ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಜಪ್ತಿಯು ಬಾಕಿ ಹಣ ನಿರಾಕರಣೆಗೆ ಕಾರಣವಲ್ಲ: ಹೈಕೋರ್ಟ್

Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ತನಿಖಾ ಸಂಸ್ಥೆಗಳು ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದೆ ಎಂಬ ಕಾರಣಕ್ಕೆ ಬಿಬಿಎಂಪಿ ಸಿವಿಲ್ ಗುತ್ತಿಗೆದಾರರಿಗೆ ಬಾಕಿ ಇರುವ ಹಣ ಪಾವತಿ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಆದೇಶ ನೀಡಿದೆ.

ಸಿವಿಲ್ ಗುತ್ತಿಗೆದಾರರಾದ ಮೆಸರ್ಸ್ ಒಎಂ ಎಸ್‌ಎಲ್‌ವಿ ಕನ್‌ಸ್ಟ್ರಕ್ಷನ್‌ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು ಪಡೆಯುವಂತೆ, ಇಲಾಖಾ ಮುಖ್ಯಸ್ಥರು ಅಥವಾ ಬಿಬಿಎಂಪಿ ಮುಖ್ಯಸ್ಥರು ಕೂಡ ವಿಚಾರಣಾ ನ್ಯಾಯಾಲಯದಿಂದ ದಾಖಲೆಯ ಪ್ರತಿಗಳನ್ನು ಪಡೆದುಕೊಳ್ಳಬಹುದು. ಈ ಪ್ರಕರಣದಲ್ಲಿ ಅರ್ಜಿದಾರರು ಆರೋಪಿಯಾಗಿದ್ದು, ಅವರೂ ದಾಖಲೆ ಕೋರಿ ಅರ್ಜಿ ಸಲ್ಲಿಸಬಹುದು. ಆ ರೀತಿ ಅರ್ಜಿ ಸಲ್ಲಿಸುವ ಬದಲು ಪಾಲಿಕೆ ಮತ್ತು ಅರ್ಜಿದಾರರಿಬ್ಬರೂ ಸಹ ಒಬ್ಬರ ಮೇಲೆ ಒಬ್ಬರು ದೂಷಿಸಿಕೊಂಡು, ಕಾಮಗಾರಿ ಬಿಲ್‌ಗಳ ಪ್ರತಿಗಳನ್ನು ಪಡೆದುಕೊಂಡಿಲ್ಲ. ಹಾಗಾಗಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ’’ ಎಂದು ಹೇಳಿದೆ.

‘ಒಮ್ಮೆ ಕಾಮಗಾರಿ ಪೂರ್ಣಗೊಂಡರೆ, ಅದರ ಬಿಲ್‌ಗಳನ್ನು ಪಾವತಿಸಲು ಅಗತ್ಯ ಪ್ರಕ್ರಿಯೆಗಳನ್ನು ಪಾಲಿಕೆ ಕೈಗೊಳ್ಳಬೇಕಾಗುತ್ತದೆ, ಏಕೆಂದರೆ ಪಾಲಿಕೆಯೇ ದಾಖಲೆಗಳ ಮೂಲ ವಾರಸುದಾರ. ಅದೇ ನನ್ನ ಬಳಿ ದಾಖಲೆ ಇಲ್ಲ ಎಂದು ನೆಪ ಹೇಳಲಾಗದು. ಒಂದು ವೇಳೆ ದಾಖಲೆಯ ಪ್ರತಿ ಇಲ್ಲದಿದ್ದರೂ ಅದು ಸಂಬಂಧಿಸಿದ ಲೋಕಾಯುಕ್ತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ, ಪ್ರಮಾಣೀಕೃತ ಪ್ರತಿಯನ್ನು ಪಡೆದುಕೊಳ್ಳಬಹುದು’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. 

ತನಿಖಾ ಸಂಸ್ಥೆ ಜಪ್ತಿ ಮಾಡಿರುವ ದಾಖಲೆಗಳನ್ನು ಪಡೆದುಕೊಳ್ಳುವ ಗೋಜಿಗೆ ಹೋಗದೆ, ಅರ್ಜಿದಾರರು ಸಲ್ಲಿಸಿದ್ದ ಬಿಲ್ ಪಾವತಿಗೆ ಪ್ರಕ್ರಿಯೆ ನಡೆಸದ ಪಾಲಿಕೆ ಕ್ರಮ ಸರಿಯಲ್ಲ ಎಂದೂ ನ್ಯಾಯಪೀಠ ಹೇಳಿದೆ.

ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಅದನ್ನು ಪರಿಗಣಿಸಿ ಪಾಲಿಕೆ ಬಿಲ್ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸಿವಿಲ್ ಗುತ್ತಿಗೆದಾರರಾದ ಅರ್ಜಿದಾರರು ಪಾಲಿಕೆಗೆ 2006ರಲ್ಲಿ ಕಸ ತುಂಬಿಕೊಂಡು ಹೋಗುವ 131 ತಳ್ಳುವ ಗಾಡಿಗಳು, ಎರಡು ಕಾಂಪ್ಯಾಕ್ಟ್‌ ಮತ್ತು ಘನ ತ್ಯಾಜ್ಯ ವಿಲೇವಾರಿಗೆ 9 ಆಟೊಗಳನ್ನು ಪೂರೈಕೆ ಮಾಡಿದ್ದರು. ಆನಂತರ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲಾಗಿದೆ ಎಂದು ಬಿಲ್ ಪಾವತಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಆಟೊಗಳನ್ನು ಸರಿಯಾಗಿ ಪೂರೈಕೆ ಮಾಡಿಲ್ಲ ಎಂದು ಎಂಜಿನಿಯರ್ ತಗಾದೆ ತೆಗೆದು, ಗುತ್ತಿಗೆಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆಗ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.

ಟೆಂಡರ್‌ನಲ್ಲಿ ಅಕ್ರಮ ಕಂಡು ಬಂದಿದ್ದರಿಂದ ನ್ಯಾಯಾಲಯವು ಎಸಿಬಿ ತನಿಖೆಗೆ ಆದೇಶ ನೀಡಿತ್ತು. ತನಿಖೆ ಇನ್ನೂ ಬಾಕಿ ಇರುವಾಗಲೇ ಅರ್ಜಿದಾರರು ಹಣ ಪಾವತಿಸುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಕಾಮಗಾರಿಯ ಬಿಲ್ ಸೇರಿದಂತೆ ಎಲ್ಲ ದಾಖಲೆಗಳು ತನಿಖಾ ಸಂಸ್ಥೆ ಬಳಿ ಇರುವುದರಿಂದ ಹಣ ಪಾವತಿಸಲಾಗದು ಎಂದು ಪಾಲಿಕೆ ಹೇಳಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಮತ್ತೆ ಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT