ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆ ಕಲ್ಲುಗಳಿಂದ ಮೇಲ್ಸೇತುವೆಗೆ ಹೊಸ ಲುಕ್‌

Last Updated 21 ಡಿಸೆಂಬರ್ 2018, 19:00 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ರಸ್ತೆಯ ಪಾದಚಾರಿ ಮಾರ್ಗ ನಿರ್ಮಾಣಕ್ಕಾಗಿ ತೆರವುಗೊಳಿಸಿದ್ದ ಹಳೆಯ ಕಬಲ್‌ ಸ್ಟೋನ್‌ಗಳನ್ನು ಮರುಬಳಕೆ ಮಾಡಿದ ಪಾಲಿಕೆ ಹೊರವರ್ತುಲ ರಸ್ತೆ ಮೇಲ್ಸೇತುವೆಯೊಂದಕ್ಕೆ ಹೊಸ ಲುಕ್‌ ನೀಡಿದೆ.

ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಕಬಲ್‌ ಸ್ಟೋನ್‌ಗಳನ್ನು(ಇಂಟರ್‌ಲಾಕ್‌ ಸಿಮೆಂಟ್‌ ಇಟ್ಟಿಗೆ) ತೆರವುಗೊಳಿಸಲಾಗಿತ್ತು. ಅವುಗಳನ್ನು ಹರಾಜು ಹಾಕಿದರೂ ಕೊಳ್ಳುವವರು ಬರುವ ಸಾಧ್ಯತೆ ಕಡಿಮೆ ಇತ್ತು. ಡಂಪಿಂಗ್‌ ಯಾರ್ಡ್‌ಗೆ ಹಾಕಿದರೆ ತ್ಯಾಜ್ಯದ ಗುಡ್ಡ ಬೆಳೆಯುವ ಸಾಧ್ಯತೆ ಹೆಚ್ಚಿತ್ತು. ಈ ಕಾರಣಕ್ಕಾಗಿ ಈ ಸಿಮೆಂಟ್‌ ಇಟ್ಟಿಗೆಗಳನ್ನು ಹೊರವರ್ತುಲ ರಸ್ತೆಯ ಮೇಲ್ಸೇತುವೆಯ ಕೆಳಭಾಗವನ್ನು ಅಂದಗೊಳಿಸುವಿಕೆಗೆ ಬಳಸಲು ಪಾಲಿಕೆ ನಿರ್ಧರಿಸಿತು.

ಈ ಕಾರ್ಯಕ್ಕೆ ಮೇಲ್ಸೇತುವೆ ಕಟ್ಟಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮತ್ತು ಅಗ್ಲಿ ಇಂಡಿಯನ್ಸ್‌ ಸ್ವಯಂಸೇವಕರ ಸಮೂಹವು ಕೈಜೋಡಿಸಿತು. ಈ ಎಲ್ಲ ಸಂಸ್ಥೆಗಳ ಸಹಭಾಗಿತ್ವದಿಂದಾಗಿ ನಾಗವಾರ ಸಮೀಪದ ವೀರಣ್ಣಪಾಳ್ಯ ಮೇಲ್ಸೇತುವೆಗೆ ಇಂದು ಹೊಸರೂಪ ಸಿಕ್ಕಿದೆ.

ಅಭಿವೃದ್ಧಿಪಡಿಸುವ ಮುನ್ನ ಮೇಲ್ಸೇತುವೆಯ ಕೆಳ ಪ್ರದೇಶ ಕಸ, ಕಟ್ಟಡ ನಿರ್ಮಾಣ ತ್ಯಾಜ್ಯದಿಂದ ತುಂಬಿತ್ತು. ಭಿತ್ತಿ ಪತ್ರಗಳನ್ನು ಅಂಟಿಸಲಾಗುತ್ತಿತ್ತು. ವಾಹನಗಳ ನಿಲುಗಡೆಯ ಅನಧಿಕೃತ ಸ್ಥಳವಾಗಿ ಮಾರ್ಪಟ್ಟಿತ್ತು. ಸೇತುವೆಯ ಸ್ತಂಭಗಳು ದೂಳು ಮೆತ್ತಿಕೊಂಡು ನಿಂತಿದ್ದವು. ಅಲ್ಲಲ್ಲಿ ಕಳೆ ಗಿಡಗಳು ಬೆಳೆದಿದ್ದವು.

ಕಬ್ಬನ್‌ ರಸ್ತೆಯಿಂದ ತೆರವುಗೊಳಿಸಿದ ಸುಮಾರು 11 ಲೋಡ್‌ಗಳಷ್ಟು ಕಲ್ಲುಗಳನ್ನು ವೀರಣ್ಣಪಾಳ್ಯಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿಗೆ 200ಕ್ಕೂ ಹೆಚ್ಚು ಟೆಕಿಗಳು ಹತ್ತು ಭಾನುವಾರ ಬಂದು ಶ್ರಮದಾನ ಮಾಡಿದರು. ಸ್ಥಳವನ್ನು ಮೊದಲು ಸ್ವಚ್ಛಗೊಳಿಸಿದರು. ಸಮತಟ್ಟು ಮಾಡಿದರು. ತಂದು ಹಾಕಿದ್ದ ಕಬಲ್‌ಸ್ಟೋನ್‌ಗಳನ್ನು ಒಪ್ಪವಾಗಿ ಜೋಡಿಸಿದರು. ಅಗತ್ಯವಿರುವಲ್ಲಿ ಸಣ್ಣ ಕಟ್ಟೆಗಳನ್ನು ಕಟ್ಟಿದರು, ಬಣ್ಣ ಬಳಿದು 35,000 ಚದರ ಅಡಿ ವಿಸ್ತೀರ್ಣದ ಈ ಸ್ಥಳದ ವಿರೂಪದ ಚಹರೆಯನ್ನು ಬದಲಿಸಿ, ಅಂದದ ಸ್ವರೂಪ ನೀಡಿದರು.

ಎಲ್‌ ಆ್ಯಂಡ್‌ ಟಿ ಟೆಕ್ನಾಲಜಿ ಸರ್ವಿಸಸ್‌ ಕಂಪನಿ ಸಹ ಈ ಕೆಲಸಕ್ಕೆ ತನ್ನ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್‌ಆರ್‌) ಒಂದಷ್ಟು ಮೊತ್ತವನ್ನು ನೀಡಿದೆ. ಹಾಗೆಯೇ ಈ ಕಂಪನಿಯ ಉದ್ಯೋಗಿಗಳು ಮೇಲ್ಸೇತುವೆ ಚಂದಗೊಳಿಸುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.

ಕಬ್ಬನ್‌ ರಸ್ತೆಯ ಪಾದಚಾರಿ ಮಾರ್ಗ ಕಾಮಗಾರಿ

ಅನುದಾನ: ನಗರೋತ್ಥಾನ ಯೋಜನಾ ನಿಧಿ

ಎಲ್ಲಿಂದೆಲ್ಲಿಗೆ: ಮಣಿಪಾಲ್‌ ಸೆಂಟರ್‌ನಿಂದ–ಪ್ರಧಾನ ಅಂಚೆ ಕಚೇರಿವರೆಗೆ(ಜಿಪಿಓ)

ಅಂದಾಜು ವೆಚ್ಚ: ₹ 3 ಕೋಟಿ

ಉದ್ದ: 2 ಕಿ.ಮೀ.

ಅಗಲ:ಸರಾಸರಿ 3 ಮೀಟರ್

ವಿಶೇಷತೆ: ಸಸಿಗಳನ್ನು ನೆಡಲು ಜಾಗ ಮೀಸಲು, ಸೈಕಲ್‌ ಸಂಚಾರ ಪಥ

ಗುತ್ತಿಗೆದಾರರು :ಕೆಆರ್‌ಐಡಿಎಲ್ ಸಂಸ್ಥೆ

ವಿಐಪಿಗಳಿಂದಾಗಿ ಕಾಮಗಾರಿ ವಿಳಂಬ

ನಗರಕ್ಕೆ ಭೇಟಿ ನೀಡುವ ಕೇಂದ್ರ ಸರ್ಕಾರದ ಸಚಿವರು ನಿಗದಿತ ಕಾರ್ಯಕ್ರಮದ ಸ್ಥಳ ತಲುಪಲು, ರಾಜ್ಯದಿಂದ ಹೊರಹೋಗುವ ಜನಪ್ರತಿನಿಧಿಗಳು ಎಚ್‌ಎಎಲ್‌ ವಿಮಾನ ನಿಲ್ದಾಣ ತಲುಪಲು ಕಬ್ಬನ್‌ ರಸ್ತೆಯನ್ನೇ ಹೆಚ್ಚಾಗಿ ಬಳಸುತ್ತಾರೆ.

‘ಗಣ್ಯವ್ಯಕ್ತಿಗಳಿರುವ ವಾಹನಗಳು ಈ ರಸ್ತೆ ಮೂಲಕ ಹಾದುಹೋಗುವ ಒಂದು ಗಂಟೆ ಮುಂಚೆಯೇ ಪೊಲೀಸರು ಬಂದು, ಪಾದಚಾರಿ ಮಾರ್ಗ ನಿರ್ಮಾಣ ಕೆಲಸವನ್ನು ನಿಲ್ಲಿಸುತ್ತಾರೆ. ಗಣ್ಯರು ಬಹುತೇಕ ಬಾರಿ ಸರಿಯಾದ ಸಮಯಕ್ಕೆ ಬರುವುದಿಲ್ಲ. ಹೀಗಾಗಿ ಒಂದೊಂದು ದಿನ ಮೂರ್ನಾಲ್ಕು ಗಂಟೆ ಕೆಲಸ ನಿಲ್ಲಿಸಬೇಕಾಗುತ್ತದೆ. ಆದ್ದರಿಂದ ಕಾಮಗಾರಿ ತ್ವರಿತವಾಗಿ ನಡೆಯುತ್ತಿಲ್ಲ’ ಎಂದುಎಂಜಿನಿಯರ್‌ ಒಬ್ಬರು ತಿಳಿಸಿದರು.

ಕಬ್ಬನ್‌ ರಸ್ತೆಗೆ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಕೆಲವರು ರಾತ್ರೋರಾತ್ರಿ ತಂದು ಸುರಿಯುತ್ತಿದ್ದಾರೆ. ಅದನ್ನು ತೆರವುಗೊಳಿಸಿ, ನಿರ್ಮಾಣದ ಕೆಲಸ ಮುಂದುವರಿಸುವ ಹೆಚ್ಚುವರಿ ಹೊಣೆ ಗುತ್ತಿಗೆದಾರರ ಮೇಲೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT