ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಬಸ್‌ಪೇಟೆ: ರೈತರ ಮಕ್ಕಳಿಗೆ ಸಿಗದ ಉದ್ಯೋಗ, ಸಭೆಯಲ್ಲಿ ಜನರ ಆಕ್ರೋಶ

Published 20 ಡಿಸೆಂಬರ್ 2023, 23:30 IST
Last Updated 20 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ದಾಬಸ್‌ಪೇಟೆ: ಕೈಗಾರಿಕಾ ಪ್ರದೇಶಕ್ಕಾಗಿ ಜಮೀನು ನೀಡಿದ ರೈತರ ಮಕ್ಕಳಿಗೆ ಉದ್ಯೋಗ ನೀಡಲಾಗುವುದು, ಆಸ್ಪತ್ರೆ ಕಟ್ಟಿಸಿಕೊಡಲಾಗುವುದು ಎಂದು ಜಮೀನು ಸ್ವಾಧೀನಪಡಿಸಿಕೊಳ್ಳುವ ಮೊದಲು ಭರವಸೆಗಳನ್ನು ನೀಡಲಾಗಿತ್ತು. ಈಗ ಆಸ್ಪತ್ರೆಯೂ ಇಲ್ಲ, ರೈತರ ಮಕ್ಕಳಿಗೆ ಉದ್ಯೋಗವೂ ಇಲ್ಲ..!

ಇದು ಸೋಂಪುರ 5ನೇ ಹಂತದ ಕೈಗಾರಿಕಾ ಪ್ರದೇಶಕ್ಕೆ ಜಮೀನು ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಅಹವಾಲು ಆಲಿಸುವ ಸಭೆಯಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸಿದ ಪರಿ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯು(ಕೆಐಡಿಬಿ) ಸೋಂಪುರ ಹೋಬಳಿಯ ಕೆಂಗಲ್ ಕೆಂಪೋಹಳ್ಳಿ, ಗೆದ್ದಲಹಳ್ಳಿ, ಮಾಚನಹಳ್ಳಿ, ಬಿಲ್ಲಿನಕೋಟೆ ಮತ್ತು ಅವೇರಹಳ್ಳಿ ಗ್ರಾಮಗಳ ರೈತರ 239.49 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿತ್ತು. ಈ ಸಂಬಂಧ ಸಾರ್ವಜನಿಕರಿಂದ ಅಹವಾಲು ಆಲಿಸುವ ಸಭೆ ಆಯೋಜಿಸಲಾಗಿತ್ತು.

ಸಭೆಯಲ್ಲಿದ್ದ ಬಿಲ್ಲಿನಕೋಟೆ ಗ್ರಾಮಸ್ಥ ಮಾಳಯ್ಯ, ’ಕೆಐಡಿಬಿಯಲ್ಲಿ ದಲ್ಲಾಳಿಗಳ ಸಂಖ್ಯೆ ಜಾಸ್ತಿಯಾಗಿದೆ. ಸಂಬಂಧವಿಲ್ಲದವರಿಂದ ನ್ಯಾಯಲಯದಲ್ಲಿ ಕೇಸು ಹಾಕಿಸುತ್ತಾರೆ’ ಎಂದು ಅಳಲು ತೋಡಿಕೊಂಡರು.

’ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ 540 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಯಾವ ಕಂಪನಿಯೂ ರೈತರಿಗೆ ಕೆಲಸ ನೀಡುತ್ತಿಲ್ಲ. ಕಳೆದ ಬಾರಿ ಸಭೆ ಕರೆದಾಗ, ಉದ್ಯೋಗ ಕೊಡುತ್ತೇವೆ, ಆಸ್ಪತ್ರೆ ಕಟ್ಟಿಕೊಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದರು. ಆದರೆ ಯಾವುದೂ ಆಗಿಲ್ಲ’ ಎಂದು ಗ್ರಾಮಸ್ಥ ಗಣೇಶ್ ದೂರಿದರು.

’ನಮ್ಮ ಮನೆ ಹತ್ತಿರದ ಜಮೀನನ್ನು ಕೆಐಎಡಿಬಿ ಸ್ವಾಧೀನ ಮಾಡಿಕೊಂಡಿದೆ. ಈಗ ಅದನ್ನು ಬಿಡಿಸಿಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕು. ನೀವು ಕೊಡುತ್ತಿರುವ ಪುಡಿಗಾಸಿಗೆ ದಾಬಸ್ ಪೇಟೆಯಲ್ಲಿ ಒಂದು ನಿವೇಶನ ಕೊಳ್ಳಲು ಸಾಧ್ಯವಾಗಲ್ಲ’ ಎಂದು ರಮೇಶ್ ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಶಿವಶಂಕರ, ‘ರೈತರಿಂದ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ನೀಡಲಾಗುತ್ತಿದೆ. ಕೇಸ್ ನೋಂದಣಿಯಾಗಿ ವ್ಯಾಜ್ಯ ಇತ್ಯರ್ಥವಾಗದೇ ಇದ್ದರೆ, ಅಂತಹ ಜಮೀನುಗಳಿಗೆ ನೀಡಬೇಕಾದ ಪರಿಹಾರ ಮೊತ್ತವನ್ನು ಕೆಐಎಡಿಬಿಯಲ್ಲೇ ಇಟ್ಟುಕೊಳ್ಳಲು ಸಲಹೆ ನೀಡಲಾಗುವುದು. ಕೈಗಾರಿಕೆಗಳಿಗೆ ಭೂಮಿ ನೀಡಿದ ರೈತರ ಮಕ್ಕಳಿಗೆ ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಉದ್ಯೋಗ ನೀಡಲು ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ತಿಳಿಸಲಾಗುವುದು’ ಎಂದು ಭರವಸೆ ನೀಡಿದರು.

ನೆಲಮಂಗಲ ತಹಶೀಲ್ದಾರ್ ಕೆ. ಅರುಂಧತಿ, ನೆಲಮಂಗಲದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಭೀಮ್‌ಸಿಂಗ್ ಗೋಗಿ, ಹಿರಿಯ ಪರಿಸರ ಅಧಿಕಾರಿ ಅನಿಲ್ ಕುಮಾರ್, ದಾಬಸ್‌ ಪೇಟೆ ಪೋಲಿಸ್ ಠಾಣೆಯ ಬಿ.ರಾಜು, ಉಪ ತಹಶೀಲ್ದಾರ್ ಬಿ.ಸಿ. ಶಶಿಧರ ಪಾಲ್ಗೊಂಡಿದ್ದರು.

ಕೈಗಾರಿಕೆಗಳಿಗೆ ಭೂಮಿ ನೀಡಿದ ರೈತರ ಮಕ್ಕಳಿಗೆ ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಉದ್ಯೋಗ ನೀಡಲು ಕಾರ್ಖಾನೆಗಳ ಆಡಳಿತ ಮಂಡಳಿಗಳಿಗೆ ತಿಳಿಸಲಾಗುವುದು.
-ಡಾ. ಶಿವಶಂಕರ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT