ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಗೇರಿ ಉಪನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೇವಸ್ಥಾನಕ್ಕೆ ಸ್ಥಳಾಂತರ

ಶಿಥಿಲಾವಸ್ಥೆಯಲ್ಲಿ ಕೆಂಗೇರಿ ಉಪನಗರದ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ
Last Updated 25 ಆಗಸ್ಟ್ 2022, 20:40 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಗೇರಿ ಉಪನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಕಾಳಿಕಾಂಬಾ ದೇವಸ್ಥಾನಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಗಿದೆ.

ಗಾಂಧಿನಗರದಲ್ಲಿರುವ ಈ ಕಟ್ಟಡ ಸುಣ್ಣ ಬಣ್ಣ ಕಂಡು ದಶಕಗಳೇ ಕಳೆದಿದ್ದವು. ಮಳೆ ಬಂದರೆ ಮೊದಲ ಅಂತಸ್ತಿನ ಕೊಠಡಿಯ ಚಾವಣಿ ಸೋರುತ್ತಿತ್ತು. ಇದರಿಂದ ಪಾಚಿ ಕಟ್ಟಿಕೊಂಡು ಕೆಳಗಿರುವ ಕೊಠಡಿ ಗಳಿಗೆ ಚಾವಣಿಯ ಸಿಮೆಂಟ್ ಉದುರುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ದೂಳು ಪ್ರತಿಕೂಲ ಪರಿಣಾಮ ಬೀರು ತ್ತಿತ್ತು. ಹಲವು ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿತ್ತು ಎಂದು ಶಾಲಾ ಶಿಕ್ಷಕಿಯೊಬ್ಬರು ಮಾಹಿತಿ ನೀಡಿದರು.

ಪಾಳು ಬಿದ್ದಂತಿರುವ ಶಾಲಾ ಕಟ್ಟಡದಲ್ಲಿ ಗಾಳಿ–ಬೆಳಕಿನ ವ್ಯವಸ್ಥೆ ಇಲ್ಲ. ಆಟದ ಮೈದಾನವೂ ಇಲ್ಲ. 1–5ನೇ ತರಗತಿವರೆಗೆ 62 ಮಕ್ಕಳು ಅಧ್ಯಯನ ಮಾಡುತ್ತಿದ್ದಾರೆ. ಇಬ್ಬರು ಶಿಕ್ಷಕಿಯರು, ಸಹಾಯಕಿ, ಅಡುಗೆ ಸಹಾಯಕಿ ಕಾರ್ಯನಿರ್ವಹಿಸುತ್ತಿದ್ದಾರೆ.

‘1994ರಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಶಾಲೆಯ ಕೆಳ ಮಹಡಿ ಕಾಂಕ್ರೀಟ್ ಚಾವಣಿ ಹೊಂದಿದೆ. ಮೊದಲ ಅಂತಸ್ತಿನ ಮಹಡಿಯ ಎರಡು ಕೊಠಡಿಗಳು ಸಿಮೆಂಟ್‌ ತಗಡಿನ ಶೀಟ್‌ಗಳ ಹೊದಿಕೆ ಹೊಂದಿವೆ. ಅದರಲ್ಲಿ ಬಿರುಕು ಉಂಟಾಗಿದ್ದು, ಮಳೆ ಬಂದರೆ ಕೊಠಡಿಗಳು ಕೆರೆಯಂತಾಗುತ್ತಿವೆ. ಈ ವರ್ಷ ನಿರಂತರ ಸುರಿದ ಮಳೆಗೆ ಕೊಠಡಿಗಳೆಲ್ಲ ಕಮಟು ವಾಸನೆ ಬೀರುತ್ತಿದ್ದವು. ಇದರಿಂದ ಆತಂಕಗೊಂಡ ಕೆಲ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಿಲ್ಲ. ಈಗ ದೇವಸ್ಥಾನದಲ್ಲಿ ಶಾಲೆ ಪ್ರಾರಂಭಿಸಿದ ನಂತರ ಮತ್ತೆ ಮಕ್ಕಳು ಶಾಲೆಗೆ ಬರುತ್ತಿದ್ದಾರೆ’ ಎಂದು ಜಯಪ್ರಕಾಶ ನಾರಾಯಣ ವಿಚಾರ ವೇದಿಕೆ ಅಧ್ಯಕ್ಷ ಶಿವಕುಮಾರ್ ಬಿ.ಎಂ. ವಿವರ ನೀಡಿದರು.

‘ಹತ್ತು ವರ್ಷಗಳಿಂದ ಚಾವಣಿ ಯಿಂದ ನೀರು ಸೋರಿಕೆಯಾಗುತ್ತಿದೆ. ಈ ವರ್ಷ ಸುರಿದ ಭಾರಿ ಮಳೆಯಿಂದಾಗಿ ನೆಲ ಅಂತಸ್ತಿನ ಕೊಠಡಿಗಳಲ್ಲೂ ನೀರು ಸೋರಿಕೆ ಆರಂಭವಾಗಿದೆ. ಇದರಿಂದ ಕೊಠಡಿಗಳು ದರ್ವಾಸನೆ ಬೀರುತ್ತಿವೆ. ಮಕ್ಕಳು ಮತ್ತು ಶಿಕ್ಷಕರಿಗೆ ಸೋಂಕು ತಗುಲಿತ್ತು. ಈ ಕಟ್ಟಡವನ್ನು ಕೆಡವಿ ಹೊಸ ಕೊಠಡಿಗಳು, ಪ್ರಾರ್ಥನಾ ಮಂದಿರ ನಿರ್ಮಿಸುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಮುಖ್ಯ ಶಿಕ್ಷಕಿ ವಸಂತಕುಮಾರಿ ‘ಪ್ರಜಾವಾಣಿ’ ಜತೆ ಮಾಹಿತಿ ಹಂಚಿಕೊಂಡರು.

ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ

ಸರ್ಕಾರಿ ಶಾಲೆಗಳ ಈ ದುಃಸ್ಥಿತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಗಾಳಿ ಬೆಳಕಿಲ್ಲದ ಶಿಥಿಲ ಕಟ್ಟಡದಲ್ಲಿ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಿವಕುಮಾರ್‌ ಬಿ.ಎಂ. ಒತ್ತಾಯಿಸಿದರು.

ಹಳೆಯ ಶಾಲಾ ಕಟ್ಟಡವನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

- ರಾಜಶೇಖರ್.ಎಚ್‌.ಜಿ., ಬೆಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT