ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಪ್ರದೇಶಗಳ ಸಮಗ್ರ ಅಭಿವೃದ್ದಿ: ಎಂ.ಬಿ.ಪಾಟೀಲ

‘ರಫ್ತು ಶ್ರೇಷ್ಠತಾ ಪ್ರಶಸ್ತಿ’: 74 ಕಂಪನಿಗಳಿಗೆ ಪ್ರದಾನ
Published 18 ಆಗಸ್ಟ್ 2023, 16:07 IST
Last Updated 18 ಆಗಸ್ಟ್ 2023, 16:07 IST
ಅಕ್ಷರ ಗಾತ್ರ

ಬೆಂಗಳೂರು: ‘ನಗರದ ಪೀಣ್ಯ ಸೇರಿದಂತೆ ರಾಜ್ಯದ ಎಲ್ಲ ಕೈಗಾರಿಕಾ ಪ್ರದೇಶಗಳಿಗೆ ಮೂಲಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಿದೆ’ ಎಂದು ಬೃಹತ್‌ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಭರವಸೆ ನೀಡಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ 18ನೇ ವರ್ಷದ ‘ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೈಗಾರಿಕಾ ವಲಯಗಳ ಸಮಗ್ರ ಬೆಳವಣಿಗೆಗೆ ಸರ್ಕಾರ ಚಿಂತನೆ ನಡೆಸಿದೆ. ಬಜೆಟ್‌ನಲ್ಲೂ ಕೆಲವು ಯೋಜನೆ ಘೋಷಿಸಲಾಗಿದೆ. ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಕೊಡುಗೆ, ಕೈಗಾರಿಕೆಗಳ ಸ್ಥಿತಿಗತಿ ಅರಿವಿದೆ’ ಎಂದು ಹೇಳಿದರು.

‘ರಾಜ್ಯವು ರಫ್ತಿನಲ್ಲಿ 3ನೇ ಸ್ಥಾನದಲ್ಲಿದೆ. ಈ ಹಿಂದೆ 9ನೇ ಸ್ಥಾನದಲ್ಲಿತ್ತು. ಜೈವಿಕ ತಂತ್ರಜ್ಞಾನ, ವೈಮಾನಿಕ ಕ್ಷೇತ್ರ, ಉತ್ಪಾದನಾ ವಲಯ, ಸೇವಾ ವಲಯದಲ್ಲಿ ರಾಜ್ಯವು ಹೆಚ್ಚಿನ ಸಾಧನೆ ಮಾಡುತ್ತಿದೆ’ ಎಂದರು.‌

‘ರಫ್ತು ಪ್ರಮಾಣ ಹೆಚ್ಚಳದಿಂದ ಕೈಗಾರಿಕೆಗಳ ಬೆಳವಣಿಗೆ ಸಾಧ್ಯವಾಗಲಿದೆ. ಅಟೊಮೊಬೈಲ್‌ ಕ್ಷೇತ್ರದ ಉತ್ಪಾದನೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ. ಐಟಿ–ಬಿಟಿ ಕ್ಷೇತ್ರದಲ್ಲೂ ಹೆಗ್ಗುರುತು ಮೂಡಿಸಿದೆ’ ಎಂದು ಹೇಳಿದರು.

ಎಫ್‌ಕೆಸಿಸಿಐನ ಅಧ್ಯಕ್ಷ ಬಿ.ವಿ.ಗೋಪಾಲರೆಡ್ಡಿ ಮಾತನಾಡಿ, ‘ರಾಜ್ಯವು ನವೋದ್ಯಮ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕವು ಉತ್ತಮ ಸಾಧನೆ ಮಾಡಿದೆ. ಜಾಗತಿಕಮಟ್ಟದಲ್ಲಿ ಹೂಡಿಕೆದಾರರ ಆಕರ್ಷಣೆ ಕೇಂದ್ರವಾಗಿ ರಾಜ್ಯವು ಹೊರಹೊಮ್ಮಿದೆ’ ಎಂದು ಬಣ್ಣಿಸಿದರು.

‘ಜೈವಿಕ ತಂತ್ರಜ್ಞಾನ, ವೈಮಾನಿಕ ಕ್ಷೇತ್ರ, ಎಂಜಿನಿಯರಿಂಗ್‌, ಗಾರ್ಮೆಂಟ್ಸ್, ಎಲೆಕ್ಟ್ರಾನಿಕ್ಸ್‌, ಆಹಾರ ಸಂಸ್ಕರಣಾ ಕ್ಷೇತ್ರದ ರಫ್ತಿನಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ’ ಎಂದು ಶ್ಲಾಘಿಸಿದರು.

ರಫ್ತು ಶ್ರೇಷ್ಠತಾ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷೆ ಉಮಾರೆಡ್ಡಿ ಮಾತನಾಡಿ, ‘ವಿವಿಧ ವಿಭಾಗಗಳಲ್ಲಿ 74 ಕಂಪನಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಗಿದೆ. ಆಯ್ಕೆ ಅತ್ಯಂತ ಪಾರದರ್ಶಕವಾಗಿ ನಡೆಸಲಾಯಿತು. ವಾರ್ಷಿಕವಾಗಿ ₹ 400 ಕೋಟಿಗೂ ಹೆಚ್ಚು ವಹಿವಾಟು ನಡೆಸುವ ಕೈಗಾರಿಕೆಗಳನ್ನು ಸ್ಟಾರ್‌ ರಫ್ತುದಾರರ ಪ್ರಶಸ್ತಿಗೆ ಪರಿಗಣಿಸಲಾಯಿತು’ ಎಂದು ತಿಳಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ, ಶಾರ್ಜಾದ (ಯುಎಇ) ಸೈಫ್‌ ಜೋನ್‌ ಸಂಸ್ಥೆಯ ಮಹಾನಿರ್ದೇಶಕ ಎಚ್‌.ಇ. ಸೈಯದ್‌ ಅಲ್‌ ಮಜರುಯಿ, ಬ್ಯಾಂಕ್‌ ಆಫ್‌ ಬರೋಡದ ಜಿಎಂ ಡಿ.ದಾಸ್‌, ರಮೇಶ್‌ಚಂದ್ರ ಲಾಹೋಟಿ ಇದ್ದರು.

ಸ್ಟಾರ್‌ ರಫ್ತುದಾರರು, ರಫ್ತು ಉತ್ಪಾದನಾದಾರರು, ವ್ಯಾಪಾರಿ ರಫ್ತುದಾರರು ಹಾಗೂ ಜಿಲ್ಲಾ ಹಂತದಲ್ಲಿ ಅತ್ಯುತ್ತಮ ರಫ್ತುದಾರರಿಗೆ ಇದೇ ವೇಳೆ ಪ್ರಶಸ್ತಿ ವಿತರಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT