ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಂಘದ 45 ಎಕರೆ ಜಮೀನು ಕೈತಪ್ಪುವ ಭೀತಿ

* ₹2,000 ಕೋಟಿ ಮೌಲ್ಯದ ಆಸ್ತಿ *ವ್ಯಾಜ್ಯದಲ್ಲಿರುವ ಜಮೀನಿಗೆ ನಕ್ಷೆ ಮಂಜೂರಾತಿಗೆ ಅರ್ಜಿ
Published 13 ಫೆಬ್ರುವರಿ 2024, 0:30 IST
Last Updated 13 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಅಧೀನದಲ್ಲಿರುವ ಕೃಷ್ಣಪ್ಪ ರಂಗಮ್ಮ ಶಿಕ್ಷಣ (ಕೆಆರ್‌ಇ) ಟ್ರಸ್ಟ್‌ ನಗರದ ಸಜ್ಜೆಪಾಳ್ಯದಲ್ಲಿ ಹೊಂದಿರುವ ₹2,000 ಕೋಟಿಗೂ ಹೆಚ್ಚು ಮೌಲ್ಯದ ಜಮೀನಿಗೆ ಸಂಬಂಧಿಸಿದ ಕಾನೂನು ವ್ಯಾಜ್ಯಗಳು ಬಾಕಿ ಇರುವಾಗಲೇ ಆ ಸ್ವತ್ತನ್ನು ರಿಯಲ್‌ ಎಸ್ಟೇಟ್‌ ಉದ್ದೇಶಕ್ಕೆ ಬಳಸಲು ನಕ್ಷೆ ಅನುಮೋದನೆ ಕೋರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಅರ್ಜಿ ಸಲ್ಲಿಸಲಾಗಿದೆ.

ಸಜ್ಜೆಪಾಳ್ಯದ ಗ್ರಾಮದಲ್ಲಿರುವ 45 ಎಕರೆ 33 ಗುಂಟೆ ಜಮೀನಿನ ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯಗಳು ನ್ಯಾಯಾಲಯಗಳಲ್ಲಿ ಬಾಕಿ ಇವೆ. ವ್ಯಾಜ್ಯ ಇತ್ಯರ್ಥವಾಗದಿದ್ದರೂ ಕೆಲ ವ್ಯಕ್ತಿಗಳ ಹೆಸರಿನಲ್ಲಿ ಬಡಾವಣೆ ನಿರ್ಮಾಣಕ್ಕೆ ನಕ್ಷೆ ಅನುಮೋದನೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಮಾನ್ಯ ಮಾಡದಂತೆ ಕೆಆರ್‌ಇ ಟ್ರಸ್ಟ್‌, ಬಿಡಿಎ ಆಯುಕ್ತರಿಗೆ ತಕರಾರು ಸಲ್ಲಿಸಿದೆ. ಭೂಕಬಳಿಕೆ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ವಿಧಾನಸಭೆಯ ಅರ್ಜಿ ಸಮಿತಿಗೂ ದೂರಿತ್ತಿದೆ.

ತಮ್ಮ ಕುಟುಂಬದ ಹೆಸರಿನಲ್ಲಿ ಶೈಕ್ಷಣಿಕ ಸಂಸ್ಥೆಗಳನ್ನು ಒಳಗೊಂಡ ದತ್ತಿ ಸ್ಥಾಪಿಸಲು ರಂಗಮ್ಮ ಅವರು ಉಯಿಲಿನ ಮೂಲಕ ದಾನವಾಗಿ ನೀಡಿದ್ದ ಜಮೀನನ್ನು ಕೆಆರ್‌ಇ ಟ್ರಸ್ಟ್‌ ಸುಪರ್ದಿಗೆ ವಹಿಸಲಾಗಿತ್ತು. ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂಬರ್‌ 15ರಲ್ಲಿ ಟ್ರಸ್ಟ್‌ ಸ್ವಾಧೀನದಲ್ಲಿರುವ ಜಮೀನಿಗೆ ನಕ್ಷೆ ಅನುಮೋದನೆ ಕೋರಿ ರಂಗಮ್ಮ ಅವರ ಉಯಿಲು ನಿರ್ವಾಹಕರ ಕುಟುಂಬದ ಸದಸ್ಯ ಬಿ.ಪಿ. ಮಹೇಂದ್ರ ಮತ್ತು ರಿಯಲ್‌ ಎಸ್ಟೇಟ್‌ ಉದ್ಯಮಿಯೂ ಆಗಿರುವ ಜೆಡಿಎಸ್‌ ಮುಖಂಡ ಟಿ.ಎನ್‌. ಜವರಾಯಿಗೌಡ ಅರ್ಜಿ ಸಲ್ಲಿಸಿದ್ದಾರೆ.

ದೂರಿನಲ್ಲಿ ಏನಿದೆ?: ‘ರಂಗಮ್ಮ ಎಂಬವರು ಸಜ್ಜೆಪಾಳ್ಯದ ಸರ್ವೆ ನಂಬರ್‌ 8, 9, 10, 13, 14 ಮತ್ತು 15 ಹಾಗೂ ಮಾಳಗಾಳ ಗ್ರಾಮದ ಸರ್ವೆ ನಂಬರ್‌ 43 ಮತ್ತು 44ರಲ್ಲಿ ಒಟ್ಟು 96 ಎಕರೆ 35 ಗುಂಟೆ ಜಮೀನು ಹೊಂದಿದ್ದರು. ಸದರಿ ಜಮೀನನ್ನು ತಮ್ಮ ಕುಟುಂಬದ ಹೆಸರಿನಲ್ಲಿ ಸಾರ್ವಜನಿಕ ದತ್ತಿ ಉದ್ದೇಶಕ್ಕೆ ಬಳಕೆ ಮಾಡುವಂತೆ ರಂಗಮ್ಮ ಅವರು 1962ರ ಮಾರ್ಚ್‌ 19ರಂದು ಉಯಿಲು ಬರೆದಿದ್ದರು.

‘ಉಯಿಲಿನ ನಿರ್ವಾಹಕರನ್ನಾಗಿ ಸೋದರಳಿಯ ಬಿ.ಎಂ. ಪುಟ್ಟಸ್ವಾಮಿ ಎಂಬವರನ್ನು ನೇಮಿಸಿದ್ದರು. ಅವರಿಗೆ ಜಮೀನನ್ನು ವಿಲೇವಾರಿ ಮಾಡಿ ಟ್ರಸ್ಟ್‌ಗೆ ವರಮಾನ ವರ್ಗಾಯಿಸುವ ಜವಾಬ್ದಾರಿಯನ್ನಷ್ಟೇ ನೀಡಲಾಗಿತ್ತು. ಉಳಿದಂತೆ ಆಸ್ತಿಯ ಮೇಲೆ ಯಾವುದೇ ಹಕ್ಕನ್ನೂ ನೀಡಿರಲಿಲ್ಲ.

‘ರಂಗಮ್ಮ 1966ರಲ್ಲಿ ನಿಧನರಾದರು. ಆ ಬಳಿಕ ಕೆಆರ್‌ಇ ಟ್ರಸ್ಟ್‌ ರಚಿಸಿದ್ದ ಪುಟ್ಟಸ್ವಾಮಿ, 96 ಎಕರೆ 35 ಗುಂಟೆ ಜಮೀನನ್ನು ಟ್ರಸ್ಟ್‌ ಸ್ವಾಧೀನಕ್ಕೆ ನೀಡಿದ್ದರು. ರಾಜ್ಯ ಒಕ್ಕಲಿಗರ ಸಂಘದ ಮೂಲಕವೇ ಟ್ರಸ್ಟ್‌ ಕಾರ್ಯನಿರ್ವಹಿಸಬೇಕು ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಟ್ರಸ್ಟ್‌ ಕೆಲಸ ಮಾಡಬೇಕು ಎಂದು ನೋಂದಣಿ ದಾಖಲೆಗಳಲ್ಲಿ ಹೇಳಲಾಗಿತ್ತು.

‘ಭೂಸುಧಾರಣಾ ಕಾಯ್ದೆ ಜಾರಿಯಾದ ಬಳಿಕ ಹಲವರು ಸದರಿ ಜಮೀನಿನ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಭೂ ಸುಧಾರಣೆ ಕಾಯ್ದೆಯಡಿ ಮಂಜೂರಾತಿ ಮತ್ತು ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆಯಿಂದ 51 ಎಕರೆಯಷ್ಟು ಜಮೀನು ಟ್ರಸ್ಟ್‌ನ ಕೈಬಿಟ್ಟು ಹೋಗಿತ್ತು. ಉಳಿದ 45 ಎಕರೆ 33 ಗುಂಟೆ ಜಮೀನು ತಮಗೆ ಸೇರಬೇಕು ಎಂದು ಪುಟ್ಟಸ್ವಾಮಿ ಅವರ ಮಗ ಬಿ.ಪಿ. ಮಹೇಂದ್ರ ಅರ್ಜಿ ಸಲ್ಲಿಸಿದ್ದರು. ಅವರ ಹೆಸರಿಗೆ ಖಾತೆ ವರ್ಗಾಯಿಸುವ ಪ್ರಯತ್ನವೂ ನಡೆದಿತ್ತು.

‘ಈ ಕುರಿತ ವ್ಯಾಜ್ಯದ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಜಮೀನಿನ ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದನ್ನು ಸಿವಿಲ್‌ ನ್ಯಾಯಾಲಯವು ವಿಚಾರಣೆ ನಡೆಸಿ ನಿರ್ಧರಿಸಬೇಕು. ಅಲ್ಲಿಯವರೆಗೂ ರಂಗಮ್ಮ ಹೆಸರಿನಲ್ಲೇ ಖಾತೆ ಮುಂದುವರಿಸಬೇಕು ಎಂಬುದಾಗಿ ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್‌ ಕೂಡ ಅದನ್ನು ಎತ್ತಿ ಹಿಡಿದಿತ್ತು. ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದ್ದರೂ ಮಹೇಂದ್ರ ಮತ್ತು ಜವರಾಯಿಗೌಡ ಜತೆಗೂಡಿ ನಕ್ಷೆ ಅನುಮೋದನೆಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ಟ್ರಸ್ಟ್‌ ಪದಾಧಿಕಾರಿಗಳು ಅರ್ಜಿ ಸಮಿತಿಗೆ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಸರ್ಕಾರದ ಕೆಲವು ಅಧಿಕಾರಿಗಳು ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಮಹೇಂದ್ರ ಮತ್ತು ಇತರರು ಟ್ರಸ್ಟ್‌ ಜಮೀನನ್ನು ಕಬಳಿಸಲು ಯತ್ನಿಸುತ್ತಿದ್ದಾರೆ. ನಕ್ಷೆ ಮಂಜೂರಾತಿ ಮಾಡದಂತೆ ಬಿಡಿಎಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.

ಬಿಡಿಎಗೆ ₹38.20 ಕೋಟಿ ಪಾವತಿ

ಸಜ್ಜೆಪಾಳ್ಯದ ಜಮೀನಿನ ನಕ್ಷೆ ಮಂಜೂರಾತಿ ಸಂಬಂಧ ಬಿ.ಪಿ. ಮಹೇಂದ್ರ ಮತ್ತು ಟಿ.ಎನ್‌. ಜವರಾಯಿಗೌಡ ಜಂಟಿಯಾಗಿ 2023ರ ಡಿಸೆಂಬರ್‌ 26ರಂದು ಬಿಡಿಎಗೆ ₹38.20 ಕೋಟಿ ಪಾವತಿಸಿದ್ದಾರೆ.

‘ಸದರಿ ಜಮೀನು ಹಿಂದೆ ಬಿಡಿಎಗೆ ಭೂಸ್ವಾಧೀನವಾಗಿತ್ತು. ಶೇಕಡ 70:30ರ ಸೂತ್ರದಂತೆ ಜಮೀನನ್ನು ಮಾಲೀಕರಿಗೆ ಹಿಂದಿರುಗಿಸಲಾಗಿತ್ತು. ಬಿಡಿಎ ಪಾಲಿನ ಶೇ 30ರಷ್ಟು ಜಮೀನಿನ ಬಾಬ್ತು ₹38.20 ಕೋಟಿ ಕಟ್ಟಿದ್ದೇವೆ’ ಎಂದು ಜವರಾಯಿಗೌಡ ತಿಳಿಸಿದರು.

‘ಟ್ರಸ್ಟ್‌ ಸ್ವತ್ತು ಕಬಳಿಕೆಗೆ ಯತ್ನ’

‘ಸಜ್ಜೆಪಾಳ್ಯದ 45 ಎಕರೆ 33 ಗುಂಟೆ ಆಸ್ತಿಯು ಕೆಆರ್‌ಇ ಟ್ರಸ್ಟ್‌ ಆಸ್ತಿ. ಪ್ರಭಾವಿಗಳ ಕೈವಾಡದೊಂದಿಗೆ ಅದನ್ನು ಕಬಳಿಸುವ ಪ್ರಯತ್ನ ನಡೆದಿದೆ. ಟ್ರಸ್ಟ್‌ ಆಸ್ತಿಯನ್ನು ಕಬಳಿಸಲು ಅವಕಾಶ ಕೊಡುವುದಿಲ್ಲ. ಬೃಹತ್‌ ಹೋರಾಟಕ್ಕೆ ಸಜ್ಜಾಗುತ್ತಿದ್ದೇವೆ’ ಎಂದು ಕೆಆರ್‌ಇ ಟ್ರಸ್ಟ್‌ ಅಧ್ಯಕ್ಷ ಅಶೋಕ್‌ ಎಚ್‌.ಎನ್‌. ‘ಪ್ರಜಾವಾಣಿ’ಗೆ ತಿಳಿಸಿದರು.

‘ಟ್ರಸ್ಟ್‌ ಆಸ್ತಿಯೇ ಅಲ್ಲ’

‘ಸಜ್ಜೆಪಾಳ್ಯದ ಜಮೀನಿನ ಮೇಲೆ ಕೆಆರ್‌ಇ ಟ್ರಸ್ಟ್‌ಗೆ ಹಕ್ಕು ಇಲ್ಲ. ಆ ಜಮೀನು ಭೂ ಸುಧಾರಣಾ ಕಾಯ್ದೆ ಜಾರಿಯಾದಾಗ ಗೇಣಿದಾರರಿಗೆ ಹೋಗಿತ್ತು. ಅದನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಕಾನೂನಿನ ಪ್ರಕಾರ, ಆಸ್ತಿಯ ಮಾಲೀಕರು ಮತ್ತು ನಾವು ಸೇರಿ ಹಿಂಪಡೆಯುತ್ತಿದ್ದೇವೆ’ ಎಂದು ಟಿ.ಎನ್‌. ಜವರಾಯಿಗೌಡ ಪ್ರತಿಕ್ರಿಯಿಸಿದರು.

‘ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಜಮೀನು ಹಿಂದಿರುಗಿಸುವ ತೀರ್ಮಾನ ಆಗಿತ್ತು. ಈಗ ನಕ್ಷೆ ಅನುಮೋದನೆ ಕೋರಿದ್ದೇವೆ. ನಂತರ ಶುಲ್ಕ ಪಾವತಿಸಬೇಕಿದೆ. ಟ್ರಸ್ಟ್‌ನವರು ಕಾನೂನು ಹೋರಾಟ ನಡೆಸಲಿ. ನಮ್ಮ ತಪ್ಪಿದ್ದರೆ ಕಾನೂನಿಗೆ ತಲೆ ಬಾಗುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT