ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ಕ್ಷೇತ್ರದಲ್ಲಿ ದೇಶ ಸ್ವಾವಲಂಬಿ: ರಾಜ್ಯಪಾಲ ಥಾವರಚಂದ್ ಗೆಹಲೋತ್

ರಾಜೀವ್‌ ಗಾಂಧಿ ಆರೋಗ್ಯ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಮತ
Published 27 ಫೆಬ್ರುವರಿ 2024, 14:46 IST
Last Updated 27 ಫೆಬ್ರುವರಿ 2024, 14:46 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ಕ್ಷೇತ್ರದಲ್ಲಿ ದೇಶವು ಸ್ವಾವಲಂಬನೆ ಸಾಧಿಸಿದ್ದು, ಅತ್ಯುತ್ತಮ ವೈದ್ಯಕೀಯ ತಂತ್ರಜ್ಞಾನ, ತಜ್ಞವೈದ್ಯರು ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಹೊಂದಲಾಗಿದೆ’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ತಿಳಿಸಿದರು. 

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ, ಅವರು ಮಾತನಾಡಿದರು. 

‘ಕೇಂದ್ರ ಮತ್ತು ರಾಜ್ಯ ಸರ್ಕಾರವು ವಿಶ್ವ ಆರೋಗ್ಯ ಸಂಸ್ಥೆಯ ಮಾನದಂಡಗಳ ಪ್ರಕಾರ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡುತ್ತಿವೆ. ದೇಶದ ಹಲವು ರಾಜ್ಯಗಳಲ್ಲಿ ಏಮ್ಸ್ ರೀತಿಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ದೇಶದಲ್ಲಿ ಒಟ್ಟು 706 ವೈದ್ಯಕೀಯ ಕಾಲೇಜುಗಳಿದ್ದು, ಇವುಗಳಲ್ಲಿ ಒಟ್ಟು 1.08 ಲಕ್ಷ ಎಂಬಿಬಿಎಸ್ ಸೀಟುಗಳು ಮತ್ತು 67,802 ಸ್ನಾತಕೋತ್ತರ ಪದವಿ ಸೀಟುಗಳಿವೆ. ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 68 ವೈದ್ಯಕೀಯ ಕಾಲೇಜುಗಳಿವೆ.‌ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳು, 25 ಖಾಸಗಿ ಕಾಲೇಜುಗಳು, 7 ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯಗಳು ಹಾಗೂ 12 ಡೀಮ್ಡ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಒಟ್ಟು 11,595 ಎಂಬಿಬಿಎಸ್ ಸೀಟುಗಳು ಮತ್ತು 6,400ಕ್ಕೂ ಹೆಚ್ಚು ಸ್ನಾತಕೋತ್ತರ ಪದವಿ ಸೀಟುಗಳಿವೆ’ ಎಂದು ಹೇಳಿದರು. 

‘ನವೋದ್ಯಮದಲ್ಲಿಯೂ ದೇಶವು ಜಗತ್ತಿನ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಪ್ರಪಂಚದ ಪ್ರತಿಯೊಂದು ವೇದಿಕೆಯಲ್ಲೂ ಭಾರತದ ಸಾಮರ್ಥ್ಯ ಮತ್ತು ಪ್ರತಿಭೆ ಪ್ರತಿಧ್ವನಿಸುತ್ತಿದೆ. ಕೋವಿಡ್ ಸಾಂಕ್ರಾಮಿಕದ ಬಿಕ್ಕಟ್ಟಿನ ವೇಳೆ ಲಸಿಕೆ ತಯಾರಿಸಿ, ಸ್ವಾವಲಂಬನೆ ಸಾಧಿಸಿದೆ. ಇದರ ಪ್ರಯೋಜನವನ್ನು ಇಡೀ ಜಗತ್ತು ಪಡೆದಿದೆ’ ಎಂದು ತಿಳಿಸಿದರು. 

ಸಮಾಜಮುಖಿ ಕೆಲಸ ಮಾಡಿ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ, ‘ಪದವೀಧರರು ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ದೇಶಕ್ಕೆ ಮಾದರಿಯಾಗಬೇಕು. ನೈತಿಕತೆ ಹಾಗೂ ವೃತ್ತಿಪರತೆಯನ್ನು ಎತ್ತಿಹಿಡಿಯಬೇಕು’ ಎಂದು ಕಿವಿಮಾತು ಹೇಳಿದರು. 

ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ.ಬಿ.ಎನ್. ಗಂಗಾಧರ್, ‘ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ ಸಾವಿರ ಮಂದಿಗೆ ಕನಿಷ್ಠ ಒಬ್ಬ ವೈದ್ಯರಿರಬೇಕು. ದೇಶದಲ್ಲಿ ಸಾವಿರಕ್ಕೆ ಇಬ್ಬರು ವೈದ್ಯರಿದ್ದಾರೆ. ಕಳೆದೊಂದು ದಶಕದಲ್ಲಿ ಎಂಬಿಬಿಎಸ್ ಸೀಟುಗಳ ಸಂಖ್ಯೆ ದುಪ್ಪಟ್ಟಾಗಿದೆ. ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಈ ಅವಧಿಯಲ್ಲಿ ಕೌಶಲ, ನೈತಿಕತೆ ಹಾಗೂ ಸಹಾನುಭೂತಿ ಮುಖ್ಯ’ ಎಂದು ತಿಳಿಸಿದರು. 

ನಾನು ಸದ್ಯ ನರ್ಸ್‌ ಆಗಿ ಕಾರ್ಯನಿರ್ವಹಿಸುತ್ತಿದ್ದು ನರ್ಸಿಂಗ್‌ ವಿಷಯದಲ್ಲಿಯೇ ಸ್ನಾತಕೋತ್ತರ ಪದವಿ ಮಾಡಬೇಕು ಅಂದುಕೊಂಡಿದ್ದೇನೆ. ರೋಗಿಗಳ ಆರೈಕೆಯೇ ನನ್ನ ಪ್ರಥಮ ಆದ್ಯತೆ
ಫೆಲೆಂಟಿನಾ ಜೇಮ್ಸ್‌ 5 ಚಿನ್ನದ ಪದಕ ವಿಜೇತೆ
ಪರಿಶ್ರಮಕ್ಕೆ ಪ್ರತಿಫಲ ದೊರೆತಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ನೀಡಿ ರೋಗಿಗಳ ಸಂಕಷ್ಟಕ್ಕೆ ನೆರವಾಗಬೇಕು ಅಂದುಕೊಂಡಿದ್ದೇನೆ
ಎನ್.ಪ್ರಜ್ಞಾ 4 ಚಿನ್ನದ ಪದಕ ವಿಜೇತೆ

88 ಮಂದಿಗೆ ಚಿನ್ನದ ಪದಕ ಪ್ರದಾನ

ಘಟಿಕೋತ್ಸವದಲ್ಲಿ ಶಿವಮೊಗ್ಗ ಜಿಲ್ಲೆಯ ಡಾ.ಜಿ.ಕೆ. ವೆಂಕಟೇಶ್‌ ಬೀದರ್‌ ಜಿಲ್ಲೆಯ ಪಿ.ಎಂ. ಬಿರಾದಾರ್‌ ಹಾಗೂ ಮಧ್ಯಪ್ರದೇಶದ ಪಿಂಕಿ ಭಾಟಿಯಾ ಅವರಿಗೆ ವಿಶ್ವವಿದ್ಯಾಲಯದ ವತಿಯಿಂದ ನೀಡಲಾದ ‘ಡಾಕ್ಟರ್‌ ಆಫ್‌ ಸೈನ್ಸ್‌’ ಗೌರವ ಡಾಕ್ಟರೇಟ್‌ ಪದವಿಯನ್ನು ಥಾವರಚಂದ್ ಗೆಹಲೋತ್ ಪ್ರದಾನ ಮಾಡಿದರು. 88 ವಿದ್ಯಾರ್ಥಿಗಳಿಗೆ 100 ಚಿನ್ನದ ಪದಕ ಪ್ರದಾನ ಮಾಡಲಾಯಿತು.  

‘ಆನ್‌ಲೈನ್‌ನಲ್ಲಿ ಪರೀಕ್ಷೆ ಪ್ರಯೋಗ’

‘ದೇಶದಲ್ಲಿಯೇ ಮೊದಲ ಬಾರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಆನ್‌ಲೈನ್ ವೇದಿಕೆ ಮೂಲಕ ಮಾಡಲಾಗುತ್ತಿದೆ. ಮುಂದಿನ ಮಾರ್ಚ್‌ನಲ್ಲಿ ಫೆಲೋಶಿಪ್ ಮತ್ತು ಪಿಸಿಯೋಥೆರಪಿ ಕೋರ್ಸ್‌ಗೆ ಅಂದಾಜು ಎರಡು ಸಾವಿರ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ವೇಳೆ ಆನ್‌ಲೈನ್ ವ್ಯವಸ್ಥೆಯಲ್ಲಿ ಕಂಡುಬರುವ ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ವಿವಿ ವ್ಯಾಪ್ತಿಯ 1400 ಕಾಲೇಜುಗಳಲ್ಲಿಯೂ ಆನ್‌ಲೈನ್‌ ಪರೀಕ್ಷೆಗಳನ್ನು ಅಧಿಕೃತವಾಗಿ ಜಾರಿಗೊಳಿಸಲಾಗುವುದು. ಈ ವ್ಯವಸ್ಥೆಯಿಂದ ಹಣ ಉಳಿತಾಯ ಆಗುತ್ತದೆ’ ಎಂದು ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ. ರಮೇಶ್ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT