ಮಂಗಳವಾರ, ಅಕ್ಟೋಬರ್ 15, 2019
22 °C
ರಸ್ತೆ ಮೇಲೆ ಹರಿದ ನೀರಿನಲ್ಲಿ ಹಾವು–ಚೇಳು * ಕೊಚ್ಚಿ ಹೋದ ಕಾರು–ಬೈಕು

ಕೋಡಿ ಬಿದ್ದ ಕೆರೆ– ಕಣ್ಣೀರಾದ ನಿವಾಸಿಗಳು

Published:
Updated:
Prajavani

ರಾಜರಾಜೇಶ್ವರಿನಗರ/ ಪೀಣ್ಯದಾಸರಹಳ್ಳಿ: ಬುಧವಾರ ರಾತ್ರಿ ಸುರಿದ ಭಾರಿ ಮಳೆಗೆ ನಗರದ ದೊಡ್ಡ ಬಿದಿರಕಲ್ಲುಕೆರೆಯ ಏರಿ ಒಡೆದಿದ್ದರಿಂದ ಆಸುಪಾಸಿನ ಬಡಾವಣೆಗಳು ಜಲಾವೃತವಾದವು. ಮನೆಗಳಿಗೆ ರಾತ್ರೋ ರಾತ್ರಿ ನೀರು ನುಗ್ಗಿದ್ದರಿಂದ ಜನ ಸಮಸ್ಯೆ ಎದುರಿಸಿದರು.

ಚಿಕ್ಕಬಿದರಕಲ್ಲಿನ ಭವಾನಿನಗರ, ಅನ್ನಪೂರ್ಣೇಶ್ವರಿನಗರ, ದೊಡ್ಡಮುನೇಶ್ವರ ಬಡಾವಣೆಯಲ್ಲೆಲ್ಲ ನೀರು ತುಂಬಿಕೊಂಡಿದ್ದರಿಂದ ಇಲ್ಲಿನ ನಿವಾಸಿಗಳು ರಾತ್ರಿ ಇಡೀ ಆತಂಕದಲ್ಲಿ ಕಾಲ ಕಳೆಯುವಂತಾಯಿತು. ಮನೆಗಳಲ್ಲಿದ್ದ ದಿನಸಿ ಸಾಮಗ್ರಿಗಳು, ಹಾಸಿಗೆ ಹೊದಿಕೆ ಮತ್ತಿತರ ದಿನಬಳಕೆ ವಸ್ತುಗಳು ನೀರುಪಾಲಾದವು.

ಈ ಕೆರೆಯ ನೀರನ್ನು ಶುದ್ಧೀಕರಣಕ್ಕಾಗಿ ಎಸ್‌ಟಿಪಿಗೆ ಹರಿಸಲು ಜಲಮಂಡಳಿ ಪೈಪ್‌ಲೈನ್ ಅಳವಡಿಸಬೇಕಾಗಿತ್ತು. ಆ ಕೆಲಸ ಇನ್ನೂ ಆಗಿಲ್ಲ. ಅಲ್ಲದೆ, ರಾಜಕಾಲುವೆ ಕೆಲವು ಕಡೆ ಒತ್ತುವರಿಯಾದ ಕಾರಣ, ನೀರು ಈ ಕಾಲುವೆಯಲ್ಲಿ ಹರಿಯದೆ ಜನವಸತಿ ಪ್ರದೇಶದತ್ತ ನುಗ್ಗಿತ್ತು. ಇದರಿಂದಾಗಿ ಕೆಲವು ರಸ್ತೆ ಹಾಗೂ ಮೈದಾನಗಳು ಕೆರೆಗಳಂತಾದವು.

ಕೊಚ್ಚಿಹೋದ ಕಾರು–ಸ್ಕೂಟರ್‌: ಭವಾನಿ ನಗರದ ಬಡಾವಣೆಯಲ್ಲಿ ನಿಲ್ಲಿಸಲಾಗಿದ್ದ ಕಾರು, ಸ್ಕೂಟರ್‌ಗಳು ಮಳೆ ನೀರಿನಲ್ಲಿ ಕೆಲದೂರ ಕೊಚ್ಚಿಕೊಂಡು ಹೋಗಿವೆ. ಬಡಾವಣೆಯಲ್ಲಿನ 500ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ 185ಕ್ಕೂ ಹೆಚ್ಚಿನ ಮನೆಗಳಿಗೆ ಭಾರಿ ಪ್ರಮಾಣದ ಹಾನಿ ಉಂಟಾಗಿದೆ.

ಅಧಿಕಾರಿಗಳ ಪರದಾಟ: ಬುಧವಾರ ಮಧ್ಯರಾತ್ರಿ ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಅಧಿಕಾರಿಗಳು, ಕೆರೆ ನೀರು ಹರಿವಿನ ಮಾರ್ಗ ಬದಲಾಯಿಸುವ ಕಾರ್ಯದಲ್ಲಿ ತೊಡಗಿದರು. ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಸಿ.ಲೋಕೇಶ್‌ ಮತ್ತು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್ ಅವರು ಕಾರು ನೀರಿನಲ್ಲಿ ಸಿಲುಕಿತ್ತು. ಹಾಗಾಗಿ ಅವರು ಟ್ರ್ಯಾಕ್ಟರ್‌ನಲ್ಲಿ ಸ್ಥಳಕ್ಕೆ ಬರುತ್ತಿದ್ದಾಗ,  ಅದು ಕೂಡ ಉರುಳಿ ಬಿದ್ದಿತು. ಜಂಟಿ ಆಯುಕ್ತ ಎಚ್.ಬಾಲಶೇಖರ್ ಭವಾನಿನಗರಕ್ಕೆ ಬರುವ ವೇಳೆ ಅವರ ಕಾರೂ ನೀರಿನ ರಭಸಕ್ಕೆ ಕೆಲದೂರ ಕೊಚ್ಚಿಕೊಂಡು ಹೋಗಿ ಆತಂಕ ಸೃಷ್ಟಿಯಾಯಿತು. ಎಲ್ಲರೂ ಅಪಾಯದಿಂದ ಪಾರಾದರು. 

ಮೇಯರ್‌ ವಿರುದ್ಧ ಆಕ್ರೋಶ

ಮೇಯರ್ ಗೌತಮ್‍ ಕುಮಾರ್ ಬಂದು ಸ್ಥಳದ ಮಾಹಿತಿ ಕೇಳುತ್ತಿದ್ದಂತೆ, ಹರಿಹಾಯ್ದ ಸ್ಥಳೀಯರು, ‘ನಿಮಗೆ ಬೆಂಗಳೂರಿನಲ್ಲಿರುವ ಊರುಗಳ ಬಗ್ಗೆಯೇ ಮಾಹಿತಿ ಇಲ್ಲದ ಮೇಲೆ ಮೇಯರ್‌ ಆಗಿ ಯಾವ ರೀತಿ ಕೆಲಸ ಮಾಡುತ್ತೀರಿ’ ಎಂದು ತರಾಟೆಗೆ ತೆಗೆದುಕೊಂಡರು. 

ಸ್ಥಳ ವೀಕ್ಷಣೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಮೇಯರ್, ‘ದೊಡ್ಡಬಿದರಕಲ್ಲು ಕೆರೆ ಸುತ್ತಮುತ್ತಲಿನ ಸುಮಾರು 185 ಮನೆಗಳಿಗೆ ನೀರು ನುಗ್ಗಿ ತೊಂದರೆಯಾಗಿದೆ. ಸುಮಾರು 20 ಕಾರು, 40ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಹಾಗೂ ಮನೆಯಲ್ಲಿರುವ ಟಿ.ವಿ, ರೆಫ್ರಿಜರೇಟರ್‌, ವಾಷಿಂಗ್ ಮಿಷನ್ ಹಾಗೂ ದಿನಸಿ ಸಾಮಗ್ರಿ ಹಾಳಾಗಿದೆ. ಸ್ಥಳೀಯರ ಅಹವಾಲು ಆಲಿಸಿ, ಕೂಡಲೇ ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.  

‘ಎಂಟು ಜೆಸಿಬಿ ಯಂತ್ರಗಳನ್ನು ಹಾಗೂ ಅಗತ್ಯ ಸಿಬ್ಬಂದಿ ನಿಯೋಜಿಸಿ, ನೀರು ಬೇರೆ ಕಡೆಗೆ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮರಳು ಮೂಟೆಗಳನ್ನು ಅಡ್ಡ ಇಟ್ಟು ತಾತ್ಕಾಲಿಕ ಏರಿ ನಿರ್ಮಾಣ ಮಾಡಲಾಗಿದೆ’ ಎಂದರು. 

ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ಕುಮಾರ್ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ದವಸ–ಧಾನ್ಯ ಹಂಚಿಕೆ: ಸಂತ್ರಸ್ತರಿಗೆ ತಲಾ 2 ಕೆ.ಜಿ ಅಕ್ಕಿ, ತಲಾ 1 ಕೆ.ಜಿ ಎಣ್ಣೆ,  ಬೇಳೆ, ರವೆ, 1/2 ಕೆ.ಜಿ ಸಕ್ಕರೆ ಹಾಗೂ ಉಪ್ಪನ್ನು ಪಾಲಿಕೆ ವೈದ್ಯಾಧಿಕಾರಿಗಳು ಹಂಚಿಕೆ ಮಾಡಿದರು. ಮಧ್ಯಾಹ್ನ 500 ಜನರಿಗೆ ಊಟದ ವ್ಯವಸ್ಥೆ ಮಾಡಲಾಯಿತು.

ಯಶವಂತಪುರ ಕ್ಷೇತ್ರದ ಅನರ್ಹಗೊಂಡ ಶಾಸಕ ಎಸ್.ಟಿ. ಸೋಮಶೇಖರ್‌ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರ ಸಮಸ್ಯೆ ಆಲಿಸಿದರು. ಸ್ಥಳದಲ್ಲಿಯೇ ವೈಯಕ್ತಿಕವಾಗಿ ₹5 ಲಕ್ಷ ಪರಿಹಾರ ನೀಡಿದರು. ಸ್ಥಳೀಯ ಪಾಲಿಕೆ ಸದಸ್ಯ ಎಸ್.ವಾಸುದೇವ್ ಪರಿಹಾರ ಕಾರ್ಯಕ್ಕೆ ನೆರವಾದರು. 

ಎಚ್ಚರವಾಗಿದ್ದಕ್ಕೆ ಜೀವ ಉಳಿಯಿತು! 

‘ನಾನು ನಿದ್ದೆ ಮಾಡುತ್ತಿದ್ದೆ. ದೊಡ್ಡದಾಗಿ ಶಬ್ದವಾಯಿತು. ಎದ್ದು ನೋಡಿದರೆ ಪಕ್ಕದ ಮನೆಯ ಕಾಂಪೌಂಡ್‌ ಕುಸಿದು ಬಿದ್ದಿತ್ತು. ಮಳೆಯ ನೀರು ರಸ್ತೆ ಮಾತ್ರವಲ್ಲದೆ, ಮನೆಯೊಳಗೂ ಹರಿಯುತ್ತಿತ್ತು. ಪಕ್ಕದ ಮನೆಯಲ್ಲಿ ವೃದ್ಧರು, ಮಕ್ಕಳು ಮಲಗಿದ್ದರು. ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಕೂಗಿಕೊಂಡೆ. ಅವರು ಅಪಾಯದಿಂದ ಪಾರಾದರು’ ಎಂದು ಭವಾನಿ ನಗರದ ರಮೇಶ್‌ ವಿವರಿಸಿದರು. 

‘ದಿನಸಿ ಎಲ್ಲ ನೀರುಪಾಲಾಗಿದೆ.ಮಳೆ ನೀರು ಸರಾಗವಾಗಿ ಹರಿಯಲು ಕ್ರಮ ಕೈಗೊಳ್ಳದ ಕಾರಣ ಜಲಮಂಡಳಿ ಮತ್ತು ಬಿಬಿಎಂಪಿಯವರೇ ಇದಕ್ಕೆ ಹೊಣೆ’ ಎಂದು ಭವಾನಿ ನಗರದ ವರಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದರು. 

ರಾಜಕಾಲುವೆ ಒತ್ತುವರಿ: ಎಫ್‌ಐಆರ್ ದಾಖಲು

ಚೊಕ್ಕಸಂದ್ರ ವಾರ್ಡ್‌ 39ರ ವ್ಯಾಪ್ತಿಯ ಬೆಲ್ಮರ ಲೇಔಟ್‌ನಲ್ಲಿ ರಾಜಕಾಲುವೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಿರುವ ಡಿ.ಎಂ. ಸಂತೋಷ್‌ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲು ಆಯುಕ್ತ ಬಿ.ಎಚ್. ಅನಿಲ್‌ಕುಮಾರ್‌ ಅಧಿಕಾರಿಗಳಿಗೆ ಸೂಚಿಸಿದರು.

ನೆಲಗದೆರನಹಳ್ಳಿ ಮುಖ್ಯರಸ್ತೆಯಲ್ಲಿ ರಾಜಕಾಲುವೆ ಪಕ್ಕ ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡವನ್ನು ತೆರವುಗೊಳಿಸಲು ಆಯುಕ್ತರು ಸೂಚನೆ ನೀಡಿದರು.

‘ಸಹಾಯ ಮಾಡಿ... ಸಹಾಯ ಮಾಡಿ...’

ಸತತ ಮೂರು ತಾಸು ಗುಡುಗು ಸಿಡಿಲಿನಿಂದ ಬುಧವಾರ ರಾತ್ರಿ ಅಬ್ಬರಿಸಿದ ಮಳೆಗೆ ಹೆಸರಘಟ್ಟ ಬಳಿಯ ಚಿಕ್ಕಬಾಣಾವರ ಗ್ರಾಮದ ರಾಜಕಾಲುವೆ ತುಂಬಿ ಹರಿಯಿತು.

ರಾಜಕಾಲುವೆ ಪಕ್ಕದ ಮನೆಗಳಿಗೆ ರಾತ್ರಿ ನೀರು ನುಗ್ಗಿದ ಪರಿಣಾಮ, ‘ಸಹಾಯ ಮಾಡಿ..., ಸಹಾಯ ಮಾಡಿ...’ ಎಂದು ಕೂಗಿಕೊಳ್ಳುತ್ತ ಗ್ರಾಮಸ್ಥರು ಹೊರಗೆ ಓಡಿ ಬಂದರು. ಮನೆಯೊಳಗೆ ಮೊಣಕಾಲಿನವರೆಗೆ ಬಂದ ನೀರನ್ನು ಹೊರ ಹಾಕಲು ಕೆಲ ಗ್ರಾಮಸ್ಥರು ಹರಸಾಹಸ ಪಟ್ಟರು.

‘ಗ್ರಾಮದ ಮಾರುತಿ ನಗರದಿಂದ ಸೋಲದೇವನಹಳ್ಳಿ ಗ್ರಾಮದವರೆಗೂ ಸುಮಾರು 8 ಕಿ.ಮೀ. ರಾಜಕಾಲುವೆ ಇದೆ. ಕಾಲುವೆ ಒತ್ತುವರಿಕೊಂಡ ಕೆಲ ಪ್ರಭಾವಿಗಳು ಅನಧಿಕೃತವಾಗಿ ಮನೆಗಳನ್ನು ಕಟ್ಟಿ ಬಾಡಿಗೆ ನೀಡಿದ್ದಾರೆ. ಇದರಿಂದ ನಮಗೆ ತೊಂದರೆಯಾಗಿದೆ’ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು. 

‘ಉತ್ತರ ಕರ್ನಾಟಕದಿಂದ ಕೆಲಸ ಹುಡುಕಿಕೊಂಡು ಬಂದವರು ಕಡಿಮೆ ಬಾಡಿಗೆ ಎಂಬ ಕಾರಣಕ್ಕೆ ರಾಜಕಾಲುವೆ ಪಕ್ಕದ ಶೆಡ್‌ಗಳಲ್ಲಿ ವಾಸಿಸುತ್ತಾರೆ. ಇಂಥ ಸ್ಥಿತಿ ಬಂದಾಗ ಸಮಸ್ಯೆಗೆ ಸಿಲುಕುತ್ತಾರೆ’ ಎಂದು ಗ್ರಾಮದ ಹನುಮಯ್ಯ ಬೇಸರ ವ್ಯಕ್ತಪಡಿಸಿದರು.

***

ಮನೆಯಿಂದ ಹೊರಗಡೆ ಓಡಾಡುವುದಕ್ಕೂ ತೊಂದರೆಯಾಗುತ್ತಿದೆ. ರಸ್ತೆಯ ಮೇಲೆ ಹರಿಯುತ್ತಿರುವ ನೀರಿನಲ್ಲಿ ಹಾವು–ಹುಳುಗಳು ಓಡಾಡುತ್ತಿವೆ
-ಅನಿಲ್‌ಕುಮಾರ್‌, ಜಿನ್ನಾಗರಮ್ಮ ಬಡಾವಣೆ ನಿವಾಸಿ

ರಾಜಕಾಲುವೆಯಲ್ಲಿ ಕಸ, ಮಣ್ಣು ಸೇರಿಕೊಂಡು ಮಳೆ ನೀರು ಸರಾಗವಾಗಿ ಹರಿದು ಹೋಗದ ಪರಿಣಾಮ, ಬಡಾವಣೆಗಳಿಗೆ ನೀರು ನುಗ್ಗಿದೆ
-ಕೆ.ಎನ್. ಕೆಂಪಯ್ಯ, ಜಿನ್ನಾಗರಮ್ಮ ಬಡಾವಣೆ ನಿವಾಸಿ

Post Comments (+)