ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BMTC ಬಸ್‌ ಚಕ್ರ ಹರಿದು ಎಂಜಿನಿಯರಿಂಗ್ ವಿದ್ಯಾರ್ಥಿನಿ ಕುಸುಮಿತಾ ಸಾವು

Published 2 ಫೆಬ್ರುವರಿ 2024, 16:12 IST
Last Updated 2 ಫೆಬ್ರುವರಿ 2024, 16:12 IST
ಅಕ್ಷರ ಗಾತ್ರ

ಬೆಂಗಳೂರು: ನವರಂಗ್ ವೃತ್ತ ಬಳಿಯ ಮಹಾಕವಿ ಕುವೆಂಪು ರಸ್ತೆಯಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಬಿಎಂಟಿಸಿ ಬಸ್‌ನ ಹಿಂಬದಿ ಚಕ್ರ ಮೈ ಮೇಲೆ ಹರಿದು ಕುಸುಮಿತಾ (21) ಮೃತಪಟ್ಟಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿ ಕುಸುಮಿತಾ, ದ್ವಿಚಕ್ರ ವಾಹನ ಚಲಾಯಿಸಿಕೊಂಡು ಶುಕ್ರವಾರ ಬೆಳಿಗ್ಗೆ ಕಾಲೇಜಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ಅಪಘಾತ ಸಂಬಂಧ ಮಲ್ಲೇಶ್ವರ ಸಂಚಾರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

‘ಮಹಾಕವಿ ಕುವೆಂಪು ರಸ್ತೆಯ ಬದಿಯಲ್ಲಿ ಆಟೊ ಹಾಗೂ ದ್ವಿಚಕ್ರ ವಾಹನಗಳನ್ನು ನಿಲ್ಲಿಸಲಾಗಿತ್ತು. ಕುಸುಮಿತಾ ಅವರು ಚಲಿಸುತ್ತಿದ್ದ ಬಿಎಂಟಿಸಿ ಬಸ್‌ನ ಪಕ್ಕದಲ್ಲಿ ದ್ವಿಚಕ್ರ ವಾಹನ ಚಲಾಯಿಸಿದ್ದರು. ಇದೇ ಸಂದರ್ಭದಲ್ಲಿ ದ್ವಿಚಕ್ರ ವಾಹನ ಉರುಳಿಬಿದ್ದಿತ್ತು. ವಾಹನ ಸಮೇತ ರಸ್ತೆಗೆ ಬಿದ್ದಿದ್ದ ಕುಸುಮಿತಾ ಮೈ ಮೇಲೆಯೇ ಬಸ್‌ನ ಚಕ್ರ ಹರಿದಿತ್ತು’ ಎಂದು ಪೊಲೀಸರು ಹೇಳಿದರು.

‘ಇದೊಂದು ಸರಣಿ ಅಪಘಾತವೆಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಅಪಘಾತಕ್ಕೆ ಯಾರು ಹೊಣೆ ಎಂಬುದು ತನಿಖೆಯಿಂದ ತಿಳಿಯಬೇಕಿದೆ. ಬಿಎಂಟಿಸಿ ಚಾಲಕ ಹಾಗೂ ಇತರರ ವಿರುದ್ಧ ದೂರು ಸ್ವೀಕರಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಹಿಂದಿಕ್ಕಲು ಹೋಗಿ ಅವಘಡ

ಅಪಘಾತದ ಬಗ್ಗೆ ವಿಡಿಯೊ ಬಿಡುಗಡೆ ಮಾಡಿರುವ ಬಿಎಂಟಿಸಿ ಅಧಿಕಾರಿಗಳು, ‘ಶಿವಾಜಿನಗರದಿಂದ ಕಮಲಾನಗರಕ್ಕೆ ಬಸ್‌ (ಕೆಎ 57 ಎಫ್‌ 3350) ಹೊರಟಿತ್ತು. ದ್ವಿಚಕ್ರ ವಾಹನದಲ್ಲಿದ್ದ ಯುವತಿ, ಬಸ್‌ನ ಎಡಭಾಗದಲ್ಲಿ ಸಾಗಿ ಹಿಂದಿಕ್ಕಲು ಯತ್ನಿಸಿದ್ದರು. ಆಟೊಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು, ದ್ವಿಚಕ್ರ ವಾಹನ ಉರುಳಿಬಿದ್ದಿತ್ತು. ಯುವತಿ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿದ್ದರು’ ಎಂದಿದ್ದಾರೆ.

ಅಪಘಾತ: ಬೈಕ್‌ ಹಿಂಬದಿ ಸವಾರ ಸಾವು

ನಾಯಂಡಹಳ್ಳಿ ಜಂಕ್ಷನ್ ಬಳಿ ಗುರುವಾರ ರಾತ್ರಿ ಅಪಘಾತ ಸಂಭವಿಸಿದ್ದು ಬೈಕ್‌ನ ಹಿಂಬದಿ ಸವಾರ ಮಧು (22) ಮೃತಪಟ್ಟಿದ್ದಾರೆ.

‘ಮಧು ಹಾಗೂ ಸ್ನೇಹಿತ ಪ್ರಜ್ವಲ್ ಸ್ನೇಹಿತರ ಮನೆಗೆ ಬೈಕ್‌ನಲ್ಲಿ ಹೋಗಿದ್ದರು. ಸ್ನೇಹಿತರನ್ನು ಮಾತನಾಡಿಸಿಕೊಂಡು ರಾತ್ರಿ 9.45 ಗಂಟೆ ಸುಮಾರಿಗೆ ತಮ್ಮ ಮನೆಯತ್ತ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಬ್ಯಾಟರಾಯನಪುರ ಸಂಚಾರ ಪೊಲೀಸರು ಹೇಳಿದರು.

‘ನಾಗರಬಾವಿ ಕಡೆಯಿಂದ ನಾಯಂಡಹಳ್ಳಿ ಜಂಕ್ಷನ್‌ ಕಡೆ ಬೈಕ್ ತೆರಳುತ್ತಿದ್ದರು. ಪ್ರಜ್ವಲ್ ಅವರು ಬೈಕ್ ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಮಧು ಕುಳಿತಿದ್ದರು.

ಜಂಕ್ಷನ್‌ನಲ್ಲಿ ಬೈಕ್ ಉರುಳಿಬಿದ್ದಿತ್ತು. ಪ್ರಜ್ವಲ್ ಹಾಗೂ ಮಧು ರಸ್ತೆಯ ಅಕ್ಕ–ಪಕ್ಕದಲ್ಲಿ ಪ್ರತ್ಯೇಕವಾಗಿ ಬಿದ್ದಿದ್ದರು. ಇದೇ ಮಾರ್ಗವಾಗಿ ಅತೀ ವೇಗದಲ್ಲಿ ಹೊರಟಿದ್ದ ಕ್ಯಾಂಟರ್ ಚಕ್ರ ಮಧು ಅವರ ಮೈ ಮೇಲೆ ಹರಿದಿತ್ತು ಎನ್ನಲಾಗಿದೆ.

ಗಾಯಗೊಂಡಿದ್ದ ಪ್ರಜ್ವಲ್ ಹಾಗೂ ಮಧು ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದೇ ಆಸ್ಪತ್ರೆಯಲ್ಲಿ ಮಧು ಮೃತಪಟ್ಟಿದ್ದಾರೆ. ಪ್ರಜ್ವಲ್ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT