ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ವಾಹನ ಕಂಪಾರ್ಟ್‌ಮೆಂಟ್‌ನಲ್ಲಿ ₹12 ಕೋಟಿ ಮೌಲ್ಯದ ಗಾಂಜಾ!

Published 15 ಜುಲೈ 2023, 17:30 IST
Last Updated 15 ಜುಲೈ 2023, 17:30 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಸಾಗಣೆ ವಾಹನದ ಕಂಪಾರ್ಟ್‌ಮೆಂಟ್‌ ಕೆಳಗೆ ರಹಸ್ಯ ಪೆಟ್ಟಿಗೆ ನಿರ್ಮಿಸಿ ಗಾಂಜಾ ಸಾಗಿಸುತ್ತಿದ್ದ ಜಾಲ ಭೇದಿಸಿರುವ ಸಿಸಿಬಿ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ರಾಜಸ್ಥಾನದ ಚಂದ್ರಬಾನು ಬಿಸ್ನೋಯಿ, ಆಂಧ್ರಪ್ರದೇಶದ ಲಕ್ಷ್ಮಿಮೋಹನ್ ದಾಸ್ ಹಾಗೂ ಸಲ್ಮಾನ್ ಬಂಧಿತರು. ಚಾಮರಾಜಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ₹12 ಕೋಟಿ ಮೌಲ್ಯದ 1,500 ಕೆ.ಜಿ ಗಾಂಜಾ ಹಾಗೂ ಸರಕು ಸಾಗಣೆ ವಾಹನ ಜಪ್ತಿ ಮಾಡಲಾಗಿದೆ’ ಎಂದು ಕಮಿಷನರ್ ಬಿ. ದಯಾನಂದ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಚಾಮರಾಜಪೇಟೆ ಬಳಿ ಆರೋಪಿ ಸಲ್ಮಾನ್, ಗಾಂಜಾ ಮಾರುತ್ತಿದ್ದ. ಈತನನ್ನು ಬಂಧಿಸಿ, ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಎಲ್ಲಿಂದ ಗಾಂಜಾ ತರುತ್ತಿದ್ದ ಎಂಬುದನ್ನು ತಿಳಿಯಲು ತನಿಖೆ ಮುಂದುವರಿಸಲಾಗಿತ್ತು. ವಿಚಾರಣೆ ನಡೆಸಿದಾಗ, ಗಾಂಜಾ ಸಾಗಣೆ ಜಾಲದ ಬಗ್ಗೆ ಬಾಯ್ಬಿಟ್ಟಿದ್ದ’ ಎಂದು ಹೇಳಿದರು.

ಮೂರು ವಾರ ಕಾರ್ಯಾಚರಣೆ: ‘ಆರೋಪಿ ಚಂದ್ರಬಾನು, ಎಂಬಿಎ ವ್ಯಾಸಂಗ ಮಾಡುತ್ತಿದ್ದ. ಇನ್ನೊಬ್ಬ ಆರೋಪಿ ಲಕ್ಷ್ಮಿಮೋಹನ್ ದಾಸ್, ಬಿ.ಎ ಪದವೀಧರ. ಇಬ್ಬರು ಒಟ್ಟಿಗೆ ಸೇರಿ ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡಿನ ಹಲವು ಪೆಡ್ಲರ್‌ಗಳಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದರು’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

‘ಮೂರು ವಾರ ನಿರಂತರವಾಗಿ ಕಾರ್ಯಾಚರಣೆ ನಡೆಸಿ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿತ್ತು. ಇತ್ತೀಚೆಗೆ ವಿಶಾಖಪಟ್ಟಣ ಬಳಿ ವಾಹನ ಸಮೇತವಾಗಿ ಆರೋಪಿಗಳನ್ನು ಸೆರೆ ಹಿಡಿಯಲಾಯಿತು’ ಎಂದು ಹೇಳಿದರು.

ನಕಲಿ ನೋಂದಣಿ ಸಂಖ್ಯೆ ಫಲಕ: ‘ಆಂಧ್ರಪ್ರದೇಶದಲ್ಲಿ ಗಾಂಜಾ ಬೆಳೆಯುತ್ತಿದ್ದವರ ಜೊತೆ ಆರೋಪಿಗಳು ಒಡನಾಟ ಹೊಂದಿದ್ದರು. ಗಾಂಜಾ ಖರೀದಿಸಿ ವಿಶಾಖಪಟ್ಟಣದ ಬಳಿ ಸಂಗ್ರಹಿಸಿಡುತ್ತಿದ್ದ ಆರೋಪಿಗಳು, ಆಯಾ ರಾಜ್ಯಗಳ ಪೆಡ್ಲರ್‌ಗಳ ಬೇಡಿಕೆಗೆ ತಕ್ಕಷ್ಟು ಗಾಂಜಾ ಕಳುಹಿಸುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಫ್ಲಿಪ್‌ಕಾರ್ಟ್ ಬಾಕ್ಸ್‌ಗಳಲ್ಲಿ ಗಾಂಜಾ ತುಂಬುತ್ತಿದ್ದರು. ಸರಕು ಸಾಗಣೆ ವಾಹನದ ಕಂಪಾರ್ಟ್‌ಮೆಂಟ್‌ ಕೆಳಗೆ ನಿರ್ಮಿಸಿರುತ್ತಿದ್ದ ಪೆಟ್ಟಿಗೆಯಲ್ಲಿ ಬಾಕ್ಸ್‌ಗಳನ್ನು ಇರಿಸುತ್ತಿದ್ದರು. ಕಂಪಾರ್ಟ್‌ಮೆಂಟ್‌ ಖಾಲಿ ಇರುವಂತೆ ನೋಡಿಕೊಳ್ಳುತ್ತಿದ್ದರು. ಚೆಕ್‌ಪೋಸ್ಟ್ ಸಿಬ್ಬಂದಿ ಹಾಗೂ ಪೊಲೀಸರಿಗೆ  ಅನುಮಾನ ಬರುತ್ತಿರಲಿಲ್ಲ’ ಎಂದು ಹೇಳಿದರು.

‘ಗಾಂಜಾ ಸಾಗಿಸುತ್ತಿದ್ದ ವಾಹನಕ್ಕೆ ನಕಲಿ ನೋಂದಣಿ ಸಂಖ್ಯೆ ಫಲಕ ಅಳವಡಿಸುತ್ತಿದ್ದರು. ನಗರದಿಂದ ನಗರಕ್ಕೆ ಫಲಕವನ್ನೂ ಬದಲಾಯಿಸಿ, ನಿಗದಿತ ಸ್ಥಳಕ್ಕೆ ಗಾಂಜಾ ತಲುಪಿಸುತ್ತಿದ್ದರು. ಈ ಜಾಲದಲ್ಲಿ ಮತ್ತಷ್ಟು ಆರೋಪಿಗಳು ಭಾಗಿಯಾಗಿರುವ ಮಾಹಿತಿಯಿದ್ದು, ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT