ಶುಕ್ರವಾರ, ಸೆಪ್ಟೆಂಬರ್ 25, 2020
23 °C

ಮರಣ ಪ್ರಮಾಣಪತ್ರ ಗೊಂದಲ ಪರಿಹರಿಸಿ: ಹೈಕೋರ್ಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈಕೋರ್ಟ್

ಬೆಂಗಳೂರು: ಸಾಂಕ್ರಾಮಿಕ ರೋಗದ ಸಮಯದಲ್ಲಿ ಮರಣ ಪ್ರಮಾಣ ಪತ್ರಗಳ ವಿತರಣೆಯಲ್ಲಿ ಇರುವ ಗೊಂದಲಗಳನ್ನು ಪರಿಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

‘ಮರಣ ಪ್ರಮಾಣ ಪತ್ರದಲ್ಲಿ ಅನಗತ್ಯವಾಗಿ ಕೋವಿಡ್ ಎಂದು ನಮೂದಿಸಬಾರದು. ಆದರೆ, ರಾಜ್ಯ ಸರ್ಕಾರದ ಸುತ್ತೋಲೆಗೆ ವಿರುದ್ಧವಾಗಿ ಬಿಬಿಎಂಪಿ ನಡೆದುಕೊಳ್ಳುತ್ತಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

‘ಕೊರೊನಾ ಸೋಂಕಿನಿಂದ ಸತ್ತವರಿಗೆ ಮಾತ್ರ ಕೋವಿಡ್ ಎಂದು ನಮೂದಿಸಬೇಕು. ರಸ್ತೆ ಅಪಘಾತದಲ್ಲಿ ಸತ್ತವರ ಮರಣೋತ್ತರ ಪರೀಕ್ಷೆ ಬಳಿಕ ಕೋವಿಡ್ ಇರುವುದು ದೃಢಪಟ್ಟರೆ ಮರಣ ಪ್ರಮಾಣ ಪತ್ರದಲ್ಲಿ ಕೋವಿಡ್ ಎಂದು ನಮೂದಿಸಲಾಗುತ್ತಿದೆ. ‌ರಾಜ್ಯ ಸರ್ಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು’ ಎಂದು ತಿಳಿಸಿತು.

ವಿಮಾ ಮೊತ್ತ ಹೆಚ್ಚಿಸಿ: ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಗೆ ಸಮನಾಗಿ ಪೌರಕಾರ್ಮಿಕರ ವಿಮಾ ಮೊತ್ತವನ್ನೂ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತು.

‘ತಜ್ಞರ ಸಮಿತಿ ಕಾರ್ಯ ವಿಧಾನಗಳ ವಿವರ ಒದಗಿಸಿ’

ಕೋವಿಡ್ ಆಸ್ಪತ್ರೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ನೇಮಿಸಿರುವ ತಜ್ಞರ ಸಮಿತಿಯ ಕಾರ್ಯ ವಿಧಾನಗಳ ವಿವರ ಸಲ್ಲಿಸುವಂತೆ ಸಮಿತಿಯ ಸದಸ್ಯ ಕಾರ್ಯದರ್ಶಿಗೆ ಪೀಠ ನಿರ್ದೇಶನ ನೀಡಿತು.

‘ಸೋಂಕಿತರಿಗೆ ಲಭ್ಯ ಇರುವ ಸಾರಿಗೆ ವ್ಯವಸ್ಥೆ, ಆಸ್ಪತ್ರೆ ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ನೈರ್ಮಲ್ಯ ಕಾಪಾಡಲಾಗುತ್ತಿದೆಯೇ, ಗುಣಮಟ್ಟದ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ರಾಜ್ಯ ಮಟ್ಟದ ತಜ್ಞರ ಸಮಿತಿ ಪರಿಶೀಲಿಸಬೇಕಿದೆ. ಅದಕ್ಕಾಗಿಯೇ ಸಮಿತಿಯಲ್ಲಿ ಬೇರೆ ಕ್ಷೇತ್ರಗಳ ಪರಿಣಿತರನ್ನು ನೇಮಿಸಬೇಕು ಎಂದು ಪದೇ ಪದೇ ನಾವು ಹೇಳುತ್ತಿದ್ದೇವೆ’ ಎಂದು ಪೀಠ ಹೇಳಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು