ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಇಲ್ಲ; ದೋಣಿ ಸಾಗುತ್ತಿಲ್ಲ!

ಮಳೆಗಾಲದಲ್ಲಿ ದುಸ್ತರವಾದ ಖಾರ್ಗೆಜೂಗ ನಿವಾಸಿಗಳ ಬದುಕು
Last Updated 2 ಜೂನ್ 2018, 9:54 IST
ಅಕ್ಷರ ಗಾತ್ರ

ಕಾರವಾರ: ತಾಲ್ಲೂಕಿನ ವೈಲವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ಕಾಳಿನದಿ ನಡುಗಡ್ಡೆ ಖಾರ್ಗೆಜೂಗ. ಪಡಿತರ ಸೇರಿದಂತೆ ಬಹುತೇಕ ಅಗತ್ಯಗಳಿಗಾಗಿ, ಇಲ್ಲಿನ ನಿವಾಸಿಗಳು ಗ್ರಾಮ ಕೇಂದ್ರವಾದ ವೈಲವಾಡವನ್ನೇ ಅವಲಂಬಿಸಿದ್ದಾರೆ. ಅದನ್ನು ಹತ್ತಿರದ ದಾರಿಯಲ್ಲಿ ತಲುಪಲು ಅವರಿಗೆ ಆಸರೆಯಾಗಿ ಇದ್ದದ್ದು ಒಂದೇ ಒಂದು ದೋಣಿ. ಆದರೆ, ಗ್ರಾಮ ಪಂಚಾಯ್ತಿಯು ಆ ದೋಣಿ ಸಂಚಾರವನ್ನೇ ರದ್ದು ಮಾಡಿದೆ. ಇದರಿಂದಾಗಿ ಸ್ಥಳೀಯರಿಗೆ ಈ ಮಳೆಗಾಲದಲ್ಲಿ ವೈಲವಾಡವನ್ನು ಕಂಡುಬರುವುದೇ ದುಸ್ತರವಾಗಲಿದೆ.

ಈ ದ್ವೀಪದಲ್ಲಿ ಸುಮಾರು 500 ಜನರು ವಾಸವಿದ್ದು, 200 ಎಕರೆ ಯಷ್ಟು ಹೊಲಗದ್ದೆ ಇದೆ. ಕಿರಿಯ ಪ್ರಾಥ ಮಿಕ ಶಾಲೆ, ಅಂಗನವಾಡಿಗಳಿವೆ. ಆದರೆ, ಪಡಿತರ ಸಾಮಗ್ರಿ ಪಡೆ ಯಲು, ಅಂಚೆ ಕಚೇರಿ, ಗ್ರಾಮ ಪಂಚಾಯ್ತಿ ಕಚೇರಿಯ ಕೆಲಸಕ್ಕಾಗಿ ಅವರು ಐದು ಕಿ.ಮೀ ದೂರದಲ್ಲಿರುವ ವೈಲವಾಡವನ್ನೇ ಅವಲಂಬಿಸಿದ್ದಾರೆ.

ಈ ನಡುಗಡ್ಡೆಯಲ್ಲಿ ಪ್ರಾಥ ಮಿಕ ಆರೋಗ್ಯ ಕೇಂದ್ರವಾಗಲೀ ದಿನಸಿ ಅಂಗಡಿ ಇಲ್ಲ. ಸುತ್ತಮುತ್ತ ಪೆಟ್ರೋಲ್ ಬಂಕ್‌ ಗಳೂ ಇಲ್ಲ. ಮೂರು ಕಿ.ಮೀ ದೂರದಲ್ಲಿರುವ ಸಿದ್ದರ ಗ್ರಾಮದಲ್ಲಿ ಆರೋಗ್ಯ ಕೇಂದ್ರವಿದ್ದರೂ ಅಲ್ಲಿಗೆ ಹೋಗಲು ಸೂಕ್ತ ರಸ್ತೆ, ವಾಹನಗಳ ವ್ಯವಸ್ಥೆಯಿಲ್ಲ. ಹೀಗಾಗಿ ಐದಾರು ಕಿ.ಮೀ ದೂರದಲ್ಲಿರುವ ಹಳಗಾ ಅಥವಾ ಉಳಗಾಕ್ಕೆ ಹೋಗಬೇಕಿದೆ.

ಸಮೀಪದ ದಾರಿ: ನಡುಗಡ್ಡೆಯ ಮತ್ತೊಂದು ಭಾಗದಿಂದ ಕಾಳಿನದಿ ಯನ್ನು ದಾಟಿ ಬೋಡ್‌ ಜೂಗದ ಮೂಲಕ ಹೋದರೆ ವೈಲವಾಡ ಕೇವಲ 1.5 ಕಿ.ಮೀ. ಆಗುತ್ತದೆ. ಸಮೀಪದ ದಾರಿಯಾಗಿದ್ದರಿಂದ, ಇಲ್ಲಿನ ನಿವಾಸಿಗಳು ಈ ಮಾರ್ಗವನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಆದರೆ, ಇಲ್ಲಿನ ದೋಣಿ ಸಂಚಾರವೇ ರದ್ದಾಗಿರುವುದು ಅವರ ಚಿಂತೆಗೆ ಕಾರಣವಾಗಿದೆ.

ರಸ್ತೆಯಿಲ್ಲ: ಸಿದ್ದರ ಗ್ರಾಮದ ರಸ್ತೆಯಿಂದ ನಡುಗಡ್ಡೆಯ ಅಂಚಿಗೆ 2017ರಲ್ಲಿ ಸೇತುವೆ ನಿರ್ಮಿಸಲಾಗಿದೆ. ಆದರೆ, ಊರಿನ ಒಳಗೆ ಹೋಗಲು ರಸ್ತೆ ಇಲ್ಲ. ಹೀಗಾಗಿ, ಮಳೆಗಾಲದಲ್ಲಿ ವಾಹ ನಗಳನ್ನು ಸೇತುವೆಯ ಬಳಿಯೇ ನಿಲ್ಲಿಸಿ, 2 ಕಿ.ಮೀ ನಡೆದುಕೊಂಡು ಹೋಗಬೇಕು. ಬೇಸಿಗೆಯಲ್ಲಿ ಮಾತ್ರ ಒಣಗಿರುವ ಹೊಲದಲ್ಲಿ ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸಬಹುದು ಎನ್ನುತ್ತಾರೆ ಗ್ರಾಮಸ್ಥ ಎಸ್.ಆರ್.ನಾಯ್ಕ.

‘ಮಳೆಗಾಲದಲ್ಲಿ ನೀರು ತುಂಬಿದ ಹೊಲಗಳಲ್ಲಿ ಬರಿಗೈಯಲ್ಲಿ ನಡೆಯುವುದೇ ಸವಾಲಿನ ಕೆಲಸ. ಅಂಥದ್ದರಲ್ಲಿ ತಲೆಹೊರೆಯಲ್ಲಿ ಸಾಮಗ್ರಿ ಹೇಗೆ ಸಾಗಿಸಲಿ? ದ್ವೀಪಕ್ಕೆ ಮೊದಲಿನಂತೆ ದೋಣಿಯ ಸಂಚಾರ ಅಗತ್ಯ ಇದೆ. ಇದರಿಂದ ಈ ಮಳೆಗಾಲದಲ್ಲಿ ಕನಿಷ್ಠ ಪಡಿತರ ಸಾಮಗ್ರಿಯಾದರೂ ನಮಗೆ ಸಿಗುತ್ತದೆ. ದೊಡ್ಡ ದೋಣಿಯ ಸಂಚಾರ ಶೀಘ್ರವೇ ಆರಂಭವಾಗದಿದ್ದರೆ ಗ್ರಾಮ ಪಂಚಾಯ್ತಿ ಕಚೇರಿಯೂ ದೂರವಾಗು ತ್ತದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಬರೆದ ಪತ್ರಕ್ಕೆ ಉತ್ತರ ಬಂದಿಲ್ಲ’

‘ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯಿಂದ ಅನುಮತಿ ಪಡೆಯದ ಕಾರಣ ದೋಣಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈಗಿದ್ದ ದೋಣಿ ಚಿಕ್ಕದಾಗಿದ್ದು, ದೊಡ್ಡ ದೋಣಿ ನೀಡುವಂತೆ ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಗೆ ಫೆಬ್ರುವರಿಯಲ್ಲೇ ಪತ್ರ ಬರೆಯಲಾಗಿದೆ. ಅಲ್ಲಿಂದ ಉತ್ತರ ಬಂದಿಲ್ಲ’ ಎಂದು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮಧುರಾ ನಾಯ್ಕ ಅಸಹಾಯಕತೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT