ಶುಕ್ರವಾರ, ಸೆಪ್ಟೆಂಬರ್ 24, 2021
26 °C

ಗಸ್ತು ತಿರುಗದ ಪೊಲೀಸರು: ‘ಸಿಬಿಡಿ’ಯಲ್ಲಿ ಸುಲಿಗೆಕೋರರ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸೌಧ ಸುತ್ತ ಮುತ್ತಲಿನ ಕೇಂದ್ರ ವಾಣಿಜ್ಯ ಪ್ರದೇಶ ದಲ್ಲಿ (ಸಿಬಿಡಿ) ಇತ್ತೀಚಿನ ದಿನಗಳಲ್ಲಿ ಸುಲಿಗೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಸುಕಿನಲ್ಲಿ ಓಡಾಡಲು ಜನ ಭಯ ಪಡುತ್ತಿದ್ದಾರೆ. ಪೊಲೀಸರು ಗಸ್ತು ತಿರುಗುವುದನ್ನೇ ಕಡಿಮೆ ಮಾಡಿದ್ದು, ಇದು ಸುಲಿಗೆಕೋರರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಿದೆ.

ನಿತ್ಯವೂ ನಸುಕಿನಲ್ಲಿ ಬೈಕ್, ಆಟೊ ಹಾಗೂ ಕಾರಿನಲ್ಲಿ ಸುತ್ತಾಡುತ್ತಿರುವ ದುಷ್ಕರ್ಮಿಗಳು, ಸಾರ್ವಜನಿಕರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದಾರೆ. ಚಾಕು ತೋರಿಸಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಹಲವರು ಪೊಲೀಸರಿಗೆ ದೂರು ನೀಡಿದ್ದು, ಸುಲಿಗೆಕೋರರ ಬಂಧನ ಮಾತ್ರ ಆಗಿಲ್ಲ.

‘ಸಿಬಿಡಿಯಲ್ಲಿ ಇತ್ತೀಚೆಗೆ 7 ಸುಲಿಗೆ ಪ್ರಕರಣಗಳು ವರದಿಯಾಗಿದ್ದು, ನಸುಕಿನಲ್ಲಿ ಓಡಾಡಲು ಭಯವಾಗು ತ್ತಿದೆ. ಪೊಲೀಸರು ಸಿಬಿಡಿಯಲ್ಲಿ ಗಸ್ತು ಹೆಚ್ಚಿಸಿ, ಸುಲಿಗೆಕೋರರನ್ನು ಬಂಧಿಸ ಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಆಟೊ ಅಡ್ಡಗಟ್ಟಿ ಸುಲಿಗೆ: ಸುಲಿಗೆ ಪ್ರಕರಣ ಸಂಬಂಧ ಪತ್ರಿಕಾ ವಿತರಕ ಎಸ್‌.ಟಿ. ತಿಮ್ಮಪ್ಪ ಎಂಬುವರು ಅಶೋಕ ನಗರ ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್ ದಾಖಲಾಗಿದೆ.

‘ಸೋಮವಾರ ನಸುಕಿನ 4.15ರ ಸುಮಾರಿಗೆ ಆಟೊದಲ್ಲಿ ಪತ್ರಿಕೆಗಳ ಬಂಡಲ್ ಹಾಕಿಕೊಂಡು ಹೊರಟಿದ್ದೆ. ಬ್ರಿಗೇಡ್ ರಸ್ತೆಯಲ್ಲಿರುವ ಔಷಧಿ ಮಳಿಗೆಯೊಂದರ ಎದುರು ಪಲ್ಸರ್‌ ಬೈಕ್‌ನಲ್ಲಿ ಬಂದಿದ್ದ ಮೂವರು ಆಟೊ ಅಡ್ಡಗಟ್ಟಿದ್ದರು. ಸ್ಟೇರಿಂಗ್‌ಗೆ ಕಟ್ಟಿದ್ದ ಮೊಬೈಲ್‌ ಕಿತ್ತುಕೊಳ್ಳಲು ಯತ್ನಿಸಿದ್ದರು. ಅಕ್ಕ–ಪಕ್ಕದಲ್ಲೇ ಕುಳಿತು ಹೊರಗೆ ಹೋಗದಂತೆ ತಡೆದರು’ ಎಂದೂ ದೂರಿನಲ್ಲಿ ತಿಮ್ಮಪ್ಪ ಹೇಳಿದ್ದಾರೆ.

‘ಆಯುಧ ತೋರಿಸಿದ್ದ ಆರೋಪಿ ಗಳು, ಕೊಲೆ ಮಾಡುವ ಬೆದರಿಕೆಯೊಡ್ಡಿ ದ್ದರು. ಜೇಬಿಗೆ ಕೈ ಹಾಕಿ ₹ 2,000 ನಗದು ಕಿತ್ತುಕೊಂಡರು. ಸಹಾಯಕ್ಕಾಗಿ ಕಿರುಚಾಡುತ್ತಿ
ದ್ದಂತೆ ಆರೋಪಿಗಳು ಸ್ಥಳದಿಂದ ಪರಾರಿ ಯಾದರು. ದುಷ್ಕರ್ಮಿಗಳು ನನ್ನ ತಲೆಗೆ ಚಾಕುವಿನಿಂದ ಚುಚ್ಚಿದ್ದಾರೆ. ಗಾಯ ವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ‍ಪಡೆದುಕೊಂಡಿದ್ದೇನೆ.’

‘ಅದೇ ರಸ್ತೆಯಲ್ಲೇ ಹೊರಟಿದ್ದ ಹಾಲು ಮಾರಾಟಗಾರ ಆಶ್ವಿನ್‌ಕುಮಾರ್ ಶರ್ಮ ಎಂಬುವರ ಬಳಿಯೂ ₹ 15 ಸಾವಿರ ಮೌಲ್ಯದ ಮೊಬೈಲ್‌ನ್ನು ಆರೋಪಿಗಳು ಸುಲಿಗೆ ಮಾಡಿರುವುದು ಗೊತ್ತಾಯಿತು. ಆರೋಪಿಗಳು 20–22 ವರ್ಷದವರಾಗಿದ್ದು, ಅವರನ್ನು ಪತ್ತೆ ಮಾಡಿ’ ಎಂದೂ ತಿಮ್ಮಪ್ಪ ದೂರಿನಲ್ಲಿ ಕೋರಿದ್ದಾರೆ.

ಸುಲಿಗೆ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ‘ಸಿಬಿಡಿ ಪ್ರದೇಶದಲ್ಲಿ ಗಸ್ತು ಹೆಚ್ಚಿಸಲಾಗುವುದು. ಆರೋಪಿಗಳ ಪತ್ತೆಗೂ ತನಿಖೆ ಮುಂದುವರಿದಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು