ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿ ತಯಾರಿಯ ಮಹಾಯಜ್ಞ

ಭಾರತ ಪ್ರಜಾಸತ್ತೆಯ ಹಿಂದಿರುವ ಸವಾಲುಗಳ ಬಿಚ್ಚಿಟ್ಟ ಆರ್ನಿಟ್‌ ಶಾನಿ
Last Updated 9 ನವೆಂಬರ್ 2019, 18:51 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನಲ್ಲೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ದೇಶ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ‘ಒಬ್ಬವ್ಯಕ್ತಿಗೆ ಒಂದು ಮತ’ ತತ್ವದಡಿ ಪ್ರಜೆಗಳಿಗೆ ಮತದಾನದ ಹಕ್ಕು ಕಲ್ಪಿಸಿದ ಕಾಯಕದ ಹಿಂದೆಷ್ಟು ಬವಣೆಗಳಿವೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಆಗ ತಾನೆ ಸ್ವಾತಂತ್ರ್ಯ ಪಡೆದ ಭಾರತದಲ್ಲಿ ಮೊದಲ ಮತದಾರರ ಪಟ್ಟಿತಯಾರಾದ ಬಗೆ ಹೇಗೆ, ಆಗ ನಾಯಕರು ಎದುರಿಸಿರುವ ಸವಾಲುಗಳೇನು, ಅಧಿಕಾರಿಗಳು ಪಟ್ಟ ಬವಣೆಗಳೇನು ಎಂಬ ವಿಚಾರಗಳನ್ನು ಇತಿಹಾಸ ಪುಟಗಳಿಂದ ಹೆಕ್ಕಿ ತೆಗೆದಿರುವ ಲೇಖಕಿ ಆರ್ನಿಟ್‌ಶಾನಿ ಈ ಕುರಿತು ವಿಚಾರಗಳನ್ನು ಹಂಚಿಕೊಂಡರು.

‘17.30 ಕೋಟಿ ಜನರ ಹೆಸರು ಒಳಗೊಂಡ ಭಾರತದ ಮತದಾರರ ಮೊದಲ ಪಟ್ಟಿ ಜಗತ್ತಿನಲ್ಲೇ ಅತಿ ದೊಡ್ಡದು. ಇದನ್ನು ಸಿದ್ಧಪಡಿಸುವುದಂತೂ ಅಸಾಧ್ಯದ ಮಾತಾಗಿತ್ತು. ಒಂದೆಡೆ, ಪಾಕಿಸ್ತಾನದಿಂದ ವಲಸೆ ಬಂದ 1.8 ಕೋಟಿ ನಿರಾಶ್ರಿತರಿಗೆ ಮತದಾನದ ಹಕ್ಕು ಸಿಗುತ್ತದೋ ಇಲ್ಲವೋ ಎಂಬ ಗೊಂದಲ, 552 ಪ್ರಾಂತ್ಯಗಳಲ್ಲಿ ಇದ್ದ ವಿಭಿನ್ನ ವ್ಯವಸ್ಥೆ ಹಾಗೂ ದೇಶದ ಜನರಲ್ಲಿ ಶೇ 85ರಷ್ಟು ಮಂದಿ ಅನಕ್ಷರಸ್ಥರಾಗಿದ್ದುದು ಈ ಸವಾಲನ್ನು ಇನ್ನಷ್ಟು ಕಠಿಣಗೊಳಿಸಿತ್ತು. ಆದರೂ ಅಸಾಧ್ಯ ಎಂದೇ ಭಾವಿಸಿದ್ದ ಸವಾಲನ್ನು ಅಧಿಕಾರಿಗಳು ಸಾಧ್ಯವಾಗಿಸಿದರು’ ಎಂದು ಶಾನಿ ವಿವರಿಸಿದರು.

‘ಮೊದಲು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಬೇಕೋ ಬೇಡವೋ ಎಂಬ ಗೊಂದಲ ಜನರಲ್ಲಿತ್ತು. ಇದರಿಂದ ದೇಶವನ್ನು ಆಳುವವರನ್ನು ಆಯ್ಕೆ ಮಾಡುವ ಅಧಿಕಾರ ಸಿಗುತ್ತದೆ ಎಂದುಅಧಿಕಾರಿಗಳು ಮನವರಿಕೆ ಮಾಡಿಕೊಟ್ಟರು. ಮನೆ ಬಾಗಿಲಿಗೆ ತೆರಳಿ ವಿವರ ಸಂಗ್ರಹಿಸಿದರು. ದುರ್ಗಮ ಪ್ರದೇಶಗಳನ್ನು ತಲುಪಿದರು. ಅಧಿಕಾರಿಗಳ ಪ್ರಯತ್ನದಿಂದಾಗಿ ದೇಶದ ಅಷ್ಟೂ ಜನರಿಗೆ ಸಮಾನತೆ ಸಿಕ್ಕಿತು’ ಎಂದರು.

‘ಆರಂಭದಲ್ಲಿ ಅಧಿಕಾರಿಗಳಿಗೇ ಸಾಕಷ್ಟು ಗೊಂದಲಗಳು ಕಾಡಿದ್ದವು. ಅವುಗಳನ್ನು ಬಗೆಹರಿಸಲು 4 ತಿಂಗಳು ಪತ್ರ ವ್ಯವಹಾರಗಳನ್ನು ನಡೆಸಲಾಗಿದೆ. ಮುಂಬೈನಲ್ಲಿ ಬೀದಿಬದಿಗಳಲ್ಲಿ ನೆಲೆಸಿರುವ ವಿಳಾಸವೇ ಇಲ್ಲದ ಜನರನ್ನು ಪಟ್ಟಿಗೆ ಸೇರಿಸಿಕೊಳ್ಳುವ ಬಗ್ಗೆ ಅಲ್ಲಿನ ಜಿಲ್ಲಾಧಿಕಾರಿ ಚುನಾವಣಾ ಆಯೋಗದ ಸ್ಪಷ್ಟನೆ ಕೇಳಿದ್ದರು. ಕಾಯಕದ ಆಧಾರದಲ್ಲಿ ಅವರನ್ನೂ ಸೇರಿಸಿಕೊಳ್ಳಲಾಯಿತು.’

‘ಸೌರಾಷ್ಟ್ರದಂತಹ ಪ್ರಾಂತ್ಯಗಳು ಪ್ರತ್ಯೇಕ ಮತದಾರರ ಪಟ್ಟಿ ತಯಾರಿಸಲು ಮುಂದಾಗಿದ್ದವು. ಅದಕ್ಕೆ ತಗಲುವ ವೆಚ್ಚವನ್ನು ತಾವೇ ಭರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಭಾರತದ ಮತದಾರರ ಪಟ್ಟಿಯನ್ನೇ ಬಳಸಲು ಒಪ್ಪಿದವು. ಅನೇಕ ಪ್ರಾಂತ್ಯಗಳಲ್ಲಿ ಜಿಲ್ಲಾವಾರು ಆಡಳಿತ ವ್ಯವಸ್ಥೆಯೇ ಇರಲಿಲ್ಲ. ಅಂತಹ ಕಡೆ ಜಿಲ್ಲಾ ಘಟಕಗಳನ್ನು ನಿರ್ದಿಷ್ಟಪಡಿಸುವುದೂ ಸವಾಲಿನ ವಿಷಯವಾಗಿತ್ತು’ ಎಂದು ವಿವರಿಸಿದರು.

‘28 ಲಕ್ಷ ಮಹಿಳೆಯರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಯಿತು. ತಮ್ಮ ಹೆಸರನ್ನು ನೇರವಾಗಿ ಹೇಳಿಕೊಳ್ಳುವ ಬದಲು ಇಂಥವರ ಪತ್ನಿ,ಇಂತಹವರ ಮಗಳು ಎಂದುಅವರು ಬರೆಯಿಸಿದ್ದರು. ಇದನ್ನು ಖಾತರಿಪಡಿಸಿಕೊಳ್ಳಲು ಸಮಯ ಇಲ್ಲದ ಕಾರಣ ಅವರು ಪಟ್ಟಿಯಿಂದ ಹೊರಗುಳಿದರು’ ಎಂದು ತಿಳಿಸಿದರು.

‘ಒಂದೊಂದು ಪತ್ರವೂ ಒಂದೊಂದು ಕತೆ’
‘ದೇಶದ ಮತದಾರರ ಮೊದಲ ಪಟ್ಟಿ ತಯಾರಾದ ಬಗ್ಗೆ ಚುನಾವಣಾ ಆಯೋಗದಲ್ಲಿ ಯಾವುದೇ ದಾಖಲೆಗಳು ಸಿಗಲಿಲ್ಲ. ಅವುಗಳ ಹುಡುಕಾಟದ ವೇಳೆ ಸಿಕ್ಕ ರೋಚಕ ವಿವರಗಳು ಸಿಕ್ಕವು. ಸಂವಿಧಾನ ರಚನಾ ಕರಡು ಸಮಿತಿಯ ಬಳಿಯೂ ಹೆಚ್ಚಿನ ದಾಖಲೆಗಳು ಸಿಗಲಿಲ್ಲ. ಆದರೆ, ಪತ್ರಿಕೆಗಳಲ್ಲಿ ಪ್ರಕಟವಾದ ವಿವರಗಳು ನನ್ನ ನೆರವಿಗೆ ಬಂದವು. ಅಧಿಕಾರಿಗಳ ಪತ್ರ ವ್ಯವಹಾರಗಳು ಸವಾಲುಗಳ ಒಂದೊಂದು ಕತೆ ಹೇಳುತ್ತಿದ್ದವು. ಅವುಗಳೆಲ್ಲವನ್ನೂ ಪೋಣಿಸಿದ್ದರಿಂದ ಮಹಾಕಾವ್ಯದಂತಹ ಈ ಕೃತಿ ರಚಿಸುವುದು ಸಾಧ್ಯವಾಯಿತು’ ಎಂದು ಆರ್ನಿಟ್‌ ಶಾನಿ ಅವರು ಕೃತಿ ರಚನೆಯ ಹಿಂದಿನ ಅನುಭವ ಹಂಚಿಕೊಂಡರು.

ಕೃತಿಗೆ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ
‘ಹೌ ಇಂಡಿಯಾ ಬಿಕೇಮ್‌ ಡೆಮಾಕ್ರೆಟಿಕ್‌– ಸಿಟಿಜನ್‌ಷಿಪ್‌ ಆ್ಯಂಡ್‌ ಮೇಕಿಂಗ್‌ ಆಫ್‌ ದಿ ಯುನಿವರ್ಸಲ್‌ ಫ್ರಾಂಚೈಸ್‌’ ಕೃತಿಗೆ ನ್ಯೂ ಇಂಡಿಯಾ ಫೌಂಡೇಷನ್‌ ನೀಡುವ ₹ 15 ಲಕ್ಷ ನಗದು ಬಹುಮಾನವನ್ನು ಒಳಗೊಂಡ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

**
ವಲಸೆ ಬಂದ 1.8 ಕೋಟಿ ನಿರಾಶ್ರಿತರಿಗೂ ಮತದಾನದ ಹಕ್ಕು ಕೊಟ್ಟ ದೇಶ ನಮ್ಮದು. ಎನ್‌ಆರ್‌ಸಿಯ ಕರಿನೆರಳಿನಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಈ ಕೃತಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ
-ನೀರಜಾ ಗೋಪಾಲ್, ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT