಕ್ಷಕ್ಕೆ ಏರಿಕೆಯಾಗಿತ್ತು.

ಮೇ ಮೊದಲ ವಾರದಲ್ಲಿ ಸೋಂಕು ದೃಢ ಪ್ರಮಾಣವು ಶೇ 30 ರ ಗಡಿ ದಾಟಿದ ಪರಿಣಾಮ ಎರಡನೇ ವಾರದವರೆಗೂ ಬಹುತೇಕ ದಿನ 1.50 ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು.

ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕೂಡ ಪತ್ತೆಯಾಗಿದ್ದವು. ದೃಢ ಪ್ರಮಾಣವು ಶೇ 40ರ ಗಡಿಯತ್ತ ಹೋದಾಗ ಪರೀಕ್ಷೆಗಳ ಸಂಖ್ಯೆಯನ್ನು 93 ಸಾವಿರಕ್ಕೆ ಇಳಿಕೆ ಮಾಡಲಾಯಿತು.

ಈಗ ಶೇ 10ರೊಳಗಡೆ ದೃಢ ಪ್ರಮಾಣವಿದ್ದು, ಪರೀಕ್ಷೆಗಳ ಸಂಖ್ಯೆ 1.60 ಲಕ್ಷದತ್ತ ಏರಿಕೆ ಕಂಡಿದೆ.

ಹೆಚ್ಚಿನ ಪರೀಕ್ಷೆ ಅಗತ್ಯ: ‘ಸೋಂಕು ದೃಢ ಪ್ರಮಾಣವು ಶೇ 5ರ ಗಡಿಯ ಒಳಗಡೆ ಇದ್ದಲ್ಲಿ ಕಾಯಿಲೆ ನಿಯಂತ್ರಣಕ್ಕೆ ಬಂದಿದೆ ಎಂದು ಪರಿಗಣಿಸ
ಬಹುದು. ಕಾಯಿಲೆಯನ್ನು ಎದುರಿಸಲು ಪರೀಕ್ಷೆ ಮತ್ತು ಸಂಪರ್ಕ ಪತ್ತೆ
ಸಹಕಾರಿ. ಈಗ ಸೋಂಕಿತರನ್ನು ಪತ್ತೆ ಮಾಡಲು ಅಧಿಕ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಿದೆ. ಪ್ರಕರಣಗಳು ಇಳಿಕೆಯಾಗುತ್ತಿದೆ ಎಂಬ ಕಾರಣಕ್ಕೆ ಪರೀಕ್ಷೆಗಳ ಸಂಖ್ಯೆಯನ್ನು ಕಡಿಮೆ ಮಾಡಬಾರದು’ ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ತಜ್ಞರು ತಿಳಿಸಿದ್ದಾರೆ. 

‘ಲಾಕ್‌ಡೌನ್ ಸೇರಿದಂತೆ ವಿವಿಧ ಕಾರಣಗಳಿಂದ ಸೋಂಕು ದೃಢ ಪ್ರಮಾಣ ಅಧಿಕವಿರುವ ಕೆಲವು ದಿನ ಪರೀಕ್ಷೆಗಳ ಸಂಖ್ಯೆ ಇಳಿಕೆ ಕಂಡಿತು. ಜನತೆ ಕೂಡ ಪರೀಕ್ಷೆ ಮಾಡಿಸಿಕೊಳ್ಳಲು ಮುಂದೆ ಬರುತ್ತಿರಲಿಲ್ಲ. ಪರೀಕ್ಷೆ ವರದಿ ವಿಳಂಬವಾಗಕೂಡದು ಎಂಬ ಕಾರಣಕ್ಕೆ ಸಹ ಲಕ್ಷಣ ಇದ್ದವರಿಗೆ ಮಾತ್ರ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ ಹೆಚ್ಚಿನ ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ಮಾಡಲಾಗುತ್ತಿದೆ’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ದೃಢ ಪ್ರಮಾಣ ಏರಿಕೆ ಕಂಡಾಗ ಪರೀಕ್ಷೆ ಇಳಿಕೆ (ಶೇ)

ದಿನಾಂಕ; ಪರೀಕ್ಷೆಗಳು; ಪ್ರಕರಣಗಳು; ದೃಢ ಪ್ರಮಾಣ

ಮೇ 1; 1.77 ಲಕ್ಷ; 40,990; ಶೇ 23.03

ಮೇ 10; 1.24 ಲಕ್ಷ; 39,305; 31.66

ಮೇ 15; 1.18 ಲಕ್ಷ; 41,664; 35.20

ಮೇ 17; 97,236; 38,603; 39.70

ದೃಢ ಪ್ರಮಾಣ ಇಳಿಕೆ ಕಂಡಾಗ ಪರೀಕ್ಷೆ ಏರಿಕೆ

ದಿನಾಂಕ; ಪರೀಕ್ಷೆಗಳು; ಪ್ರಕರಣಗಳು; ದೃಢ ಪ್ರಮಾಣ (ಶೇ)

ಜೂ. 9; 1.63 ಲಕ್ಷ; 10,959; 6.68

ಜೂ. 10; 1.67 ಲಕ್ಷ; 11,042; 6.58

ಜೂ. 11; 1.69 ಲಕ್ಷ; 8,249; 4.86

ಜೂ. 12; 1.48 ಲಕ್ಷ; 9,785; 6.61

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು