ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಲಿಗ್ರಾಮ್ ಆ್ಯಪ್ ಮೂಲಕ ಹನಿಟ್ರ್ಯಾಪ್‌: ಮೂವರ ಬಂಧನ

Published 2 ಆಗಸ್ಟ್ 2023, 0:17 IST
Last Updated 2 ಆಗಸ್ಟ್ 2023, 0:17 IST
ಅಕ್ಷರ ಗಾತ್ರ

ಬೆಂಗಳೂರು: ಟೆಲಿಗ್ರಾಮ್ ಆ್ಯಪ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಅಬ್ದುಲ್‌ ಖಾದರ್, ಯಾಸಿನ್ ಹಾಗೂ ಶರಣ ಪ್ರಕಾಶ್ ಬಂಧಿತರು. ಇವರ ಜೊತೆ ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ಇಬ್ಬರು ಯುವತಿಯರು ತಲೆಮರೆಸಿಕೊಂಡಿದ್ದಾರೆ. ಅವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಆ್ಯಪ್‌ ಮೂಲಕ ಸಂಪರ್ಕ: ‘ಇಬ್ಬರು ಯುವತಿಯರು, ಟೆಲಿಗ್ರಾಂ ಆ್ಯಪ್‌ ಮೂಲಕ ಯುವಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ನಂತರ, ಸಲುಗೆಯಿಂದ ಮಾತನಾಡುತ್ತಿದ್ದರು. ದಿನ ಕಳೆದಂತೆ ಯುವಕರು, ಯುವತಿಯರನ್ನು ಹೆಚ್ಚು ನಂಬುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಮನೆಯಲ್ಲಿ ಯಾರು ಇಲ್ಲ. ಬಾ’ ಎಂದು ಹೇಳುತ್ತಿದ್ದ ಯುವತಿಯರು, ಯುವಕರಿಗೆ ಲೈಂಗಿಕ ಆಸೆ ತೋರಿಸಿ ಪ್ರಚೋದಿಸುತ್ತಿದ್ದರು. ನಂತರ, ಜೆ.ಪಿ. ನಗರ ಬಳಿಯ ವಿನಾಯಕ್‌ ನಗರದಲ್ಲಿರುವ ತಮ್ಮ ಮನೆಗೆ ಯುವಕರನ್ನು ಕರೆಸಿಕೊಳ್ಳುತ್ತಿದ್ದರು’ ಎಂದು ಹೇಳಿದರು.

ದಾಳಿ ಮಾಡಿ, ಸುಲಿಗೆ: ‘ಯುವಕರು ಮನೆಗೆ ಬರುತ್ತಿದ್ದಂತೆ ಸ್ವಾಗತಿಸುತ್ತಿದ್ದ ಯುವತಿಯರು, ಕೊಠಡಿಗೆ ಕರೆದೊಯ್ಯುತ್ತಿದ್ದರು. ಯುವಕರನ್ನು ಬೆತ್ತಲೆಗೊಳಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳು, ಮನೆಯೊಳಗೆ ನುಗ್ಗುತ್ತಿದ್ದರು. ವಿಡಿಯೊ ಚಿತ್ರೀಕರಿಸಿಕೊಳ್ಳುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಯುವಕರ ಮೊಬೈಲ್ ಕಸಿದುಕೊಳ್ಳುತ್ತಿದ್ದ ಆರೋಪಿಗಳು, ಪೋಷಕರು ಹಾಗೂ ಸ್ನೇಹಿತರ ಸಂಪರ್ಕ ಸಂಖ್ಯೆಗಳನ್ನು ತಿಳಿದುಕೊಳ್ಳುತ್ತಿದ್ದರು. ‘ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದೆಯಾ? ಬಟ್ಟೆ ಬಿಚ್ಚಿ ಮೆರವಣಿಗೆ ಮಾಡುತ್ತೇನೆ. ಅಕ್ರಮ ಸಂಬಂಧ ವಿಷಯವನ್ನು ಪೋಷಕರು ಹಾಗೂ ಸ್ನೇಹಿತರಿಗೆ ತಿಳಿಸುತ್ತೇವೆ. ವಿಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಪ್‌ಲೋಡ್ ಮಾಡುತ್ತೇವೆ’ ಎಂಬುದಾಗಿ ಬೆದರಿಸುತ್ತಿದ್ದರು.’

‘ಮನೆಯಿಂದ ಬಿಟ್ಟು ಕಳುಹಿಸಬೇಕಾದರೆ ಹಣ ನೀಡುವಂತೆ ಆರೋಪಿಗಳು ಒತ್ತಾಯಿಸುತ್ತಿದ್ದರು. ಮರ್ಯಾದೆಗೆ ಹೆದರಿ ಯುವಕರು, ಹಣ ನೀಡಿ ಹೋಗುತ್ತಿದ್ದರು’ ಎಂದು ಹೇಳಿದರು.

‘ತಿಂಗಳ ಹಿಂದೆಯಷ್ಟೇ ಆರೋಪಿಗಳ ಹನಿಟ್ರ್ಯಾಪ್‌ ಜಾಲಕ್ಕೆ ಸಿಲುಕಿದ್ದ ವೈಟ್‌ಫೀಲ್ಡ್‌ ನಿವಾಸಿಯೊಬ್ಬರು ₹ 50 ಸಾವಿರ ನೀಡಿದ್ದರು. ಇದಾದ ನಂತರವೂ ಆರೋಪಿಗಳು ಹಣಕ್ಕಾಗಿ ಪೀಡಿಸುತ್ತಿದ್ದರು. ನೊಂದ ಯುವಕ, ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ತಿಳಿಸಿದರು.

₹ 30 ಲಕ್ಷ ಸುಲಿಗೆ: ‘ಆರೋಪಿಗಳು ಹಲವು ತಿಂಗಳಿನಿಂದ ಕೃತ್ಯ ಎಸಗುತ್ತಿದ್ದರು. ಹಲವು ಯುವಕರನ್ನು ಬೆದರಿಸಿ ಇದುವರೆಗೂ ₹ 30 ಲಕ್ಷ ಸುಲಿಗೆ ಮಾಡಿರುವುದು ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಯಾಸೀನ್
ಯಾಸೀನ್
ಶರಣಪ್ರಕಾಶ್
ಶರಣಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT