ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಜಮೀನು ಪರಭಾರೆ: ಮೂರು ಕಡೆ ಎಸಿಬಿ ದಾಳಿ

Last Updated 30 ಸೆಪ್ಟೆಂಬರ್ 2020, 19:34 IST
ಅಕ್ಷರ ಗಾತ್ರ

ಬೆಂಗಳೂರು: ಯಲಹಂಕ ತಾಲ್ಲೂಕಿನ ಹುಣಸೆಮಾರನಹಳ್ಳಿಯಲ್ಲಿನ ನಾಲ್ಕು ಎಕರೆ ಸರ್ಕಾರಿ ಜಮೀನಿನ ದಾಖಲೆಗಳನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಯ ಹೆಸರಿಗೆ ವರ್ಗಾಯಿಸಿದ ಆರೋಪದ ಮೇಲೆ ಯಲಹಂಕ ತಾಲ್ಲೂಕಿನ ಹಿಂದಿನ ವಿಶೇಷ ತಹಶೀಲ್ದಾರ್‌ ಮತ್ತು ದಾಖಲೆಗಳ ಕೊಠಡಿ ವಿಷಯ ನಿರ್ವಾಹಕನ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪ್ರಕರಣ ದಾಖಲಿಸಿದೆ. ಈ ಸಂಬಂಧ ಮೂರು ಸ್ಥಳಗಳಲ್ಲಿ ಬುಧವಾರ ಶೋಧ ನಡೆಸಿದೆ.

ಹುಣಸೆಮಾರನಹಳ್ಳಿಯ ಸರ್ವೆ ನಂಬರ್‌ 184ರಲ್ಲಿ ಇದ್ದ 4 ಎಕರೆ ಸರ್ಕಾರಿ ಜಮೀನಿನ ಖಾತೆಯನ್ನು ಸುಬ್ಬಮ್ಮ ಎಂಬುವವರ ಹೆಸರಿಗೆ ವರ್ಗಾವಣೆ ಮಾಡಲಾಗಿತ್ತು. ಈ ಕುರಿತು ಎಸಿಬಿಗೆ ದೂರು ಬಂದಿತ್ತು. ಪ್ರಾಥಮಿಕ ತನಿಖೆ ನಡೆಸಿದ್ದ ಎಸಿಬಿ ಅಧಿಕಾರಿಗಳು, ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದು ಯಲಹಂಕದ ಹಿಂದಿನ ವಿಶೇಷ ತಹಶೀಲ್ದಾರ್‌ ಬಿ.ಆರ್‌. ನಾಗರಾಜ್‌ ಮತ್ತು ದಾಖಲೆಗಳ ಕೊಠಡಿಯ ವಿಷಯ ನಿರ್ವಾಹಕ ಮಂಜುನಾಥ್‌ ಅಲಿಯಾಸ್‌ ವಾಲೆ ಮಂಜ ಎಂಬುವವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ವಿಜಯನಗರದಲ್ಲಿರುವ ಬಿ.ಆರ್‌. ನಾಗರಾಜ್‌ ಅವರ ಮನೆ, ಯಲಹಂಕ ಉಪನಗರದ ಸೋಮೇಶ್ವರನಗರದಲ್ಲಿರುವ ಮಂಜುನಾಥ್‌ ಮನೆ ಹಾಗೂ ಯಲಹಂಕ ತಾಲ್ಲೂಕು ಕಚೇರಿಯ ವಿಶೇಷ ತಹಶೀಲ್ದಾರ್‌ ಕಚೇರಿಗಳ ಮೇಲೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳಿಗಾಗಿ ಶೋಧ ನಡೆಸಿದರು. ಎಸಿಬಿ ಬೆಂಗಳೂರು ನಗರ ಎಸ್‌ಪಿ ಕುಲದೀಪ್‌ ಕುಮಾರ್‌ ಆರ್‌. ಜೈನ್‌ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು.

ಬಾಕ್ಸ್

ಕಡತದ ರಾಶಿ ಪತ್ತೆ

ಇಬ್ಬರೂ ಆರೋಪಿಗಳ ಮನೆಗಳಲ್ಲಿ ಬೃಹತ್‌ ಪ್ರಮಾಣದ ಕಡತಗಳು ಪತ್ತೆಯಾಗಿವೆ. ಯಲಹಂಕ ತಾಲ್ಲೂಕಿನಲ್ಲಿ ಸರ್ಕಾರಿ ಜಮೀನು ಮಂಜೂರಾತಿಗೆ ಸಂಬಂಧಿಸಿದ ಕಡತಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಹುಣಸೆಮಾರನಹಳ್ಳಿಯ ಜಮೀನಿಗೆ ಸಂಬಂಧಿಸಿದ ಕಡತಗಳನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT