ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛತೆಗೆ ಹಬ್ಬದ ಸಿಂಗಾರ: ಆರ್‌.ಆರ್. ನಗರದಲ್ಲಿ ಪೌರಕಾರ್ಮಿಕರ ಭಿನ್ನ ಪ್ರಯೋಗ

Last Updated 22 ಜುಲೈ 2022, 19:50 IST
ಅಕ್ಷರ ಗಾತ್ರ

ಬೆಂಗಳೂರು: ’ದಿನವೂ ಕಸವನ್ನು ಜನರ ಮನೆಯ ಬಾಗಿಲಿಗೆ ಹೋಗಿ ಪಡೆ ಯುತ್ತೇವೆ. ಆದರೂ ಕೆಲವರು ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ರಾತ್ರಿ, ಬೆಳಗಿನ ಜಾವ ಹಾಕಿಹೋಗುತ್ತಾರೆ. ಇಂತಹ ಸ್ಥಳಗಳನ್ನು ಸ್ವಚ್ಛ ಮಾಡಿ, ಸಿಂಗಾರ ಮಾಡಿ, ದೇವರ ಫೋಟೊ ಇಟ್ಟು ಕಸ ಹಾಕದಂತೆ ಅರಿವು ಮೂಡಿಸಿ, ಮನವಿ ಮಾಡುತ್ತಿದ್ದೇವೆ...‘

ಬಿಬಿಎಂಪಿ ರಾಜರಾಜೇಶ್ವರಿ ನಗರ ವಾರ್ಡ್‌ನಲ್ಲಿ ಪೌರಕಾರ್ಮಿಕರು ಈ ಮನವಿಯೊಂದಿಗೆ, ರಸ್ತೆಗಳಲ್ಲಿ ಅಂದರೆ ಎಲ್ಲಿ ನಿತ್ಯವೂ ನಾಗರಿಕರು ಕಸ ಹಾಕುತ್ತಾರೋ ಅಲ್ಲಿ (ಬ್ಲ್ಯಾಕ್‌ ಸ್ಪಾಟ್‌) ‘ಹಬ್ಬದ ಸಿಂಗಾರ’ ಮಾಡಿದ್ದಾರೆ.

ರಸ್ತೆ ಬದಿಯನ್ನು ಸ್ವಚ್ಛಗೊಳಿಸಿ, ಬದಿಗೆ ಸುಣ್ಣ ಬಳಿದು, ಸಗಣಿಯಿಂದ ಸಾರಿಸಿದ್ದಾರೆ. ರಂಗೋಲಿ ಹಾಕಿ, ಹಲವು ದೇವರ ಚಿತ್ರಗಳನ್ನು ಇಲ್ಲಿ ಇಟ್ಟಿದ್ದಾರೆ. ಈ ಬ್ಲ್ಯಾಕ್‌ ಸ್ಪಾಟ್‌ನಲ್ಲಿ ಚಪ್ಪಲಿ,
ಶೂ, ಬಾಳೆಕಂದಿನಿಂದ ತೋರಣ ಕಟ್ಟಿದ್ದಾರೆ.

‘ಇಷ್ಟೊಂದು ರೀತಿಯಲ್ಲಿ ಸಿಂಗಾರ ಮಾಡಿದ್ದೇವೆ. ಇನ್ನಾದರೂ ಕಸ ಹಾಕುವುದನ್ನು ನಿಲ್ಲಿಸಲಿ’ ಎಂದು ಪೌರಕಾರ್ಮಿಕರಾದ ರಾಮಕ್ಕ ಹೇಳಿದರು.

‘ಕಸ ತೆಗೆದುಕೊಂಡು ಮನೆ ಬಾಗಿಲಿಗೇ ಬರುತ್ತೇವೆ. ದಯವಿಟ್ಟು ಕಸ ವಿಂಗಡಿಸಿ ನಮಗೆ ನೀಡಿ. ರಸ್ತೆಯಲ್ಲಿ ಸುರಿದು ಹೋದರೆ ಸೊಳ್ಳೆ ಕಾಟವಾಗುತ್ತದೆ. ನಾಯಿಗಳು ಅದನ್ನೆಲ್ಲ ಚಿಂದಿ ಮಾಡಿರುತ್ತವೆ. ಬಳಿಯಲು ನಮಗೆ ಕಷ್ಟವಾಗುತ್ತದೆ‘ ಎನ್ನುತ್ತಾರೆ ಪೌರಕಾರ್ಮಿಕರಾದ ಬೀರಲಿಂಗ, ರಾಮಕೃಷ್ಣ.

‘ರಾಜರಾಜೇಶ್ವರಿ ನಗರ 160ನೇ ವಾರ್ಡ್‌ನಲ್ಲಿ ಕಸ ಎಸೆಯುವ ಬ್ಲ್ಯಾಕ್‌ ಸ್ಪಾಟ್‌ಗಳನ್ನು ನಾವು ಗುರುತಿಸಿದ್ದೇವೆ. ಅಂತಹ ಕಡೆ ಈ ರೀತಿ ಮಾಡಿ ನಾಗರಿಕರಲ್ಲಿ ಅರಿವು ಮೂಡಿಸುತ್ತಿದ್ದೇವೆ. ಕಸ ಸುರಿದರೆ ದಂಡ ಎಂಬುದನ್ನೂ ಹೇಳುತ್ತಿದ್ದೇವೆ. ಸಿಸಿಟಿವಿ ಕ್ಯಾಮೆರಾ ಸಹಾಯದಿಂದ ಯಾರು ಕಸ ಹಾಕುತ್ತಾರೆ ಎಂಬುದನ್ನು ಗುರುತಿಸುವ ಕಾರ್ಯವನ್ನೂ ಮಾಡಲಾಗುತ್ತಿದೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಆರ್.ಆರ್. ನಗರ ವಾರ್ಡ್‌ ಆರೋಗ್ಯ ನಿರೀಕ್ಷಕ ಶರತ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT