ಭಾನುವಾರ, ನವೆಂಬರ್ 17, 2019
25 °C

ಸೈನಿಕ ಸ್ಮಾರಕ ಏಕಶಿಲಾ ವೀರಗಲ್ಲು ಯಥಾಸ್ಥಿತಿ ಕಾಪಾಡಲು ಆದೇಶ

Published:
Updated:

ಬೆಂಗಳೂರು: ‘ಇಂದಿರಾಗಾಂಧಿ ಸಂಗೀತ ಕಾರಂಜಿ ಪಾರ್ಕ್‌ನ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಏಕಶಿಲಾ ವೀರಗಲ್ಲು ಸ್ಥಾಪನೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂದು ಹೈಕೋರ್ಟ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಆದೇಶಿಸಿದೆ.

ಈ ಕುರಿತಂತೆ ರಾಮನಗರ ಜಿಲ್ಲೆ ಬಿಡದಿಯ ಶಿಲ್ಪಿ ಅಶೋಕ ಗುಡಿಗಾರ ಅವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು. ‘ಸೋಮವಾರ 5.10ಕ್ಕೆ ವೀರಗಲ್ಲು ಪ್ರತಿಷ್ಠಾಪನೆ ಕೆಲಸ ಯಾವ ಸ್ಥಿತಿಯಲ್ಲಿದೆಯೊ ಅದೇ ಸ್ಥಿತಿ ಕಾಪಾಡಿಕೊಂಡು ಹೋಗಬೇಕು’ ಎಂದು ನಿರ್ದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ‘ಟೆಂಡರ್ ಒಪ್ಪಂದದಂತೆ ಅರ್ಜಿದಾರರಿಗೆ ಬಿಡಿಎ ಹಣ ಪಾವತಿ ಮಾಡಿಲ್ಲ. ಅಂತೆಯೇ ವೀರಗಲ್ಲು ಕೆತ್ತನೆ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಆಗಲೇ ಕಲ್ಲನ್ನು ನಿಲ್ಲಿಸಲು ಬಿಡಿಎ ಮುಂದಾಗಿದೆ. ವೀರಗಲ್ಲು 80 ಅಡಿ ಎತ್ತರವಿದೆ. ಅದನ್ನು ನಿಲ್ಲಿಸಿದರೆ ಬಾಕಿಯಿರುವ ಕೆತ್ತನೆ ಕಾರ್ಯ ಪೂರ್ಣಗೊಳಿಸಲು ಸಾಧ್ಯವಿಲ್ಲ’ ಎಂದು ದೂರಿದರು.

ಇದಕ್ಕೆ ಬಿಡಿಎ ಪರ ವಕೀಲ ಕೆ.ಕೃಷ್ಣ ಉತ್ತರಿಸಿ, ‘ಟೆಂಡರ್ ಪ್ರಕಾರ ಅರ್ಜಿದಾರರಿಗೆ ಹಣ ಪಾವತಿಸಲಾಗಿದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಯಾಕ್ರೀ ನಿಮಗೆ ಅಷ್ಟೊಂದು ಅರ್ಜೆಂಟ್‌, ನಿಮ್ಮ ರಾಜಕಾರಣಿಗ
ಳಿಗೆ ಹೆಸರು ಕೆತ್ತಿಸಿಕೊಳ್ಳುವ ಉಮೇದು ಅಲ್ಲವೇ, ಅದಕ್ಕೇ ಆದಷ್ಟು ಬೇಗ ಆ ಕಲ್ಲನ್ನು ನಿಲ್ಲಿಸುತ್ತಿದ್ದೀರಿ’ ಎಂದು ಕಿಡಿ ಕಾರಿದರು.

‘ಅದೇನೂ ಸಾಮಾನ್ಯ ಕಲ್ಲು ಅಲ್ಲ. ದೇಶಕ್ಕಾಗಿ ರಕ್ತ ಕೊಟ್ಟವರು, ಬಲಿದಾನ ಮಾಡಿದವರ ಸ್ಮರಣೆಗೆ ನಿಲ್ಲಿಸುವ ಕಲ್ಲು ಅದು. ನಿಮಗೆಲ್ಲಾ ಇತಿಹಾಸವೇ ಗೊತ್ತಿಲ್ಲ. ಇದು ನೀವು ವೀರಗಲ್ಲಿಗೆ ಮಾಡುತ್ತಿರುವ ಅವಮಾನ. ಇದೊಂದು ದುರದೃಷ್ಟಕರ ಸಂಗತಿ’ ಎಂದು ಮೌಖಿಕವಾಗಿ ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆ ಮುಂದೂಡಿದರು.

‘ನಗರದ ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ 77 ಅಡಿ, 9 ಇಂಚು ಎತ್ತರದ ಏಕಶಿಲಾ ವೀರಗಲ್ಲು ಸ್ಥಾಪಿಸುವ ಹಿನ್ನೆಲೆಯಲ್ಲಿ ₹ 94 ಲಕ್ಷ ವೆಚ್ಚದಲ್ಲಿ ಅದರ ಕೆತ್ತನೆ ಹಾಗೂ ಸ್ಥಾಪನೆ ಕಾಮಗಾರಿಯನ್ನು ನನಗೆ ನೀಡಿ 2011ರ ಮೇ 4ರಂದು ಕಾರ್ಯಾದೇಶ ನೀಡಲಾಗಿತ್ತು. ಆದರೆ, ನಂತರ ಬಿಡಿಎ ನೀಡಿದ ನಿದೇಶನಗಳ ಅನುಸಾರ ವೀರಗಲ್ಲು ಎತ್ತರ ಹೆಚ್ಚಿಸಲಾಗಿದೆ. ಅದಕ್ಕಾಗಿ ಹೆಚ್ಚುವರಿ ಹಣ ಖರ್ಚಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.

ಪ್ರತಿಕ್ರಿಯಿಸಿ (+)