ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ದಾವೆ ಜಾಲ: 50 ದೋಷಾರೋಪ ಪಟ್ಟಿ ಸಲ್ಲಿಕೆ

* ನಕಲಿ ಕಕ್ಷಿದಾರ– ಪ್ರತಿವಾದಿ ಸೃಷ್ಟಿ * ವಾರಸುದಾರರಿಲ್ಲದ ನೂರಾರು ಕೋಟಿ ಮೌಲ್ಯದ ಆಸ್ತಿ ಕಬಳಿಕೆ: ಸಿಐಡಿ ತನಿಖೆ
Published 10 ಫೆಬ್ರುವರಿ 2024, 0:30 IST
Last Updated 10 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ನಕಲಿ ಕಕ್ಷಿದಾರ ಹಾಗೂ ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆದು ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸುತ್ತಿದ್ದ ಜಾಲದ ವಿರುದ್ಧ ತನಿಖೆ ನಡೆಸಿದ್ದ ಸಿಐಡಿ ಅಧಿಕಾರಿಗಳು, 50 ಪ್ರಕರಣಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕಬಳಿಸಲು ನಕಲಿ ಮೊಕದ್ದಮೆ ಹೂಡುತ್ತಿದ್ದ ಜಾಲ ಹಲವು ವರ್ಷಗಳಿಂದ ಸಕ್ರಿಯವಾಗಿತ್ತು. ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಜಾಲದ ಸುಳಿವು ಪತ್ತೆ ಮಾಡಿದ್ದ ಹೈಕೋರ್ಟ್, ತನಿಖೆಗೆ ಸೂಚಿಸಿತ್ತು.

‘ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ’ ಬಗ್ಗೆ ಹೈಕೋರ್ಟ್‌ ನೀಡಿದ್ದ ನಿರ್ದೇಶನದಂತೆ ಲಘು ಪ್ರಕರಣಗಳ ನ್ಯಾಯಾಲಯದ (ಎಸ್‌ಸಿಸಿಎಚ್) ರಿಜಿಸ್ಟ್ರಾರ್ ಆರ್. ಧನಲಕ್ಷ್ಮಿ ಅವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದರು. 2020ರ ಡಿಸೆಂಬರ್ 7ರಂದು ಎಫ್‌ಐಆರ್ ದಾಖಲಾಗಿತ್ತು.

ತನಿಖೆ ಕೈಗೆತ್ತಿಕೊಂಡಿದ್ದ ಸಿಐಡಿ ಅಧಿಕಾರಿಗಳು, ಜಾಲದ ಪ್ರಮುಖ ಆರೋಪಿ ಜಾನ್ ಮೋಸಸ್ ಸೇರಿದಂತೆ 18 ಆರೋಪಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಹಲವರು ಜಾಮೀನು ಪಡೆದುಕೊಂಡಿದ್ದಾರೆ.

130 ಪ್ರಕರಣಗಳು:

‘ನಕಲಿ ಮೊಕದ್ದಮೆ ಹೂಡಿ ಆಸ್ತಿ ಕಬಳಿಸಿದ್ದ 130 ಪ್ರಕರಣಗಳು ತನಿಖೆ ವೇಳೆ ಪತ್ತೆಯಾಗಿದ್ದವು. ಇದೀಗ 50 ಪ್ರಕರಣಗಳ ತನಿಖೆ ಮುಕ್ತಾಯಗೊಂಡಿದ್ದು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಉಳಿದ ಪ್ರಕರಣಗಳ ತನಿಖೆ ಮುಂದುವರಿದಿದೆ’ ಎಂದು ಸಿಐಡಿ ಮೂಲಗಳು ಹೇಳಿವೆ.

‘ಪ್ರಮುಖ ಆರೋಪಿ ಜಾನ್ ಮೋಸಸ್, ಸೇಂಟ್ ಜಾನ್ಸ್ ರಸ್ತೆಯಲ್ಲಿ ಜಾಜ್ ಗ್ಲೋಬಲ್ ಬ್ಯುಸಿನೆಸ್ ಕಂಪನಿ ಕಚೇರಿ ಹೊಂದಿದ್ದಾನೆ. ನಕಲಿ ದಾಖಲೆ ಸೃಷ್ಟಿಸಿ ಪರರ ಆಸ್ತಿ ಕಬಳಿಸುವುದನ್ನೇ ಈತ ವೃತ್ತಿ ಮಾಡಿಕೊಂಡಿದ್ದ. ಈತನ ಕೃತ್ಯದಲ್ಲಿ ಹಲವರು ಭಾಗಿಯಾಗಿದ್ದರು. ಎಲ್ಲರ ವಿರುದ್ಧವೂ ಪುರಾವೆಗಳು ಲಭ್ಯವಾಗಿದ್ದು, ಅವುಗಳನ್ನು ಆರೋಪ ಪಟ್ಟಿ ಜೊತೆ ಲಗತ್ತಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಪತ್ತೆಯಾಗಿದ್ದು ಹೇಗೆ:

ಯಶವಂತಪುರ ಬಳಿಯ ಗೋಕುಲ 1ನೇ ಹಂತದ ಆಂಜನೇಯ ದೇವಸ್ಥಾನ ಬಳಿ ಇರುವ ಷಾ ಹರಿಲಾಲ್ ಭಿಕಾಭಾಯಿ ಆ್ಯಂಡ್‌ ಕಂಪನಿಗೆ ಸೇರಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಜಾಗ ಕಬಳಿಸಲು ಆರೋಪಿಗಳು ನಕಲಿ ದಾವೆ ಹೂಡಿದ್ದರು.

ಜಾಲದ ಕೃತ್ಯ ಗೊತ್ತಾಗುತ್ತಿದ್ದಂತೆ ನೈಜ ಮಾಲೀಕರು, ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದೇ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನಕಲಿ ದಾವೆ ಜಾಲದ ಕೃತ್ಯಗಳು ಪತ್ತೆಯಾಗಿದ್ದವು. ಜಾನ್ ಮೋಸಸ್, ಸಹಚರರು, ಕೆಲ ವಕೀಲರ ವಿರುದ್ಧವೂ ಎಫ್‌ಐಆರ್‌ಗಳು ದಾಖಲಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT