ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳೇಟು ಕೊಟ್ಟರೆ ಹೊರಕ್ಕೆ: ಕಾಂಗ್ರೆಸ್‌ ನಾಯಕರಿಗೆ ಡಿಕೆಶಿ ಎಚ್ಚರಿಕೆ

Published 5 ಏಪ್ರಿಲ್ 2024, 19:18 IST
Last Updated 5 ಏಪ್ರಿಲ್ 2024, 19:18 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಒಳ ಏಟು ಕೊಟ್ಟು, ಸೋಲಿಸುವ ಪ್ರಯತ್ನ ಮಾಡುವ ಕಾಂಗ್ರೆಸ್‌ ನಾಯಕರನ್ನು ತಕ್ಷಣವೇ ಪಕ್ಷದಿಂದ ಹೊರಗಟ್ಟಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ 14 ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಸಚಿವರು, ಪಕ್ಷದ ಪ್ರಮುಖ ನಾಯಕರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜತೆಗೂಡಿ  ಶುಕ್ರವಾರ ಸಭೆ ನಡೆಸಿದ ಅವರು, ‘ಪಕ್ಷದ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇವೆ’ ಎಂದು ಹೇಳಿದ್ದಾರೆ.

‘14 ಲೋಕಸಭಾ ಕ್ಷೇತ್ರಗಳಲ್ಲಿನ ಪರಿಸ್ಥಿತಿ ಕುರಿತು ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸ್ಥಳೀಯ ನಾಯಕರಿಂದ ಮಾಹಿತಿ ಪಡೆದರು. ಯಾವುದೇ ಕ್ಷೇತ್ರದಲ್ಲೂ ಆಂತರಿಕ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದಂತೆ ಚುನಾವಣಾ ಉಸ್ತುವಾರಿಗಳಿಗೆ ಸೂಚಿಸಿದರು. ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುವವರ ಪತ್ತೆಗೆ ತೀವ್ರ ನಿಗಾ ಇರಿಸುವುದಾಗಿ ಶಿವಕುಮಾರ್‌ ತಿಳಿಸಿದರು. ಮಾಹಿತಿ ಸಿಕ್ಕ ದಿನವೇ ಉಚ್ಛಾಟಿಸುತ್ತೇನೆ ಎಂಬ ಕಠಿಣ ಎಚ್ಚರಿಕೆಯನ್ನು ಸಭೆಯಲ್ಲಿ ನೀಡಿದರು’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

‘ಇತರ ಪಕ್ಷಗಳ ಯಾವುದೇ ಮುಖಂಡರು ಕಾಂಗ್ರೆಸ್‌ ಪಕ್ಷ ಸೇರಲು ಬಯಸಿದರೆ ವೈಯಕ್ತಿಕ ಹಿತಾಸಕ್ತಿ ಮುಂದಿಟ್ಟುಕೊಂಡು ಅಡ್ಡಗಾಲು ಹಾಕಬಾರದು. ಯಾವುದೇ ಮುಖಂಡರ ವೈಯಕ್ತಿಕ ಭಿನ್ನಾಭಿಪ್ರಾಯ ಗಳು ಪಕ್ಷಕ್ಕೆ ಹಿನ್ನಡೆ ಮಾಡಬಾರದು. ಎರಡೂ ಹಂತಗಳ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಗೆಲುವಿನತ್ತ ಗುರಿ ಇರಿಸಿ, ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷರು ತಾಕೀತು ಮಾಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ಯಾವ ಅಲೆಯೂ ಇಲ್ಲ’: ‘ಕಾಂಗ್ರೆಸ್‌ ನಾಯಕರು ಆಂತರಿಕ ಭಿನ್ನಾಭಿಪ್ರಾಯಗಳನ್ನು ಮರೆತು ಚುನಾವಣೆಯಲ್ಲಿ ಕೆಲಸ ಮಾಡಬೇಕು. ವೈಯಕ್ತಿಕ ಹಿತಾಸಕ್ತಿಗಳಿಗಿಂತ ಪಕ್ಷ ಮುಖ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಈಗ ದೇಶದಲ್ಲಿ ಮೋದಿ ಅಲೆ ಇಲ್ಲ. ಯಾವ ಅಲೆಯೂ ಇಲ್ಲ. ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್‌ ಹೆಚ್ಚು ಸ್ಥಾನ ಪಡೆಯಬಹುದು. ಅದಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂಬುದಾಗಿ ಸಿದ್ದರಾಮಯ್ಯ ನಿರ್ದೇಶನ ನೀಡಿದರು’ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎರಡನೇ ಹಂತದಲ್ಲಿ ಮತದಾನ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಎರಡನೇ ಹಂತದಲ್ಲಿ ಮತದಾನ ನಡೆಯುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮುಖಂಡರ ಜತೆ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಸಿದರು. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು

ಬಂಜಾರ ಸಮುದಾಯದ ಅಸಮಾಧಾನ

‘ಬಂಜಾರ ಸಮುದಾಯವರಿಗೆ ಸಂಪುಟದಲ್ಲಿ ಅವಕಾಶ ನೀಡಿಲ್ಲ. ಲೋಕಸಭಾ ಟಿಕೆಟ್‌ ಕೂಡ ನೀಡದೇ ಕಡೆಗಣಿಸಲಾಗಿದೆ’ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ್‌ ರಾಠೋಡ್ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಸಭೆಯಲ್ಲೇ ಆಕ್ಷೇಪಿಸಿದರು.

ಈ ಮಾತಿಗೆ ಬಂಜಾರ ಸಮುದಾಯದ ಹಲವು ಮುಖಂಡರು ದನಿಗೂಡಿಸಿದರು. ದೀರ್ಘ ಕಾಲ ಚರ್ಚೆ ಬೆಳೆಯಿತು. ಇದರಿಂದ ಸಿಟ್ಟಾದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಭೀಮಾ ನಾಯ್ಕ ಅವರನ್ನು ಕೆಎಂಎಫ್‌ ಅಧ್ಯಕ್ಷ ಮಾಡಿಲ್ಲವೆ? ರುದ್ರಪ್ಪ ಲಮಾಣಿ ಅವರಿಗೆ ಉಪ ಸಭಾಧ್ಯಕ್ಷ ಸ್ಥಾನ ನೀಡಿಲ್ಲವೆ ಎಂಬ ಪ್ರಶ್ನೆ ಕೇಳಿದರು. ಈ ಸಭೆಯಲ್ಲಿ ಇವೆಲ್ಲ ಚರ್ಚಿಸಬೇಡಿ ಎಂದು ತಾಕೀತು ಮಾಡಿದರು’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT