ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಸಿಬಿ ಕಚೇರಿ ಸ್ಥಳಾಂತರಕ್ಕೆ ತಯಾರಿ?

Last Updated 1 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್, ಹನಿಟ್ರ್ಯಾಪ್ ಸೇರಿದಂತೆ ಹಲವು ಪ್ರಕರಣಗಳ ತನಿಖೆ ನಡೆಸುತ್ತಿರುವ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಕಚೇರಿಯನ್ನು ಸ್ಥಳಾಂತರ ಮಾಡಲು ತೆರೆಮರೆಯಲ್ಲಿ ತಯಾರಿ ನಡೆದಿದೆ.

ನಗರದ ಅಪರಾಧಗಳನ್ನು ನಿಯಂತ್ರಿಸಲು ಹಾಗೂ ರೌಡಿಗಳನ್ನು ಮಟ್ಟಹಾಕುವ ಕೆಲಸವನ್ನು ಸಿಸಿಬಿ ಮಾಡುತ್ತಿದೆ. ಅದರ ಕೇಂದ್ರ ಕಚೇರಿ ಸದ್ಯ ಚಾಮರಾಜಪೇಟೆಯಲ್ಲಿದೆ.

‘ಒಂದು ಅಂತಸ್ತಿನ ಕಟ್ಟಡದಲ್ಲಿ ಸಿಸಿಬಿಯ ವಿಶೇಷ ವಿಚಾರಣಾ ವಿಭಾಗ, ಸಂಘಟಿತ ಅಪರಾಧ ತನಿಖಾ ವಿಭಾಗ, ನರಹತ್ಯೆ ತನಿಖಾ ವಿಭಾಗ, ವಂಚನೆ ತನಿಖಾ ವಿಭಾಗ ಹಾಗೂ ಭಯೋತ್ಪಾದನಾ ನಿಗ್ರಹ ಘಟಕದ ಕಚೇರಿಗಳಿವೆ. ಇದೀಗ ಆ ಎಲ್ಲ ವಿಭಾಗಗಳನ್ನು ಬೇರೆ ಕಡೆಗಳಲ್ಲಿ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆದಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಸಿಸಿಬಿಯ ವಿಭಾಗಗಳನ್ನು ಜಯನಗರ, ಕೋರಮಂಗಲ, ಯಶವಂತಪುರ ಹಾಗೂ ಶಿವಾಜಿನಗರ ಭಾಗಗಳಿಗೆ ಸ್ಥಳಾಂತರಿಸುವುದು ಸೂಕ್ತವೆಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ರೀತಿಯಾದರೆ ಸಿಸಿಬಿ ವಿಭಾಗಗಳು ಬೇರೆ ಬೇರೆ ಕಡೆಯಿಂದಲೇ ತಮಗೆ ನಿಗದಿಪಡಿಸಿದ ಕೆಲಸ ಮಾಡಲಿವೆ’ ಎಂದು ಮೂಲಗಳು ಹೇಳಿವೆ.

ಸಂಚಾರ ವಿಭಾಗಕ್ಕೆ ಕಟ್ಟಡ: ‘ನಗರದ ಕೇಂದ್ರ ಭಾಗದಲ್ಲಿರುವ ಸಿಸಿಬಿ ಕಚೇರಿಯನ್ನು ಸಂಚಾರ ‍ಪೊಲೀಸ್ ವಿಭಾಗಕ್ಕೆ ಬಿಟ್ಟುಕೊಡಲು ಸಿದ್ಧತೆ ನಡೆದಿದ್ದು, ಆ ಬಗ್ಗೆ ಚರ್ಚೆ ನಡೆಯುತ್ತಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ನಗರದಲ್ಲಿ ವಾಹನಗಳ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಿಸಿಬಿ ಕಚೇರಿಯನ್ನು ಸಂಚಾರ ವಿಭಾಗಕ್ಕೆ ಕೊಟ್ಟರೆ, ಮೈಸೂರು ರಸ್ತೆ ಹಾಗೂ ಅದರ ಸುತ್ತಮುತ್ತಲ ರಸ್ತೆಗಳಲ್ಲಿ ಉಂಟಾಗುವ ದಟ್ಟಣೆ ನಿಯಂತ್ರಿಸಲು ತ್ವರಿತ ಕ್ರಮ ಕೈಗೊಳ್ಳಲು ಸಾಧ್ಯವಾಗಲಿದೆ ಎಂಬುದು ಹಿರಿಯ ಅಧಿಕಾರಿಗಳ ಅಭಿಪ್ರಾಯ’ ಎಂದು ಮೂಲಗಳು ತಿಳಿಸಿವೆ.

ಕಚೇರಿ ಸ್ಥಳಾಂತರಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಕೆಲವು ಅಧಿಕಾರಿಗಳು, ‘ಹಲವು ವರ್ಷಗಳಿಂದ ಇರುವ ಸಿಸಿಬಿ ಕಚೇರಿಯನ್ನು ಏಕಾಏಕಿ ಸ್ಥಳಾಂತರಿಸುವುದು ಸೂಕ್ತವಲ್ಲ. ಇದರಿಂದ ರೌಡಿಗಳು ಹಾಗೂ ಅಪರಾಧ ಕೃತ್ಯ ಎಸಗುವವರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ’ ಎಂದು ದೂರಿದರು.

‘ಕಚೇರಿ ಹಾಗೂ ಅದರ ಸುತ್ತಮುತ್ತ ಸ್ವಚ್ಛತೆ ಇಲ್ಲವೆಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಕಚೇರಿಯನ್ನು ನವೀಕರಣ ಮಾಡಲು ಅವರೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕಚೇರಿ ಸ್ಥಳಾಂತರದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಿಸಿಬಿಯ ಜಂಟಿ ಕಮಿಷನರ್ ಸಂದೀಪ್ ಪಾಟೀಲ ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT