ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಬರ್ ಅಪರಾಧ ಹೆಚ್ಚಳ: ಹ್ಯಾಕಿಂಗ್‌ ಮಟ್ಟಹಾಕಲು ತಂಡ

* ಆಯ್ದ ಪೊಲೀಸರಿಗೆ ಸಿಐಡಿ ಸಿಸಿಐಟಿಆರ್ ತರಬೇತಿ * ತನಿಖೆಗೆ ಮಾರ್ಗದರ್ಶನ
Published 4 ಮಾರ್ಚ್ 2024, 0:04 IST
Last Updated 4 ಮಾರ್ಚ್ 2024, 0:04 IST
ಅಕ್ಷರ ಗಾತ್ರ

ಬೆಂಗಳೂರು: ಕಂಪ್ಯೂಟರ್, ಮೊಬೈಲ್ ಹಾಗೂ ಇತರೆ ತಾಂತ್ರಿಕ ವ್ಯವಸ್ಥೆಗಳನ್ನು ಹ್ಯಾಕ್ ಮಾಡಿ ದತ್ತಾಂಶ ದುರುಪಯೋಗಪಡಿಸಿಕೊಳ್ಳುವ ಹ್ಯಾಕರ್‌ಗಳ ಕೃತ್ಯವನ್ನು ಮಟ್ಟಹಾಕಲು ಪೊಲೀಸ್ ಇಲಾಖೆಯ ‘ಸಿಎಚ್‌ಎಫ್‌ಐ (ಕಂಪ್ಯೂಟರ್ ಹ್ಯಾಕಿಂಗ್ ಮತ್ತು ಫೊರೆನ್ಸಿಕ್ ಇನ್ವೆಸ್ಟಿಗೇಟರ್)’ ಪರಿಣತರ ತಂಡ ಕಾರ್ಯಾಚರಣೆಗೆ ಇಳಿದಿದೆ.

ಸೈಬರ್ ಅಪರಾಧಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು, ಹ್ಯಾಕಿಂಗ್ ಪ್ರಕರಣಗಳೂ ದುಪ್ಪಟ್ಟಾಗುತ್ತಿವೆ. ಆಸ್ಪತ್ರೆಗಳು, ಉದ್ದಿಮೆಗಳು, ಶಾಲೆ– ಕಾಲೇಜು ಸೇರಿದಂತೆ ವಿವಿಧ ಕ್ಷೇತ್ರಗಳ ಸಂಸ್ಥೆಗಳಿಗೆ ಹ್ಯಾಕರ್‌ಗಳ ಉಪಟಳ ಹೆಚ್ಚಾಗಿದೆ. ಇಂಥ ಹ್ಯಾಕಿಂಗ್ ಪ್ರಕರಣಗಳನ್ನು ಭೇದಿಸುವ ಉದ್ದೇಶದಿಂದ ನುರಿತ ಪೊಲೀಸರನ್ನು ಒಳಗೊಂಡ ಸಿಎಚ್‌ಎಫ್‌ಐ ತಂಡ ರಚಿಸಲಾಗಿದೆ.

ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಯ್ದ ಐಪಿಎಸ್, ಡಿವೈಎಸ್‌ಪಿ/ಎಸಿಪಿ, ಇನ್‌ಸ್ಪೆಕ್ಟರ್‌ ಹಾಗೂ ಪಿಎಸ್‌ಐಗಳು ತಂಡದಲ್ಲಿದ್ದಾರೆ.

‘ತಂತ್ರಜ್ಞಾನ ಆಧರಿಸಿ ಸೇವೆ ಒದಗಿಸುವ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹ್ಯಾಕರ್‌ಗಳು ಕೃತ್ಯ ಎಸಗುತ್ತಿದ್ದಾರೆ. ದತ್ತಾಂಶಗಳನ್ನು ಕದ್ದು ಹಣ ದೋಚುತ್ತಿದ್ದಾರೆ. ಕೆಲ ಹ್ಯಾಕರ್‌ಗಳು, ದತ್ತಾಂಶ ಕದ್ದು ಮಾರಾಟ ಮಾಡುತ್ತಿದ್ದಾರೆ. ಇಂಥ ಪ್ರಕರಣಗಳಲ್ಲಿ ತನಿಖಾಧಿಕಾರಿ ಹಾಗೂ ತನಿಖಾ ತಂಡದಲ್ಲಿರುವ ಪೊಲೀಸರಿಗೆ ಸಿಎಚ್‌ಎಫ್‌ಐ ಪರಿಣತರು ಮಾರ್ಗದರ್ಶನ ಮಾಡಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಕೆಲ ಆಸ್ಪತ್ರೆ ಸರ್ವರ್‌ಗಳನ್ನು ಹ್ಯಾಕ್ ಮಾಡಿ, ರೋಗಿಗಳ ಮಾಹಿತಿ ಕದ್ದು ಹಣ ದೋಚಿರುವ ಬಗ್ಗೆ ಈ ಹಿಂದೆ ಪ್ರಕರಣಗಳು ದಾಖಲಾಗಿದ್ದವು. ಇಂಥ ಹಲವು ಪ್ರಕರಣಗಳಲ್ಲಿ ಹ್ಯಾಕರ್ ಪತ್ತೆ ಕಷ್ಟವಾಗಿದೆ’ ಎಂದರು. 

ಹ್ಯಾಕರ್‌ ಕೃತ್ಯಗಳನ್ನು ಬಯಲಿಗೆಳೆಯಲು ಆಯ್ದ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪೊಲೀಸರಿಗೆ ತರಬೇತಿ ನೀಡುವ ಉದ್ದೇಶವಿದೆ
ಎಂ.ಎ. ಸಲೀಂ ಸಿಐಡಿ ಡಿಜಿಪಿ
ಕೆಲಸದ ವಿಧಾನ ಹೇಗೆ?
ವೆಬ್ ಅಪ್ಲಿಕೇಶನ್ ಹ್ಯಾಕಿಂಗ್ ಕಂಪ್ಯೂಟರ್ ಹ್ಯಾಕಿಂಗ್ ವೆಬ್ ಸರ್ವರ್ ಹ್ಯಾಕಿಂಗ್ ಹಾಗೂ ವೈರ್‌ಲೆಸ್ ನೆಟ್‌ವರ್ಕ್ ಹ್ಯಾಕಿಂಗ್ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಇಂಥ ಹ್ಯಾಕಿಂಗ್ ಸಂಬಂಧ ದಾಖಲಾಗುವ ಪ್ರಕರಣಗಳ ತನಿಖೆಯಲ್ಲಿ ಸಿಎಚ್‌ಎಫ್‌ಐ ಸದಸ್ಯರು ಪ್ರಮುಖ ಪಾತ್ರ ವಹಿಸಲಿದ್ದಾರೆ. ಪ್ರತಿ ಜಿಲ್ಲೆ ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸಿಎಚ್‌ಎಫ್‌ಐ ಸದಸ್ಯರಿದ್ದಾರೆ. ‘ಹ್ಯಾಕಿಂಗ್ ಪ್ರಕರಣ ದಾಖಲಾಗುತ್ತಿದ್ದಂತೆ ಸ್ಥಳಕ್ಕೆ ಸಿಎಚ್‌ಎಫ್‌ಐ ಅಧಿಕಾರಿಗಳು ಭೇಟಿ ನೀಡಲಿದ್ದಾರೆ. ಪ್ರಕರಣದ ಪ್ರಾಥಮಿಕ ಪುರಾವೆಗಳನ್ನು ಸಂಗ್ರಹಿಸಲಿದ್ದಾರೆ. ಚಾಲ್ತಿಯಲ್ಲಿರುವ ಕಾನೂನು ಅನ್ವಯ ಎಲ್ಲ ದಾಖಲೆಗಳನ್ನು ಹೊಂದಿಸಲಿದ್ದಾರೆ. ಯಾವ ರೀತಿ ಹ್ಯಾಕಿಂಗ್ ಆಗಿದೆ? ಏನೆಲ್ಲ ದತ್ತಾಂಶ ಕಳವಾಗಿದೆ? ವ್ಯವಸ್ಥೆಯಲ್ಲಿದ್ದ ಲೋಪಗಳು ಏನು? ಹ್ಯಾಕರ್ ಯಾವ ಅಸ್ತ್ರ ಬಳಸಿ ಹ್ಯಾಕಿಂಗ್ ಮಾಡಿದ್ದಾನೆ? ಎಂಬೆಲ್ಲ ಮಾಹಿತಿಯನ್ನು ಕಲೆಹಾಕಲಿದ್ದಾರೆ. ಅದನ್ನು ಪ್ರಕರಣದ ತನಿಖಾಧಿಕಾರಿ ಜೊತೆ ಹಂಚಿಕೊಳ್ಳಲಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ಹೇಳಿದರು. ‘ಎಥಿಕಲ್ (ನೈತಿಕ್) ಹ್ಯಾಕಿಂಗ್ ರೀತಿಯಲ್ಲಿ ಸಿಎಚ್‌ಎಫ್‌ಐ ಅಧಿಕಾರಿಗಳು ಕೆಲಸ ಮಾಡಲಿದ್ದಾರೆ. ಯಾವುದಾದರೂ ಸಂಸ್ಥೆಯ ತಾಂತ್ರಿಕ ವ್ಯವಸ್ಥೆಯಲ್ಲಿ ಲೋಪಗಳು ಇದ್ದರೆ ಅವುಗಳನ್ನು ಪತ್ತೆ ಮಾಡಿ ಸರಿಪಡಿಸಲು ಸಲಹೆ ನೀಡಲಿದ್ದಾರೆ’ ಎಂದು ತಿಳಿಸಿದರು.
ಸಿಐಡಿ ಕೇಂದ್ರದಲ್ಲಿ ತರಬೇತಿ
ತಾಂತ್ರಿಕ ನೈಪುಣ್ಯ ಹೊಂದಿರುವ ಹಾಗೂ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಸಿಎಚ್‌ಎಫ್‌ಐ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸಿಐಡಿಯಲ್ಲಿರುವ ಸೈಬರ್ ಅಪರಾಧಗಳ ತನಿಖೆ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ (ಸಿಸಿಐಟಿಆರ್) ತರಬೇತಿ ಸಹ ನೀಡಲಾಗಿದೆ. ‘ಸುಲಿಗೆ ಕಳ್ಳತನ ಹಾಗೂ ಇತರೆ ಅಪರಾಧಗಳಿಗಿಂತ ಸೈಬರ್ ಅಪರಾಧಗಳು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಹ್ಯಾಕರ್‌ಗಳ ಕೃತ್ಯವನ್ನು ಭೇದಿಸಲು ಹಾಗೂ ಹ್ಯಾಕಿಂಗ್ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಮಾಡಲು ಅನುಕೂಲವಾಗಲೆಂದು ಸಿಎಚ್‌ಎಫ್‌ಐ ತಂಡ ರಚಿಸಲಾಗಿದೆ. ತಂಡದ ಪ್ರತಿಯೊಬ್ಬರಿಗೂ ಸೈಬರ್ ತಜ್ಞರಿಂದ ಪ್ರಾಯೋಗಿಕ ತರಬೇತಿ ಕೊಡಿಸಲಾಗಿದೆ’ ಎಂದು ಸಿಐಡಿ ಡಿಜಿಪಿ ಎಂ.ಎ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT