ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ದೋಷ: ಕನ್ನಡ ಕಲಿಕೆಗೆ ಸಂಕೇತ ಭಾಷೆ- ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ಶಾಲೆಯಲ್ಲಿ

ಗಿರಿನಗರದ ಎಸ್‌ಜಿಎಸ್‌ ವಾಗ್ದೇವಿ ವಾಕ್‌ ಶ್ರವಣ ದೋಷವುಳ್ಳವರ ಶಾಲೆಯಲ್ಲಿ ಅಭಿವೃದ್ಧಿ
Published 13 ಜುಲೈ 2023, 21:02 IST
Last Updated 13 ಜುಲೈ 2023, 21:02 IST
ಅಕ್ಷರ ಗಾತ್ರ

ಬೆಂಗಳೂರು: ಶ್ರವಣ ದೋಷವುಳ್ಳ ಮಕ್ಕಳು ಕನ್ನಡ ವರ್ಣಮಾಲೆಯನ್ನು ಸುಲಭವಾಗಿ ಕಲಿಯುವಂತಾಗಲು ಇಲ್ಲಿನ ಎಸ್‌ಜಿಎಸ್‌ ವಾಗ್ದೇವಿ ಟ್ರಸ್ಟ್ ಸ್ಥಾಪಕಿ ಡಾ.ಶಾಂತಾ ರಾಧಾಕೃಷ್ಣ ಅವರು ಸಂಕೇತ ಭಾಷೆ (ಕ್ಯೂಡ್ ಸ್ಪೀಚ್) ಅಭಿವೃದ್ಧಿಪಡಿಸಿದ್ದಾರೆ. 

ಗಿರಿನಗರದಲ್ಲಿರುವ ಎಸ್‌ಜಿಎಸ್‌ ವಾಗ್ದೇವಿ ವಾಕ್‌ ಶ್ರವಣ ದೋಷವುಳ್ಳವರ ಶಾಲೆಯಲ್ಲಿ ಶ್ರವಣ ದೋಷವುಳ್ಳ ಮಕ್ಕಳಿಗೆ ಈ ಸಂಕೇತ ಭಾಷೆಯ ಮೂಲಕ ಅವರು ಕನ್ನಡ ಕಲಿಸುತ್ತಿದ್ದಾರೆ. ವಾಕ್–ಶ್ರವಣ ತಜ್ಞೆಯಾಗಿರುವ ಅವರು, 48 ವರ್ಷಗಳ ವೃತ್ತಿ ಅನುಭವ ಹೊಂದಿದ್ದಾರೆ. ಅವರು ಕನ್ನಡದಲ್ಲಿ ಮೊದಲ ಬಾರಿ ಸಂಕೇತ ಭಾಷೆ ಅಭಿವೃದ್ಧಿಪಡಿಸಿದ್ದು, ತಮ್ಮ ಶಾಲೆ ಮಕ್ಕಳಿಗೆ ಕಲಿಸುತ್ತಿದ್ದಾರೆ. ಇದು ಆಂಗಿಕ ಭಾಷೆಗಿಂತ ಭಿನ್ನವಾಗಿದೆ. 

ಶ್ರವಣ ದೋಷ ಮಕ್ಕಳಿಗೆ ಸಾಮಾನ್ಯವಾಗಿ ತುಟಿಗಳ ಚಲನೆ, ಆಂಗಿಕ ಭಾಷೆಯ ಮೂಲಕ ಕಲಿಸಲಾಗುತ್ತದೆ. ಈಗಲೂ ಹಲವೆಡೆ ಈ ವಿಧಾನ ಪ್ರಚಲಿತದಲ್ಲಿದೆ. ಆಂಗಿಕ ಭಾಷೆಗಿಂತ ಸಂಕೇತ ಭಾಷೆ ಭಿನ್ನವಾಗಿದೆ. ಆಂಗಿಕ ಭಾಷೆಯಲ್ಲಿ ಕೈ, ಬೆರಳುಗಳ ಚಲನೆ ಮಾತ್ರ ಇರಲಿದ್ದು, ಇದು ಅಮೆರಿಕದಿಂದ ಎರವಲು ಪಡೆದ ವಿಧಾನವಾಗಿದೆ. 

ಸಂಕೇತ ಭಾಷೆ ಅಭಿವೃದ್ಧಿಪಡಿಸಿರುವ ಡಾ.ಶಾಂತಾ ರಾಧಾಕೃಷ್ಣ ಅವರು, ಮೈಸೂರಿನಲ್ಲಿ ಸ್ಪೀಚ್‌ ಆ್ಯಂಡ್ ಹಿಯರಿಂಗ್‌ನಲ್ಲಿ ತರಬೇತಿ ಪಡೆದು, ಅಮೆರಿಕದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಬಳಿಕ ಇಲ್ಲಿಗೆ ಬಂದ ಅವರು, 1996ರಲ್ಲಿ ಎಸ್‌ಜಿಎಸ್‌ ವಾಗ್ದೇವಿ ಟ್ರಸ್ಟ್ ಸ್ಥಾಪಿಸಿ, ಕಿವಿ ಕೇಳಿಸದ ಮಕ್ಕಳ ಶಾಲೆ ಪ್ರಾರಂಭಿಸಿದ್ದರು. ಅಲ್ಲಿ ಎಲ್‌ಕೆಜಿಯಿಂದ 10ನೇ ತರಗತಿವರೆಗೆ ಶಿಕ್ಷಣ ನೀಡಲಾಗುತ್ತಿದ್ದು, ಈಗ 40ಕ್ಕೂ ಅಧಿಕ ಮಕ್ಕಳಿದ್ದಾರೆ. 

ಸುಲಭವಾದ ಕಲಿಕೆ: ‘ಕನ್ನಡ ವರ್ಣ ಮಾಲೆಗೆ ಸಂಬಂಧಿಸಿದಂತೆ 1976ರಲ್ಲಿಯೇ ಸಂಕೇತ ಭಾಷೆಯನ್ನು ಅಭಿವೃದ್ಧಿಪಡಿಸಿದ್ದೆ. ಇದನ್ನು ಸಂಸ್ಥೆಯಲ್ಲಿನ ಮಕ್ಕಳಿಗೆ ಕಲಿಸಲಾಗುತ್ತಿತ್ತು. ಈಗ ಇದನ್ನು ಬಹಿರಂಗಪಡಿಸಿದ್ದೇನೆ. ಇದರಿಂದಾಗಿ ಬೇರೆ ಸಂಸ್ಥೆಗಳಲ್ಲಿನ ಮಕ್ಕಳ ಕಲಿಕೆಗೂ ಸಹಕಾರಿಯಾಗಲಿದೆ. ಇದು ಸಾಂಪ್ರದಾಯಿಕ ಆಂಗಿಕ ಭಾಷೆಗಿಂತ ಭಿನ್ನವಾಗಿದೆ. ಇಲ್ಲಿ ಸಂಕೇತವು ಕೈಗಳ ಚಲನೆ, ಗಂಟಲು ಹಾಗೂ ತುಟಿಯನ್ನು ಕೇಂದ್ರೀಕರಿಸಿರುತ್ತದೆ. ಒತ್ತಕ್ಷರಗಳನ್ನೂ ಇದೇ ರೀತಿ ಹೇಳಿಕೊಡಲಾಗುತ್ತದೆ. ಇದರಿಂದ ಕಲಿಕೆ ಸುಲಭವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆ ಇದನ್ನು ಮುಂದಕ್ಕೆ ಕೊಂಡೊಯ್ಯಬೇಕು’ ಎಂದು ಡಾ. ಶಾಂತಾ ರಾಧಾಕೃಷ್ಣ ತಿಳಿಸಿದರು.

‘ಈ ವಿಧಾನದಿಂದ ಸಾಮಾನ್ಯ ಮಕ್ಕಳಿಗಿಂತ ವೇಗವಾಗಿ ಕಿವುಡು ಮಕ್ಕಳು ಕನ್ನಡ ಕಲಿಯುತ್ತಿದ್ದಾರೆ. 2 ವರ್ಷದಿಂದ 5 ವರ್ಷದೊಳಗಿನ ಮಕ್ಕಳು ಬೇಗ ಕಲಿಯುತ್ತಾರೆ. ಕನ್ನಡ ತಪ್ಪಿಲ್ಲದೆ ಓದಲು, ಬರೆಯಲು ಪ್ರಾರಂಭಿಸಿದ ಬಳಿಕ ಸಂಕೇತ ಭಾಷೆ ನಿಲ್ಲಿಸುತ್ತೇವೆ’ ಎಂದು ಹೇಳಿದರು.

ಶಾಂತಾ ರಾಧಾಕೃಷ್ಣ 
ಶಾಂತಾ ರಾಧಾಕೃಷ್ಣ 

ಹೊರನಾಡಿನ ಪಾಲಕರಿಗೂ ಸಂಕೇತ ಭಾಷೆ ಮೂಲಕವೇ ಕನ್ನಡ ಕಲಿಸಲಾಗುತ್ತದೆ. ಗುಜರಾತ್ ಸೇರಿ ವಿವಿಧ ರಾಜ್ಯಗಳ ಮಕ್ಕಳ ಪಾಲಕರೂ ಈ ವಿಧಾನದಿಂದ ಕನ್ನಡ ಕಲಿತಿದ್ದಾರೆ

। ಡಾ. ಶಾಂತಾ ರಾಧಾಕೃಷ್ಣ  ವಾಕ್–ಶ್ರವಣ ತಜ್ಞೆ

‘ಧ್ವನಿ ಆಧಾರದಲ್ಲಿ ಸಂಕೇತ’ ‘

ಶ್ರವಣ ದೋಷವುಳ್ಳ ಮಕ್ಕಳಿಗೆ ಕನ್ನಡ ಕಲಿಸುವುದು ಕಷ್ಟ. ಕನ್ನಡದ ಸ್ವರಗಳಲ್ಲಿಯೇ ಹೃಸ್ವ ದೀರ್ಘವೆಂಬ ವಿಂಗಡಣೆಯಿದೆ. ಅ ಆ ನಡುವಿನ ವ್ಯತ್ಯಾಸವನ್ನು ತುಟಿಗಳ ಚಲನೆಯಿಂದ ಗುರುತಿಸುವುದು ಮಕ್ಕಳಿಗೆ ಕಷ್ಟವಾಗುತ್ತದೆ. ಆದ್ದರಿಂದ ಅವರು ಸುಲಭವಾಗಿ ಕಲಿಯಲು ಸಂಕೇತ ಅಭಿವೃದ್ಧಿಪಡಿಸಿದ್ದೇನೆ. ಇದರಿಂದಾಗಿ ಮಕ್ಕಳು ಒತ್ತಕ್ಷರಗಳನ್ನೂ ತಪ್ಪಿಲ್ಲದಂತೆ ಬರೆಯುತ್ತಾರೆ. ಧ್ವನಿ ಎಲ್ಲಿ ಹುಟ್ಟುತ್ತದೆ ಎಂಬ ಆಧಾರದಲ್ಲಿ ಈ ಸಂಕೇತಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಆಧರಿಸಿ ಆಂಗ್ಲ ಭಾಷೆಯನ್ನೂ ಸುಲಭವಾಗಿ ಕಲಿಯಲು ಸಾಧ್ಯ’ ಎಂದು ಶಾಂತಾ ರಾಧಾಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT