ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಮುಗ್ಗಟ್ಟು: ಕಮರಿದ ಶಾರ್ಜಾ ಕನಸು

ಫೆ.10ರಿಂದ 16ರ ತನಕ ಶಾರ್ಜಾದಲ್ಲಿ ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಕೂಟ
Last Updated 13 ಜನವರಿ 2019, 20:10 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಹೋಬಳಿ ರಾಜಾನುಕುಂಟೆ ಗ್ರಾಮದಲ್ಲಿರುವ ಅಂಗವಿಕಲ ಕ್ರೀಡಾಪಟು ಸುಬ್ರಹ್ಮಣ್ಯ ಅವರು ಆರ್ಥಿಕ ಸಂಕಷ್ಟದಿಂದ ಶಾರ್ಜಾದಲ್ಲಿ ನಡೆಯಲಿರುವ ಕ್ರೀಡಾಕೂಟದಿಂದ ಹಿಂದೆ ಸರಿದಿದ್ದಾರೆ.

ಫೆ.10ರಿಂದ 16ರ ತನಕ ಶಾರ್ಜಾದಲ್ಲಿ ಅಂತರರಾಷ್ಟ್ರೀಯ ಅಂಗವಿಕಲ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಭಾರತದಿಂದ ಜಾವೆಲಿನ್‌ ಥ್ರೋ ಮತ್ತು ಡಿಸ್ಕಸ್‌ ಥ್ರೋ ವಿಭಾಗದಲ್ಲಿ ಸುಬ್ರಹ್ಮಣ್ಯ ಅವರು ಆಯ್ಕೆಯಾಗಿದ್ದಾರೆ. ಆದರೆ ಶಾರ್ಜಾಕ್ಕೆ ಹೋಗಲು ಸುಮಾರು ₹1 ಲಕ್ಷ ಬೇಕಾಗಿದೆ. ಅಷ್ಟು ಮೊತ್ತ ಜೋಡಿಸುವುದು ಅಸಾಧ್ಯವಾದ ಕಾರಣ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ದೊಡ್ಡ ತುಮಕೂರಿನವರಾದ ಅವರಿಗೆ 8ನೇ ವಯಸ್ಸಿನಲ್ಲಿ ಹಾವು ಕಚ್ಚಿತ್ತು. ಬಲಗೈ ತೆಗೆಸಿಕೊಳ್ಳಬೇಕಾಯಿತು. ಎಸ್ಸೆಸ್ಸೆಲ್ಸಿವರೆಗೆ ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಸಾಧನೆಯತ್ತ ಮುಖಮಾಡಿದರು. ಒಂದೇ ಕೈಯಲ್ಲಿ ಡಿಸ್ಕಸ್‌ ಥ್ರೋ ಮತ್ತು ಜಾವೆಲಿನ್‌ ಥ್ರೋದಲ್ಲಿ ಪರಿಣತಿ ಪಡೆದರು.

‘ಶ್ರೀಲಂಕಾ, ಮಲೇಷ್ಯಾ, ಚೀನಾ, ನೇಪಾಳಗಳಲ್ಲಿ ನಡೆದ ಅಂಗವಿಕಲರಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ತಮ್ಮ ಪರಿಣತಿಯ ಎರಡೂ ವಿಭಾಗಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದಿದ್ದರು. ಇದುವರೆಗೆ 56 ಪದಕ ಗೆದ್ದಿದ್ದಾರೆ. ಆದರೆ ಸರ್ಕಾರ ಅವರಿಗೆ ಒಂದು ಚಿಕ್ಕ ಕೆಲಸವನ್ನೂ ಕೊಡಲಿಲ್ಲ’ ಎನ್ನುತ್ತಾರೆ ತರಬೇತಿದಾರ ತುಳಸೀಧರ್.

‘ರಾಜಾನುಕುಂಟೆಯ ಬೀದಿ ಬದಿ ತರಕಾರಿ ಮಾರಿ ಜೀವನ ನಿರ್ವಹಿಸುತ್ತಿದ್ದೇನೆ. ಲಕ್ಷಾಂತರ ರೂಪಾಯಿ ಹಣ ನನ್ನಲ್ಲಿ ಇಲ್ಲ. ಅದಕ್ಕೆ ಈ ಬಾರಿಯ ಶಾರ್ಜಾಕ್ಕೆ ಹೋಗದೆ ಇರಲು ನಿರ್ಧರಿಸಿದೆ’ ಎಂದು ಸುಬ್ರಹ್ಮಣ್ಯ ಹೇಳಿದರು.
‘ನಮ್ಮದು ಬಡ ಕುಟುಂಬ. ಆವತ್ತಿನ ಊಟಕ್ಕೆ ಅಂದೇ ದುಡಿಯಬೇಕಾದ ಅನಿವಾರ್ಯ ಇದೆ’ ಎಂದು ತಮ್ಮ ಬಡತನವನ್ನು ಬಿಚ್ಚಿಟ್ಟರು.

ಪಿ.ಕೆ.ಬಿ. ಕಾಲೇಜಿನ ಪ್ರಾಂಶುಪಾಲ ಕರಗಯ್ಯ ಅವರು, ‘ನಮ್ಮ ಶಾಲೆಯಲ್ಲಿ ಸುಬ್ರಹ್ಮಣ್ಯ ಓದುವಾಗ ಶುಲ್ಕ ತೆಗೆದು ಕೊಳ್ಳುತ್ತಿರಲಿಲ್ಲ. ಒಳ್ಳೆಯ ವಿದ್ಯಾರ್ಥಿ. ತನ್ನ ಅಂಗವೈಕಲ್ಯವನ್ನು ಮೀರಿ ಆತ ಸಾಧನೆ ಮಾಡಿದ್ದಾನೆ. ಆದರೆ ಬಡತನ ಅವನ ಪ್ರತಿಭೆಯನ್ನು
ಬೆಳಗಿಸುತ್ತಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT