ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ್ಟಮ್ಸ್‌ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್‌ಐಆರ್‌

ಜಪ್ತಿ ಮಾಡಿದ್ದ 2.5 ಕೆ.ಜಿ ಚಿನ್ನ ಉಗ್ರಾಣದಿಂದ ನಾಪತ್ತೆ
Last Updated 18 ಅಕ್ಟೋಬರ್ 2020, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13 ಪ್ರಕರಣಗಳಲ್ಲಿ ಕಳ್ಳಸಾಗಣೆ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದ 2.5 ಕೆ.ಜಿ. ಚಿನ್ನ, ಕಸ್ಟಮ್ಸ್‌ ಭದ್ರತಾ ಉಗ್ರಾಣದಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಐವರು ಕಸ್ಟಮ್ಸ್‌ ಅಧಿಕಾರಿಗಳು ಸೇರಿದಂತೆ ಆರು ಮಂದಿಯ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.

2012, 2013 ಮತ್ತು 2014ರ ಅವಧಿಯಲ್ಲಿ ಕೆಐಎಎಲ್‌ನಲ್ಲಿ ವಶಪಡಿಸಿಕೊಂಡ ಚಿನ್ನ ನಾಪತ್ತೆಯಾಗಿರುವ ಕುರಿತು ಕಸ್ಟಮ್ಸ್‌ ಜಾಗೃತ ದಳದ ಮಹಾನಿರ್ದೇಶಕರು ಮಾಹಿತಿ ನೀಡಿದ್ದರು. ನಂತರ ನಡೆದ ಆಂತರಿಕ ವಿಚಾರಣೆಯಲ್ಲಿ 2 ಕೆ.ಜಿ. 594 ಗ್ರಾಂ. ತೂಕದ ಚಿನ್ನಾಭರಣ ನಾಪತ್ತೆಯಾಗಿರುವುದು ದೃಢಪಟ್ಟಿತ್ತು. ಈ ಕುರಿತು ತನಿಖೆ ನಡೆಸುವಂತೆ ಕಸ್ಟಮ್ಸ್‌ ಜಂಟಿ ಆಯುಕ್ತ ಎಂ.ಜೆ. ಚೇತನ್‌ ಸೆ. 23ರಂದು ಸಿಬಿಐ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.

2012ರಿಂದ 2014ರ ಅವಧಿಯಲ್ಲಿ ಕೆಐಎಎಲ್‌ನಲ್ಲಿ ಕರ್ತವ್ಯದಲ್ಲಿದ್ದ ಕಸ್ಟಮ್ಸ್ ಸಹಾಯಕ ಆಯುಕ್ತರಾದ ವಿನೋದ್‌ ಚಿನ್ನಪ್ಪ, ಕೆ. ಕೇಶವ್‌, ಅಧೀಕ್ಷಕರಾದ ಕೆ.ಬಿ. ಲಿಂಗರಾಜು, ಡೀನ್‌ ರೆಕ್ಸ್‌, ಎನ್‌.ಜೆ. ರವಿಶಂಕರ್‌ ಮತ್ತು ಮಲ್ಲೇಶ್ವರ ನಿವಾಸಿ ಎಸ್‌.ಡಿ. ಹಿರೇಮಠ ವಿರುದ್ಧ ಅ. 12ರಂದು ಸಿಬಿಐ ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲಿಸಿದೆ.

‘ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಚಿನ್ನವನ್ನು ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಭದ್ರತಾ ಉಗ್ರಾಣದಲ್ಲಿ ಇರಿಸಬೇಕಿತ್ತು. ಪ್ರತಿ ಪಾಳಿಯಲ್ಲಿರುವ ಅಧಿಕಾರಿಗಳು ತಮ್ಮ ಅವಧಿಯಲ್ಲಿ ವಶಪಡಿಸಿಕೊಂಡ ಚಿನ್ನವನ್ನು ದಾಸ್ತಾನು ಮಾಡಿರುವುದನ್ನು ಖಾತರಿಪಡಿಸಿಕೊಳ್ಳಬೇಕಿತ್ತು. ಈ ಸಂಬಂಧ ಮುಂದಿನ ಪಾಳಿಯ ಮುಖ್ಯಸ್ಥರಿಗೆ ವರದಿ ನೀಡಬೇಕಿತ್ತು. ಈ ಪ್ರಕ್ರಿಯೆಯಲ್ಲಿ ಲೋಪ ಎಸಗಿರುವುದು ಕಂಡುಬಂದಿದೆ’ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಹೇಳಿದೆ.

ಆರೋಪಿತ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲು ಕಸ್ಟಮ್ಸ್‌ ಜಾಗೃತ ದಳ ಆಗಸ್ಟ್‌ನಲ್ಲಿ ಅನುಮತಿ ನೀಡಿತ್ತು. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT