ಬುಧವಾರ, ಮಾರ್ಚ್ 3, 2021
19 °C
ಹದಗೆಟ್ಟ ರಸ್ತೆಗಳಲ್ಲಿ ವಾಹನ ಸವಾರರ ಪಡಿಪಾಟಲು l ಪಾದಚಾರಿಗಳಿಗೆ ದೂಳಿನ ಸ್ನಾನ

ಹೇರೋಹಳ್ಳಿ ವಾರ್ಡ್‌: ಸಂಚಾರ ಹರೋಹರ!

ವರುಣ್‌ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಳೆ ಬಂದಾಗ ಇಲ್ಲಿನ ರಸ್ತೆಗಳು ಕೆಸರುಗದ್ದೆಗಳಾಗುತ್ತವೆ. ವಾಹನ ಸವಾರರು ಉಸಿರು ಬಿಗಿ ಹಿಡಿದು ಚಾಲನೆ ಮಾಡಬೇಕಾಗಿದೆ. ಹಾಗೆಂದು, ಬಿಸಿಲು ಇದ್ದಾಗ ಸವಾರರು ನಿಟ್ಟುಸಿರು ಬಿಡುವಂತಿಲ್ಲ. ಮಣ್ಣು, ಜಲ್ಲಿಯಿಂದ ಕೂಡಿದ ರಸ್ತೆಗಳಲ್ಲಿ ದೂಳಿನ ರಾಶಿ ಭೇದಿಸಿಕೊಂಡು ಸಾಗಬೇಕಿದೆ.

ಇದು ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೇರೋಹಳ್ಳಿ ವಾರ್ಡ್‌ ಸ್ಥಿತಿ. 110 ಗ್ರಾಮಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಯಡಿಯಲ್ಲಿ, ವಾರ್ಡ್‌ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಒಳಚರಂಡಿ ಸಂಪರ್ಕ ಹಾಗೂ ನೀರು ಪೂರೈಕೆಯ ಕೊಳವೆಗಳನ್ನು ಅಳವಡಿಸುವ ಕಾಮಗಾರಿಗಳು ನಡೆದಿವೆ. ರಸ್ತೆಗಳನ್ನು ಎಲ್ಲೆಂದರೆಲ್ಲಿ ಅಗೆಯಲಾಗಿದೆ. ವಾಹನ ಸವಾರರು ಇಲ್ಲಿ ಸಂಚಾರ ನಡೆಸುವುದೇ ದುಸ್ತರವಾಗಿದೆ. 

ಮಹದೇಶ್ವರ ನಗರ, ಅನ್ನಪೂರ್ಣೇಶ್ವರಿ ಬಡಾವಣೆ, ಮಾರುತಿ ನಗರ, ಜನಪ್ರಿಯ ನಗರ, ಮುದ್ದೇಶ್ವರ ಬಡಾವಣೆ, ಬಿದರಹಳ್ಳಿ, ಅಂಜನಾನಗರ, ಹೇರೋಹಳ್ಳಿ, ಭೈರವೇಶ್ವರನಗರ, ವೆಂಕಟೇಶ್ವರ ಬಡಾವಣೆ, ಭರತ್ ನಗರ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮುಖ್ಯರಸ್ತೆಗಳ ಜತೆಗೆ ಅಡ್ಡ ರಸ್ತೆಗಳನ್ನೂ ಅಗೆಯಲಾಗಿದೆ. ಈಗ ಮ್ಯಾನ್‌ ಹೋಲ್‌ಗೆ ರಿಸಿವಿಂಗ್‌ ಚೇಂಬರ್‌ ಹಾಕಲು ಮತ್ತೆ ರಸ್ತೆ ಅಗೆಯಲಾಗುತ್ತದೆ.

ಅಗೆದಿರುವ ಮುಖ್ಯರಸ್ತೆಗಳಿಗೆ ಅಲ್ಲಲ್ಲಿ ಜಲ್ಲಿ ಹಾಕಿ ಹಾಗೆಯೇ ಬಿಡಲಾಗಿದೆ. ಇನ್ನೊಂದೆಡೆ, ಅಡ್ಡ ರಸ್ತೆಗಳೂ ಹದಗೆಟ್ಟಿವೆ. ಮಳೆ ಬಂದರೆ ನೀರು ರಸ್ತೆಗಳಲ್ಲಿಯೇ ನಿಲ್ಲುತ್ತಿದೆ. ಹೇರೋಹಳ್ಳಿ ಅಂಚೆ ಕಚೇರಿ ಮುಂಭಾಗದ ರಸ್ತೆ
ಯಲ್ಲಿ ಕಾವೇರಿ ನೀರು ಪೂರೈಕೆಯ ಪೈಪ್‌ಲೈನ್‌ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ರಸ್ತೆಯಲ್ಲಿಯೇ ಮಣ್ಣಿನ ರಾಶಿ ಹಾಕಲಾಗಿದೆ. ಮಹದೇಶ್ವರನಗರದ ಮುಖ್ಯರಸ್ತೆಯಲ್ಲಿನ ಅಕ್ಕಪಕ್ಕದ ಅಂಗಡಿಯವರು ದೂಳಿನ ಸ್ನಾನ ಮಾಡಬೇಕಿದೆ.

ಅಭಿವೃದ್ಧಿ ಮರೀಚಿಕೆ: ‘ಪಾಲಿಕೆ ಸದಸ್ಯರಾದ ರಾಜಣ್ಣ ಕ್ಷೇತ್ರದ ಅಭಿವೃದ್ಧಿಗೆ ಆಸಕ್ತಿ ತೋರುತ್ತಿಲ್ಲ. ವಾರ್ಡ್‌ನ ಯಾವುದೇ ರಸ್ತೆ ಸಂಚರಿಸಲು ಯೋಗ್ಯವಾಗಿಲ್ಲ. ಸರಿಯಿದ್ದ ರಸ್ತೆಗಳನ್ನೂ ಒಳಚರಂಡಿ ಸಂಪರ್ಕದ ಹೆಸರಿನಲ್ಲಿ ಅಗೆಯಲಾಗಿದೆ’ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.

‘ನೀರಿನ ಕೊಳವೆ ಅಳವಡಿಸಲು ಎರಡು ತಿಂಗಳಿನಿಂದ ರಸ್ತೆ ಅಗೆದು ಹಾಕಿದ್ದಾರೆ. ಕಾಮಗಾರಿ ಕುಂಟುತ್ತಾ ಸಾಗುತ್ತಿದ್ದು, ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರಿಂದಾಗಿ ನೀರೂ ಇಲ್ಲ, ರಸ್ತೆಯೂ ಇಲ್ಲ. ಮನೆಗಳ ಮುಂದೆ ಮಣ್ಣಿನ ರಾಶಿ ಹಾಕಲಾಗಿದೆ.  ಓಡಾಡುವುದು ಕಷ್ಟವಾಗಿದೆ’ ಎಂದು ಹೇರೋಹಳ್ಳಿಯ ನಿವಾಸಿ ವೆಂಕಟೇಶ್ ತಿಳಿಸಿದರು. 

ಪಾಲಿಕೆ ಸದಸ್ಯ ರಾಜಣ್ಣ ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

**

ಮುಖ್ಯರಸ್ತೆಗೆ ಕೆಲ ದಿನಗಳ ಹಿಂದಷ್ಟೇ ಜಲ್ಲಿ ಹಾಕಿದ್ದು, ಮಳೆ ಬಂದರೆ ಸಂಚರಿಸುವುದು ಸವಾಲಾಗಿದೆ. ಹಲವು ಮಂದಿ ವಾಹನದಿಂದ ಬಿದ್ದು, ಕಾಲು ಮುರಿದುಕೊಂಡಿದ್ದಾರೆ
–ಮಾರುತಿನಗರ ನಿವಾಸಿ

**

ಒಳಚರಂಡಿ ಪೈಪ್‌ಗಳನ್ನು ಒಡೆದಿದ್ದು, ಕಲ್ಲುಗಳನ್ನು ಎಲ್ಲೆಂದರಲ್ಲಿ ಹಾಕಲಾಗಿದೆ. ಇದರಿಂದಾಗಿ ನಾವೇ ತಲಾ ₹ 2 ಸಾವಿರ ಖರ್ಚುಮಾಡಿ ರಸ್ತೆ ಸರಿಮಾಡಿಸಿಕೊಂಡಿದ್ದೇವೆ.
– ಗೋವಿಂದರಾಜು, ವ್ಯಾಪಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು