ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಎನ್‌ಕೌಂಟರ್‌ಗೆ 16 ನಕ್ಸಲರು ಬಲಿ

Last Updated 23 ಏಪ್ರಿಲ್ 2018, 3:31 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿ ಪೊಲೀಸರು ಭಾನುವಾರ ನಡೆಸಿದ ಎನ್‌ಕೌಂಟರ್‌ನಲ್ಲಿ 16 ಮಂದಿ ನಕ್ಸಲರು ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಮೃತರಲ್ಲಿ ಜಿಲ್ಲಾ ಮಟ್ಟದ ನಕ್ಸಲ್‌ ಕಮಾಂಡರ್‌ಗಳಾದ ಸಾಯಿನಾಥ್‌ ಮತ್ತು ಸಿನು ಅಲಿಯಾಸ್‌ ಶ್ರೀಕಂಠ ಕೂಡ ಸೇರಿರುವ ಸಾಧ್ಯತೆ ಇದೆ’ ಎಂದು ಐಜಿಪಿ ಶರದ್‌ ಶೆಲ್ಲಾರ್‌ ತಿಳಿಸಿದ್ದಾರೆ.

‘ಗಡ್‌ಚಿರೋಲಿ ಪೊಲೀಸರ ಸಿ–60 ಕಮಾಂಡೊ ತಂಡ ಛತ್ತೀಸಗಡದ ಬಿಜಾಪುರ ಜಿಲ್ಲೆಯ ಗಡಿಪ್ರದೇಶದಲ್ಲಿರುವ ಕಾಸನಸುರ್‌ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯನಡೆಸುತ್ತಿದ್ದಾಗ, ನಕ್ಸಲರೊಂದಿಗೆ ಗುಂಡಿನ ಚಕಮಕಿ ನಡೆದಿದೆ. 12 ಮಂದಿ ನಕ್ಸಲರ ಮೃತದೇಹಗಳು ಈಗಾಗಲೇ ಪತ್ತೆಯಾಗಿವೆ’ ಎಂದು ಪೊಲೀಸ್‌ ಮಹಾನಿರ್ದೇಶಕ ಸತೀಶ್‌ ಮಾಥುರ್‌ ಹೇಳಿದ್ದಾರೆ.

ಎನ್‌ಐಎ: ನಕ್ಸಲರಿಗಾಗಿ ಪ್ರತ್ಯೇಕ ವಿಭಾಗ

ನವದೆಹಲಿ: ಉಗ್ರರು ಮತ್ತು ನಕ್ಸಲರಿಗೆ ಹಣಕಾಸು ಪೂರೈಕೆ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣಗಳ ಮೇಲೆ ನಿಗಾ ವಹಿಸಲು ರಾಷ್ಟ್ರೀಯ ತನಿಖಾ ದಳದಲ್ಲಿ (ಎನ್‌ಐಎ) ಪ್ರತ್ಯೇಕ ವಿಭಾಗವೊಂದು ಆರಂಭವಾಗಲಿದೆ. ಕೇಂದ್ರ ಗೃಹ ಸಚಿವಾಲಯವು ಇತ್ತೀಚೆಗೆ ಇದಕ್ಕೆ ಒಪ್ಪಿಗೆ ನೀಡಿದೆ.

ಹಣ ಅಕ್ರಮ ವರ್ಗಾವಣೆಯಲ್ಲಿ ತೊಡಗಿರುವ ನಕ್ಸಲ್ ನಾಯಕರು ಹಾಗೂ ಅವರ ಬಗ್ಗೆ ಸಹಾನುಭೂತಿ ಹೊಂದಿದವರ ಮೇಲೆ ಈ ತಂಡವು ನಿಗಾ ಇಡಲಿದೆ. ನಕ್ಸಲ್ ಮುಖಂಡರು ತಮ್ಮ ಮಕ್ಕಳ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಹಣ ವ್ಯಯಿಸುತ್ತಿದ್ದಾರೆ ಎಂಬ ಆರೋಪವಿದೆ.

ಇದೇ ಫೆಬ್ರುವರಿಯಲ್ಲಿ ಜಾರ್ಖಂಡ್‌ನ ಮಾವೊವಾದಿ ನಾಯಕ ಸಂದೀಪ್ ಯಾದವ್‌ಗೆ ಸೇರಿದ ₹86 ಕೋಟಿ ಆಸ್ತಿಯನ್ನು ಜಾರಿ ನಿರ್ದೇಶನಾಲಯವು ಜಪ್ತಿ ಮಾಡಿತ್ತು. ಜೊತೆಗೆ ಬಿಹಾರದ ನಕ್ಸಲ್ ಮುಖಂಡರಾದ ಪ್ರದುಮನ್ ಶರ್ಮಾ ಹಾಗೂ ಪ್ರಮೋದ್ ಶರ್ಮಾ ಅವರಿಗೆ ಸೇರಿದ ₹68 ಕೋಟಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಉಗ್ರರಿಗೆ ಹಣ ಸರಬರಾಜು ಆರೋಪದ ಮೇಲೆ ಕಾಶ್ಮೀರಿ ಪ್ರತ್ಯೇಕತಾವಾದಿಗಳನ್ನು ಎನ್‌ಐಎ ಇತ್ತೀಚೆಗೆ ವಿಚಾರಣೆಗೆ ಒಳಪಡಿಸಿ, ಹಲವರನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT