ಬೆಂಗಳೂರು: ‘ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಶಿಫಾರಸು ಮಾಡುವ ಸಮಿತಿಯು ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಈ ಸಂಬಂಧ ರಾಜ್ಯ ಸರ್ಕಾರವು ಸಮಿತಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಹೈಕೋರ್ಟ್ ಆದೇಶಿಸಿದೆ.
ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ 17 ವರ್ಷಗಳಿಂದ ಶಿಕ್ಷೆ ಅನುಭವಿಸುತ್ತಿರುವ ತುಮಕೂರಿನ ಓಂಕಾರ ಮೂರ್ತಿ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದ್ದು; ಅರ್ಜಿದಾರರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡುವಂತೆ ಸಕ್ಷಮ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ್ದ ಕೆ.ಬಿ.ಮೊನೇಶ್ ಕುಮಾರ್, ‘ಜೀವಾವಧಿ ಅಪರಾಧಿಗಳ ಬಿಡುಗಡೆ ಸಮಿತಿ’ ಎರಡು ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಆದರೆ, ಕಳೆದ ಆರು ತಿಂಗಳಿಂದ ಸಮಿತಿಯು ಸಭೆ ನಡೆಸಿಲ್ಲ. ಹೀಗಾಗಿ ಅರ್ಜಿದಾರರ ಮನವಿಪತ್ರವನ್ನು ಸಮಿತಿಯ ಮುಂದಿರಿಸಲು ಸಾಧ್ಯವಾಗಿಲ್ಲ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದಿದ್ದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ನ್ಯಾಯಪೀಠ, ‘ಸಮಿತಿಯು ವಿಳಂಬ ಧೋರಣೆ ಅನುಸರಿಸುತ್ತಿರುವುದು ಸಲ್ಲದು. ಸಮಿತಿಯು, 2023ರ ಏಪ್ರಿಲ್ 10ರೊಳಗೆ ಸಭೆ ನಡೆಸಬೇಕು. ಅರ್ಜಿದಾರರ ಮನವಿ ಪತ್ರ ಮತ್ತು ಕ್ಷಮದಾನದ ಮೇಲೆ ಬಿಡುಗಡೆಗೆ ಕೋರಿದ ಅರ್ಜಿಗಳನ್ನು ಪರಿಗಣಿಸಬೇಕು’ ಎಂದು ನಿರ್ದೇಶಿಸಿದೆ.
‘ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸಮಿತಿ ಎರಡು ತಿಂಗಳಿಗೆ ಒಂದು ಮತ್ತು ವರ್ಷಕ್ಕೆ ಆರು ಬಾರಿ ಸಭೆ ನಡೆಸಬೇಕು. ಈ ಕುರಿತು ರಾಜ್ಯ ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕು‘ ಎಂದು ಸೂಚಿಸಿ ಅರ್ಜಿ ವಿಲೇವಾರಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.