ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭದ ಪ್ರಸ್ತಾಪ ಕೈಬಿಡಿ: ಸಿಎಂಗೆ ನಿರಂಜನಾರಾಧ್ಯ ಪತ್ರ

Published 13 ಮಾರ್ಚ್ 2024, 15:56 IST
Last Updated 13 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಂದಿನ ಶೈಕ್ಷಣಿಕ ವರ್ಷದಿಂದ ಪಂಚಾಯತಿ ಮಟ್ಟದಲ್ಲಿ ಪೂರ್ವ ಪ್ರಾಥಮಿಕದಿಂದಲೇ ಆಂಗ್ಲ ಮಾಧ್ಯಮ ಹಾಗೂ ದ್ವಿಭಾಷಾ ಮಾಧ್ಯಮ ಶಾಲೆಗಳನ್ನು ತೆರೆಯುವ ಪ್ರಸ್ತಾಪವನ್ನು ಕೈಬಿಡಬೇಕು’ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ. ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ‘ಮಕ್ಕಳ ಪ್ರಾರಂಭಿಕ ಕಲಿಕೆ ಮತ್ತು ಕಲಿಕೆಯ ಭಾಷೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಬಹುಮುಖ್ಯವಾಗಿ ಕಲಿಕೆಯ ಭಾಷೆಯು ಮಾತೃಭಾಷೆಯಾಗಿರಬೇಕು. ಮಗುವಿಗೆ ಗೊತ್ತಿರದ ಭಾಷೆಯಲ್ಲಿ ಕಲಿಕೆ ಪ್ರಾರಂಭವಾದರೆ ಮಗುವಿನ ಪೂರ್ಣ ಬೌದ್ಧಿಕ ಬೆಳವಣಿಗೆ ಸಾಧ್ಯವಾಗದೆ ಆಸಕ್ತಿ ಕುಂದಿ, ಮಗು ಕೇವಲ ಕಂಠಪಾಠಕ್ಕೆ ಜೋತು ಬೀಳುತ್ತದೆ. ಹೀಗಾಗಿ, ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕದಿಂದಲೇ ಮೂರು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸುವ ತೀರ್ಮಾನವನ್ನು ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

‘ಸಾವಿರ ಶಾಲೆಗಳಲ್ಲಿ ಉಭಯ ಮಾಧ್ಯಮ (ಆಂಗ್ಲ ಮತ್ತು ಕನ್ನಡ) ಪ್ರಾರಂಭಿಸುವ ತೀರ್ಮಾನವನ್ನೂ ಕೈ ಬಿಡಬೇಕು. ಪೂರ್ವ ಪ್ರಾಥಮಿಕದಿಂದಲೇ ಪಂಚಾಯಿತಿಗೊಂದು ಸಾರ್ವಜನಿಕ ಶಾಲೆ ಪ್ರಾರಂಭಿಸುವ ಬದಲು, 2017ರ ಸರ್ಕಾರಿ ಶಾಲೆಗಳ ಸಬಲೀಕರಣ ವರದಿಯ ತೀರ್ಮಾನದಂತೆ ಪೂರ್ವ ಪ್ರಾಥಮಿಕದಿಂದ 4ನೇ ತರಗತಿವರೆಗೆ ಬುನಾದಿ ಪ್ರಾಥಮಿಕ ಶಿಕ್ಷಣವನ್ನು ಆಯಾ ಹಳ್ಳಿ, ಹಟ್ಟಿ, ಹಾಡಿಗಳಲ್ಲಿ ಉಳಿಸಿಕೊಳ್ಳಬೇಕು. 5 ರಿಂದ 12ನೇ ತರಗತಿವರೆಗೆ ಗ್ರಾಮ ಪಂಚಾಯತಿ ಮತ್ತು ನಗರದ ವಾರ್ಡ್ ಹಂತದಲ್ಲಿ ಕೇಂದ್ರೀಯ ಶಾಲೆಯ ಮಾದರಿಯಲ್ಲಿ ಸುಸಜ್ಜಿತ ರಾಜೀವ್ ಗಾಂಧಿ ಸಾರ್ವಜನಿಕ ನವೋದಯ ಶಾಲೆಗಳನ್ನು ಪ್ರಾರಂಭಿಸಲು ಮುಂದಿನ ನಾಲ್ಕು ವರ್ಷಗಳಿಗೆ ಕ್ರಿಯಾ ಯೋಜನೆ ತಯಾರಿಸಬೇಕು’ ಎಂದು ಒತ್ತಾಯಿಸಿದ್ದಾರೆ. 

‘2015ರಲ್ಲಿ ಎರಡೂ ಸದನಗಳಲ್ಲಿ ಮಂಡನೆಯಾಗಿ, ರಾಷ್ಟ್ರಪತಿಯವರ ಒಪ್ಪಿಗೆಗಾಗಿ ನನೆಗುದಿಗೆ ಬಿದ್ದಿರುವ ಕನ್ನಡ ಮಾಧ್ಯಮ ಮಸೂದೆಗೆ ಒಪ್ಪಿಗೆ ಪಡೆಯಲು ಶೀಘ್ರ ಕ್ರಮವಹಿಸಬೇಕು. ಅಗತ್ಯವಿದ್ದಲ್ಲಿ ಒಬ್ಬ ಅಧಿಕಾರಿಯನ್ನು ನಿಯೋಜಿಸಬೇಕು’ ಎಂದು ಆಗ್ರಹಿಸಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT