ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬದಲಾದ ಜೀವನಶೈಲಿಯಿಂದ ಅನಾರೋಗ್ಯ: ನಿಯಮಿತ ಆರೋಗ್ಯ ತಪಾಸಣೆಗೆ ಸಿದ್ದರಾಮಯ್ಯ ಮನವಿ

Published 6 ಜೂನ್ 2024, 14:39 IST
Last Updated 6 ಜೂನ್ 2024, 14:39 IST
ಅಕ್ಷರ ಗಾತ್ರ

ಬೆಂಗಳೂರು: ‘ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನಾರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ದೈಹಿಕ ಮತ್ತು ಮಾನಸಿಕ ಚಟುವಟಿಕೆಗೆ ಆದ್ಯತೆ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಆರೋಗ್ಯ ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ ಜಂಟಿಯಾಗಿ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗರದಲ್ಲಿ ಗುರುವಾರ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಉದ್ಘಾಟಿಸಿ, ಮಾತನಾಡಿದರು.

‘ಎಲ್ಲ ವರ್ಗಕ್ಕೂ ಆರೋಗ್ಯ ಮತ್ತು ಅಗತ್ಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರವು ಕಾರ್ಯಕ್ರಮಗಳನ್ನು ನಿರಂತರವಾಗಿ ರೂಪಿಸಿ, ಜಾರಿ ಮಾಡುತ್ತಿದೆ. ಕ್ಯಾನ್ಸರ್‌ನಂತಹ ಮಾರಕ ರೋಗವನ್ನೂ ಗುಣಪಡಿಸಲು ಸಾಧ್ಯವಿದೆ. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಲ್ಲಿ ಗಂಭೀರ ಅನಾರೋಗ್ಯ ಸಮಸ್ಯೆ ತಡೆಯಬಹುದು. ಹಿಂದಿನ ಕಾಲದಲ್ಲಿ ಆಹಾರ ಪದ್ಧತಿ ಮತ್ತು ಶ್ರಮಾಧಾರಿತ ಜೀವನ ಶೈಲಿಯಿಂದ ಜನರು ಸದೃಢವಾಗಿದ್ದರು’ ಎಂದು ಹೇಳಿದರು.

ಆಹಾರ ಪದ್ಧತಿ ಬಗ್ಗೆ ಕಾರ್ಯಕ್ರಮ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ನಾವು ಸೇವಿಸುವ ಆಹಾರದ ಮೇಲೆ ಉತ್ತಮ ಆರೋಗ್ಯ ಅವಲಂಬಿತವಾಗಿದೆ. ಆದ್ದರಿಂದ ಶಾಲಾ ಹಂತದಲ್ಲಿಯೇ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸಬೇಕು. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳಿಗಿಂತ ಸಾಂಕ್ರಾಮಿಕವಲ್ಲದ ರೋಗಗಳು ಜನರ ಆರೋಗ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತಿವೆ. ಇದಕ್ಕೆ ನಮ್ಮ ಜೀವನಶೈಲಿ, ನಾವು ಸೇವಿಸುವ ಆಹಾರವೇ ಮುಖ್ಯ ಕಾರಣ’ ಎಂದು ತಿಳಿಸಿದರು. 

‘ಸಮತೋಲಿತ ಆಹಾರ ಸೇವನೆಯು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮಹತ್ವದ್ದಾಗಿದೆ. ಸಮಾಜದಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲು ಇಲಾಖೆಯು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ’ ಎಂದು ಹೇಳಿದರು. 

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.

‘1987ರಲ್ಲಿ ಸಿಗರೇಟ್ ತ್ಯಜಿಸಿದೆ’
‘ಸಹವಾಸ ದೋಷದಿಂದಲೂ ಅನಾರೋಗ್ಯಕ್ಕೆ ಕಾರಣವಾಗುವ ವ್ಯಸನಗಳು ಅಂಟಿಕೊಳ್ಳುತ್ತವೆ. ಹಾಗಾಗಿ ಎಚ್ಚರದಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ನಾನೂ ಮೊದಲು ಸಿಗರೇಟ್ ಸೇದುತ್ತಿದ್ದೆ. ಒಮ್ಮೆ ವಿದೇಶಕ್ಕೆ ಹೋದಾಗ ಸ್ನೇಹಿತರು ಸಿಗರೇಟ್ ಪ್ಯಾಕ್ ತಂದಿದ್ದರು. ನಾನು ಕಡಿಮೆ ಅವಧಿಯಲ್ಲಿ ಹೆಚ್ಚು ಸಿಗರೇಟ್‌ಗಳನ್ನು ಸೇದಿದೆ. ಅವತ್ತೇ ನನಗೆ ಇದರ ದುಷ್ಪರಿಣಾಮದ ಬಗ್ಗೆ ಮನವರಿಕೆ ಆಯಿತು. 1987ರ ಆ.27ರಿಂದ ಸಿಗರೇಟ್ ಸೇದುವುದನ್ನು ಸಂಪೂರ್ಣ ನಿಲ್ಲಿಸಿದೆ’ ಎಂದು ಸಿದ್ದರಾಮಯ್ಯ ಸ್ಮರಿಸಿಕೊಂಡರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT