ಗುರುವಾರ , ಡಿಸೆಂಬರ್ 5, 2019
20 °C
ನೂತನ ಕೈಗಾರಿಕಾ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ

ಮಹಿಳಾ ಉದ್ಯಮಕ್ಕೆ ಆದ್ಯತೆ: ಸಿ.ಎಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನೂತನ ಕೈಗಾರಿಕಾ ನೀತಿ ಸಿದ್ಧಗೊಳಿಸಲಾಗುತ್ತಿದ್ದು, ಮಹಿಳಾ ಉದ್ಯಮಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ಸೇರಿದಂತೆ ವಿವಿಧ ರಿಯಾಯಿತಿ ನೀಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘವು (ಎಫ್‌ಕೆಸಿಸಿಐ) ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಮಹಿಳಾ ಉದ್ಯಮಿಗಳ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. 

‘ನಮ್ಮದು ಕೈಗಾರಿಕಾಸ್ನೇಹಿ ಸರ್ಕಾರವಾಗಿದ್ದು, ಕೈಗಾರಿಕೆಗಳಿಗೆ ಪೂರಕವಾದ 2019–2024ನೇ ಕೈಗಾರಿಕಾ ನೀತಿಯನ್ನು ಸದ್ಯದಲ್ಲಿಯೇ ತರಲಾಗುತ್ತದೆ. ಮಹಿಳಾ ಉದ್ಯಮಿಗಳನ್ನೂ ಮುಂಚೂಣಿಗೆ ತರುವ ನಿಟ್ಟಿನಲ್ಲಿ ಉಚಿತವಾಗಿ ಭೂಮಿ ಸೇರಿದಂತೆ ವಿವಿಧ ಕೊಡುಗೆಗಳನ್ನು ನೀಡುವ ಚಿಂತನೆ ನಡೆದಿದೆ. ಅದೇ ರೀತಿ, ಕಾರ್ಮಿಕರಿಗೆ ಕೌಶಲ ಅಭಿವೃದ್ಧಿ ಸೇರಿದಂತೆ ವಿವಿಧ ಸಲಹೆಗಳು ಬಂದಿದ್ದು, ಪರಿಶೀಲನೆ
ನಡೆಸಲಾಗುತ್ತಿದೆ’ ಎಂದು ತಿಳಿಸಿದರು. 

ಮಹಿಳಾ ಉದ್ಯಮಿಗಳ ಅನುಕೂಲ ಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಹಕಾರ ಸಂಘ ಮತ್ತು ರಾಷ್ಟ್ರೀಯ ಬ್ಯಾಂಕ್‍ಗಳಲ್ಲಿ ಮಹಿಳೆಯರಿಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ದೊರೆಯಲು ಕ್ರಮ ಕೈಗೊಳ್ಳಲಾಗುವುದು.  ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯಮ ಸ್ಥಾಪಿಸಲು ಮುಂದೆ ಬರಬೇಕು’ ಎಂದರು.

ಪ್ರತ್ಯೇಕ ಟೆಕ್‌ ಪಾರ್ಕ್ ನಿರ್ಮಿಸಿ: ಎಫ್‌ಕೆಸಿಸಿಐ ಅಧ್ಯಕ್ಷ ಸಿ.ಆರ್. ಜನಾರ್ದನ, ‘ಜಾಗತಿಕ ಮಟ್ಟದಲ್ಲಿ ಮಹಿಳಾ ಉದ್ದಿಮೆದಾರರಲ್ಲಿ ಅಗ್ರ 50 ನಗರಗಳ ಪಟ್ಟಿಯಲ್ಲಿ ಬೆಂಗಳೂರು 40ನೇ ಸ್ಥಾನದಲ್ಲಿದೆ. ಸುಧಾಮೂರ್ತಿ, ಕಿರಣ್ ಮಜುಂದಾರ್ ಷಾ ಸೇರಿದಂತೆ ಹಲವು ಮಹಿಳಾ ಉದ್ಯಮಿಗಳು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ದೇಶದ ಶೇ 14ರಷ್ಟು ವ್ಯಾಪಾರ ಸಂಸ್ಥೆಗಳು ಮಹಿಳೆಯರಿಂದ ನಡೆಯುತ್ತಿವೆ’ ಎಂದು ಹೇಳಿದರು

‘ಮಹಿಳಾ ಉದ್ದಿಮೆದಾರರ ಯೋಜನಾ ಪ್ರಸ್ತಾವಗಳನ್ನು ತ್ವರಿತವಾಗಿ ನಿರ್ವಹಿಸಲು ಕರ್ನಾಟಕ ಉದ್ಯೋಗ ಮಿತ್ರದಲ್ಲಿ ಪ್ರತ್ಯೇಕ ಕೋಶವನ್ನು ಸ್ಥಾಪಿಸಬೇಕು. ವಿವಿಧ ಭಾಗಗಳ ಮಹಿಳಾ ಉದ್ಯಮಿಗಳಿಗೋಸ್ಕರ ಪ್ರತ್ಯೇಕ ಟೆಕ್‌ ಪಾರ್ಕ್ ನಿರ್ಮಾಣ, ಸರಳ
ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಬೇಕು’ ಎಂದು ಮನವಿ ಮಾಡಿದರು. 

ಎಫ್‌ಕೆಸಿಸಿಐ ಸಿದ್ಧಪಡಿಸಿದ ‘ಕೈಕಾರಿಕಾ ನೀತಿಗಳ ಹೋಲಿಕೆ ಅಧ್ಯಯನ’ ಪುಸ್ತಕವನ್ನು ಬಿಡುಗಡೆ ಮಾಡಿದರು. 

 ₹ 3 ಕೋಟಿ ಅನುದಾನದ ಭರವಸೆ

‘2020ರ ಏಪ್ರಿಲ್ 22ರಿಂದ 26ರವರೆಗೆ ಆಗ್ರೊ ಫುಡ್ ಟೆಕ್‌ ಎಕ್ಸ್‌ಫೋ ಹಮ್ಮಿಕೊಳ್ಳಲಾಗಿದ್ದು, ಕೃಷಿ ಉತ್ಪನ್ನಗಳ ಸಂಸ್ಕರಣೆ ಸೇರಿದಂತೆ ವಿವಿಧ ವಿಷಯಗಳ ಮೇಲೆ ಬೆಳಕು ಹರಿಸಲಾಗುತ್ತದೆ. ಯುವಜನತೆಯನ್ನು ಕೃಷಿಯೆಡೆಗೆ ಸೆಳೆಯುವುದು ಮೂಲ ಉದ್ದೇಶ. ಒಟ್ಟು ₹ 10 ಕೋಟಿ ಖರ್ಚಾಗಲಿದ್ದು, ಸರ್ಕಾರ ₹ 5 ಕೋಟಿ ನೆರವು ನೀಡಬೇಕು’ ಎಂದು ಸಿ.ಆರ್. ಜನಾರ್ದನ ಮನವಿ ಮಾಡಿದರು. 

‘ಎಕ್ಸ್‌ಫೋ ನಡೆಸಲು ಸರ್ಕಾರದಿಂದ ₹ 3 ಕೋಟಿ ನೀಡಲಾಗುವುದು. ಟೆಕ್‌ ಪಾರ್ಕ್ ನಿರ್ಮಾಣ ಸೇರದಿಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು