ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿ ಅವಘಡ: ನೆರೆಮನೆ ಕಾಂಪೌಂಡ್‌ಗೆ ಹಾರಿ ಪ್ರಾಣ ಉಳಿಸಿಕೊಂಡರು!

ಅಗ್ನಿ ಅವಘಡ: ಬೆಂಕಿ ನಂದಿಸಲು ಹೋಗಿದ್ದ ಅಗ್ನಿಶಾಮಕ ದಳದ ಮೂವರು ಸಿಬ್ಬಂದಿಗೆ ಗಾಯ
Last Updated 19 ನವೆಂಬರ್ 2021, 9:49 IST
ಅಕ್ಷರ ಗಾತ್ರ

ಬೆಂಗಳೂರು: ಅಗ್ನಿ ಅವಘಡದ ವೇಳೆ ಮನೆಯಲ್ಲಿದ್ದ ಮೂವರು ಚಾವಣಿಗೆ (ಟೆರೇಸ್‌)ಸಂಪರ್ಕ ಕಲ್ಪಿಸುವ ಗೇಟ್‌ನ ಮೂಲಕ ನೆರೆ ಮನೆಯ ಕಾಂಪೌಂಡ್‌ಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ಇಟ್ಟಮಡುವಿನ ಮಂಜುನಾಥನಗರದ ನಿವಾಸಿ ಕಿಶೋರ್‌ ಎಂಬುವರ ಮನೆಯಲ್ಲಿ ಬುಧವಾರ ಮಧ್ಯರಾತ್ರಿ ಅಗ್ನಿ ಅವಘಡ ಸಂಭವಿಸಿತ್ತು. ಮನೆಯ ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ತಗುಲಿ ಅದರಲ್ಲಿದ್ದ ಸಿಲಿಂಡರ್‌ ಸ್ಫೋಟಗೊಂಡಿತ್ತು. ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಕೂಡಲೇ ಅವರು ಟೆರೇಸ್‌ಗೆ ಹೋಗಿ ಅಲ್ಲಿದ್ದ ಗೇಟ್‌ನ ಬೀಗ ಮುರಿದು ಮನೆಯವರನ್ನು ರಕ್ಷಿಸಿದ್ದಾರೆ.

‘ರಾತ್ರಿ 1.30ರ ಸುಮಾರಿಗೆ ಅಕ್ಕಪಕ್ಕದ ಮನೆಯವರೆಲ್ಲಾ ಕಿರುಚಿಕೊಳ್ಳುತ್ತಿರುವ ಶಬ್ದ ಕೇಳಿಸಿತ್ತು. ಎರಡನೇ ಮಹಡಿಯಲ್ಲಿ ಮಗನ ಜೊತೆ ಮಲಗಿದ್ದ ನಾನು ಕಿಟಕಿ ಬಾಗಿಲು ತೆರೆದು ಹೊರಗೆ ನೋಡಿದೆ. ರಸ್ತೆಯಲ್ಲಿ ಸುಮಾರು 200 ಜನ ನಿಂತಿದ್ದರು. ನೆಲ ಮಹಡಿಯಲ್ಲಿ ಬೆಂಕಿ ಬಿದ್ದಿರುವುದಾಗಿ ಅವರು ಕೂಗಿ ಹೇಳಿದರು. ಕೆಳಗೆ ಓಡೋಡಿ ಬಂದು ಬಾಗಿಲು ತೆರೆಯಲು ಪ್ರಯತ್ನಿಸಿದೆ. ಬೆಂಕಿಯ ಶಾಖ ಮುಖಕ್ಕೆ ರಾಚುತ್ತಿತ್ತು. ಕಿಟಕಿಗೆ ಅಳವಡಿಸಿದ್ದ ಕರ್ಟನ್‌ಗಳು ಹಾಗೂ ಮರದ ಬಾಗಿಲಿಗೂ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ನೀಡಿದೆ. ಪೊಲೀಸರೂ ವಿಷಯ ತಿಳಿಸಿದ್ದೆ’ ಎಂದು ಮನೆಯ ಮಾಲೀಕ ಕಿಶೋರ್‌ ತಿಳಿಸಿದ್ದಾರೆ.

‘ಬೆಂಕಿ ಮನೆಯನ್ನೆಲ್ಲಾ ಆವರಿಸುತ್ತಿತ್ತು. ಅದನ್ನು ಕಂಡೊಡನೆಯೇ ಏನು ಮಾಡಬೇಕೆಂದೇ ತೋಚುತ್ತಿರಲಿಲ್ಲ. ಮತ್ತೊಂದು ಕೊಠಡಿಯಲ್ಲಿ ಮಲಗಿದ್ದ ಪತ್ನಿಯನ್ನು ಎಬ್ಬಿಸಿಕೊಂಡು ಮೂವರೂ ಮೆಟ್ಟಿಲುಗಳನ್ನು ಏರಿ ಚಾವಣಿಗೆ ಹೋದೆವು. ಅಕ್ಕಪಕ್ಕದ ಮನೆಯವರು ಅಲ್ಲಿದ್ದ ಗೇಟ್‌ನ ಬೀಗ ಒಡೆದು ನಮ್ಮನ್ನು ರಕ್ಷಿಸಿದರು’ ಎಂದು ಅವರು ಗದ್ಗದಿತರಾದರು.

‘ಕಾಂಪೌಂಡ್‌ ಒಳಗೆ ನಿಲ್ಲಿಸಿದ್ದ ಸ್ವಿಪ್ಟ್‌ ಕಾರು ಹಾಗೂ ಎರಡು ಹೋಂಡಾ ಆ್ಯಕ್ಟಿವಾ ದ್ವಿಚಕ್ರ ವಾಹನಗಳು ಸುಟ್ಟುಹೋಗಿವೆ. ಕೆಳ ಮಹಡಿಯಲ್ಲಿ ಕಚೇರಿ ಮಾಡಿಕೊಂಡಿದ್ದೆ. ಅಲ್ಲಿದ್ದ ಪೀಠೋಪಕರಣಗಳು ಹಾಗೂ ಕೆಲ ದಾಖಲೆಗಳೂ ಸುಟ್ಟು ಕರಕಲಾಗಿವೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT