ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಲುವೆಗಳಲ್ಲಿ ಇಂಗುಗುಂಡಿ ಕಡ್ಡಾಯ: ಬಿಬಿಎಂಪಿ, ಬಿಡಿಎಗೆ ಮತ್ತೊಮ್ಮೆ ಸೂಚನೆ

Published 7 ಜೂನ್ 2024, 23:40 IST
Last Updated 7 ಜೂನ್ 2024, 23:40 IST
ಅಕ್ಷರ ಗಾತ್ರ

ಬೆಂಗಳೂರು: ರಸ್ತೆ ಬದಿ ಚರಂಡಿ ಹಾಗೂ ಮಳೆ ನೀರು ಹರಿಯುವ ಬೃಹತ್‌ ಕಾಲುವೆಗಳ ತಳಭಾಗದಲ್ಲಿ ಕಾಂಕ್ರೀಟ್‌ ಹಾಕಬಾರದು ಮತ್ತು ಮಳೆನೀರು ಇಂಗಲು ವ್ಯವಸ್ಥೆ ರೂಪಿಸಬೇಕು ಎಂದು ಬಿಬಿಎಂಪಿ ಹಾಗೂ ಬಿಡಿಎಗೆ ಮತ್ತೊಮ್ಮೆ ತಾಕೀತು ಮಾಡಲಾಗಿದೆ.

ಸುವರ್ಣಮುಖಿ ನದಿ ಜಲಾನಯನ ಪುನಶ್ಚೇತನ ಯೋಜನೆಯ ವ್ಯಾಪ್ತಿಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಪ್ರದೇಶಗಳಿದ್ದು, ಈ ಇಲಾಖೆಗಳು ತಮ್ಮ ಸುಪರ್ದಿಯಲ್ಲಿರುವ ಪ್ರದೇಶಗಳಲ್ಲಿ ಮಳೆ ನೀರು ಇಂಗುವಂತೆ ಚರಂಡಿಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಅಭಿವೃದ್ಧಿ ಆಯುಕ್ತೆ ಶಾಲಿನಿ ರಜನೀಶ್‌ ಸೂಚಿಸಿದ್ದಾರೆ.

ನಗರದ ದಕ್ಷಿಣ ತಾಲ್ಲೂಕಿನ ಬಹುತೇಕ ಪ್ರದೇಶದ ಮಳೆ ನೀರು ಸುವರ್ಣಮುಖಿ ನದಿಗೆ ಹರಿಯುತ್ತದೆ. ಬಿಬಿಎಂಪಿ ಹಾಗೂ ಬಿಡಿಎ ಪ್ರದೇಶ ಈ ವ್ಯಾಪ್ತಿಯಲ್ಲಿ ಹೆಚ್ಚಿದ್ದು, ನಗರದಲ್ಲಿ ಬೀಳುವ ಮಳೆ ನೀರನ್ನು ಚರಂಡಿಗಳಲ್ಲಿ ಇಂಗಿಸಲು, ‘ಇಂಗು ಗುಂಡಿಗಳನ್ನು’ ನಿರ್ಮಿಸಬೇಕು. ಇನ್ನು ಮುಂದೆ ಹೊಸದಾಗಿ ಚರಂಡಿಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ  ಕೆಳಭಾಗದಲ್ಲಿ ಕಾಂಕ್ರೀಟ್‌ ಹಾಕಲೇಬಾರದು ಎಂದು ತಾಕೀತು ಮಾಡಲಾಗಿದೆ.

ಚರಂಡಿಗಳು ಹಾಗೂ ಬೃಹತ್‌ ಕಾಲುವೆಗಳಿಂದ ಮಳೆ ನೀರು ಜಲಮೂಲಗಳಿಗೆ ಹರಿಯುತ್ತದೆ. ಹೀಗಾಗಿ ಪ್ಲಾಸ್ಟಿಕ್‌, ಒಳಚರಂಡಿ ನೀರು ಹಾಗೂ ಘನತ್ಯಾಜ್ಯ ವಸ್ತುಗಳು ಚರಂಡಿಗಳಿಗೆ ಸೇರದಂತೆ ಖಚಿತಪಡಿಸಿಕೊಳ್ಳಬೇಕು. ಜಲಮೂಲಗಳಿಗೆ ಅಡ್ಡಿ ಉಂಟು ಮಾಡುವ ಎಲ್ಲ ರೀತಿಯ ನಿರ್ಮಾಣಗಳನ್ನೂ ತೆರವುಗೊಳಿಸಿ, ಮಳೆ ನೀರು ಸಂಗ್ರಹದ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ಬಿಬಿಎಂಪಿಯ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್‌ ಅವರು ಜಲಮೂಲಗಳಿಗೆ ಘನತ್ಯಾಜ್ಯ ಬಾರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಎಸ್‌ಟಿಪಿ ಸ್ಥಾಪನೆ: ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ಒಳಚರಂಡಿ ನೀರನ್ನು ಪ್ರದೇಶವಾರು ನಿಯಂತ್ರಣ ಮಾಡುವುದು ಅಗತ್ಯವಾಗಿದೆ. ಜನವಸತಿ ಪ್ರದೇಶಗಳಲ್ಲಿ ಎಲ್ಲರೂ ಒಳಚರಂಡಿ ಸಂಪರ್ಕವನ್ನು ಹೊಂದಿರುವ ಬಗ್ಗೆ ಜಲಮಂಡಳಿ ಖಚಿತಪಡಿಸಿಕೊಳ್ಳಬೇಕು. ಒಳಚರಂಡಿ ನೀರನ್ನು ತೆರೆದ ಕಾಲುವೆಗೆ ಹರಿಸುವ ಮುನ್ನ ಅದನ್ನು ಸಂಸ್ಕರಿಸಿಯೇ ಹರಿಸಬೇಕು. ಅದಕ್ಕಾಗಿ ಅಗತ್ಯವಿರುವೆಡೆ ತ್ಯಾಜ್ಯ ನೀರು ಸಂಸ್ಕರಣೆ ಘಟಕಗಳನ್ನು (ಎಸ್‌ಟಿಪಿ) ನಿರ್ಮಿಸಬೇಕು ಎಂದು ಜಲಮಂಡಳಿಗೆ ಆದೇಶಿಸಲಾಗಿದೆ.

ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಯಾವುದೇ ರೀತಿಯ ಹೆಚ್ಚಿನ ಅನುದಾನವನ್ನು ನಿರೀಕ್ಷಿಸದೆ, ಲಭ್ಯವಿರುವ ಅನುದಾನದಲ್ಲೇ ಈ ಎಲ್ಲ ಕಾರ್ಯಗಳನ್ನು ಅನುಷ್ಠಾನಗೊಳಿಸಬೇಕು. ಒಂದು ತಿಂಗಳಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಅನುಷ್ಠಾನ ಕಾರ್ಯ ಆರಂಭಿಸಬೇಕು ಎಂದು ಮೇ 17ರಂದೇ ಆದೇಶಿಸಲಾಗಿದೆ.

13,873 ಕಿ.ಮೀ; ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಸ್ತೆ 860 ಕಿ.ಮೀ; ಮಳೆನೀರು ಹರಿಯುವ ಬೃಹತ್‌ ಕಾಲುವೆ 5,500 ಕಿ.ಮೀ; ಬಿಡಿಎ ವ್ಯಾಪ್ತಿಯ ರಸ್ತೆ
ಎನ್‌ಜಿಟಿ ಆದೇಶ ಪಾಲನೆಯಾಗುತ್ತಿಲ್ಲ!
‘ಮಳೆನೀರು ಹರಿಯುವ ಕಾಲುವೆ ಹಾಗೂ ಚರಂಡಿಗಳಿಗೆ ತಳಭಾಗದಲ್ಲಿ ಕಾಂಕ್ರೀಟ್‌ ಹಾಕಬಾರದು. ಬಾಕ್ಸ್‌ ಟೈಪ್‌ ಅಥವಾ ಯು ಆಕಾರದಲ್ಲಿ ಕಾಂಕ್ರೀಟ್‌ ಚರಂಡಿಗಳನ್ನು ನಿರ್ಮಾಣ ಮಾಡಬಾರದು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಆದೇಶ ಹೊರಡಿಸಿದೆ. ಆದರೆ ನಗರದಲ್ಲಿ ಬಿಬಿಎಂಪಿ ಬಿಡಿಎ ಸೇರಿದಂತೆ ಯಾವ ಇಲಾಖೆಗಳೂ ಈ ಆದೇಶವನ್ನು ಪಾಲಿಸುತ್ತಿಲ್ಲ. ಎರಡು ಬದಿ ವಾಲ್‌ಗಳನ್ನು ನಿರ್ಮಿಸಿದರೆ ಕಾಮಗಾರಿಗೆ ಹೆಚ್ಚಿನ ಕಾಳಜಿ ಅಗತ್ಯವಿರುತ್ತದೆ. ಚರಂಡಿಗಳನ್ನು ಬಾಕ್ಸ್‌ ಅಥವಾ ಯು ಆಕಾರದಲ್ಲಿ ಕಾಂಕ್ರೀಟ್‌ ಹಾಕಿ ನಿರ್ಮಿಸುವುದು ಸುಲಭ. ಹೀಗಾಗಿ ಎನ್‌ಜಿಟಿ ಆದೇಶವನ್ನು ಹಿರಿಯ ಎಂಜಿನಿಯರ್‌ಗಳೂ ಲೆಕ್ಕಕ್ಕೆ ಇರಿಸಿಕೊಂಡಿಲ್ಲ’ ಎಂದು ಬಿಡಿಎ ಹಾಗೂ ಬಿಬಿಎಂಪಿ ಎಂಜಿನಿಯರ್‌ಗಳು ತಿಳಿಸಿದರು.
ಕೋಟಿಗೂ ಹೆಚ್ಚು ಇಂಗುಗುಂಡಿ ಸಾಧ್ಯ!
‘ಯಡಿಯೂರು ವಾರ್ಡ್‌ನಲ್ಲಿರುವ ರಸ್ತೆ ಚರಂಡಿಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇದರಿಂದ ಮಳೆ ನೀರು ಹರಿವಿನ ಪ್ರಮಾಣ ಕಡಿತವಾಗುವ ಜೊತೆಗೆ ಅಂತರ್ಜಲ ಕೂಡ ವೃದ್ಧಿಯಾಗಿದೆ. ಇದೇ ರೀತಿ ನಗರದ ಎಲ್ಲೆಡೆಯೂ ಕೋಟ್ಯಂತರ ಇಂಗುಗುಂಡಿಗಳನ್ನು ನಿರ್ಮಿಸಬಹುದು. ಆದರೆ ಎಲ್ಲೆಡೆ ಇಂತಹ ಕಾಮಗಾರಿ ನಡೆದಿಲ್ಲ. ಸ್ಥಳೀಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯನುಸಾರ ಕಾಮಗಾರಿ ನಡೆಯುತ್ತದೆ. ಯಾರೂ ಪರಿಶೀಲನೆ ಮಾಡುವುದಿಲ್ಲ’ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲೇ ಸುಮಾರು 13 ಸಾವಿರ ಕಿ.ಮೀಗೂ ಹೆಚ್ಚು ಉದ್ದದ ರಸ್ತೆಯಿದ್ದು ಎರಡೂ ಬದಿ ಸೇರಿದಂತೆ 26 ಸಾವಿರ ಕಿ.ಮೀ ಆಗುತ್ತದೆ. ಪ್ರತಿ ಕಿ.ಮೀಗೆ ಕನಿಷ್ಠ 5 ಇಂಗುಗುಂಡಿಗಳನ್ನು ನಿರ್ಮಿಸಿದರೂ 1 ಕೋಟಿಗೂ ಹೆಚ್ಚು ಇಂಗುಗುಂಡಿಗಳಾಗುತ್ತವೆ. ಇವುಗಳಿಂದ ಪ್ರತಿ ಮಳೆಯಲ್ಲೂ ಕೋಟ್ಯಂತರ ಲೀಟರ್ ನೀರನ್ನು ಭೂಮಿಗೆ ಇಂಗಿಸಬಹುದಾಗಿದೆ. ಇನ್ನು ಬಿಡಿಎ ಬಿಎಂಆರ್‌ಡಿಎ ನಗರ ಜಿಲ್ಲೆಯ ರಸ್ತೆ ಬದಿಯ ಚರಂಡಿಗಳಲ್ಲೆಲ್ಲ ಇಂಗುಗುಂಡಿಗಳನ್ನು ನಿರ್ಮಿಸಿದರೆ ಅಂತರ್ಜಲ ಸಮೃದ್ಧಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT